ಗುರುವಾರ , ನವೆಂಬರ್ 14, 2019
27 °C

ಗ್ರಾಮದ ಸಮಗ್ರ ಮಾಹಿತಿ ವಿಕಿಪೀಡಿಯ ಮಾದರಿಯಲ್ಲಿ ಅಂತರ್ಜಾಲಕ್ಕೆ: ಸಿ.ಟಿ ರವಿ

Published:
Updated:

ಧಾರವಾಡ: ಗ್ರಾಮದ ಇತಿಹಾಸ, ಸಂಸ್ಕೃತಿ, ಪರಂಪರೆ ಸಮಗ್ರ ಮಾಹಿತಿಯನ್ನು ವಿಕಿಪೀಡಿಯ ಮಾದರಿಯಲ್ಲಿ ಅಂತರ್ಜಾಲಕ್ಕೆ ಅಳವಡಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಖಾತೆ ಸಚಿವರಾದ ಸಿ.ಟಿ.ರವಿ ಹೇಳಿದರು 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ 359 ಕಂದಾಯ ಗ್ರಾಮಗಳೂ ಸೇರಿ ರಾಜ್ಯದ ಎಲ್ಲಾ ಗ್ರಾಮಗಳ ಅಧ್ಯಯನ ಕಾರ್ಯವನ್ನು ವಿಶ್ವವಿದ್ಯಾಲಯ, ಮಹಾವಿದ್ಯಾಲಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿಗಳನ್ನು ನಾಲ್ಕು ಗೋಡೆಯ ಆಚೆಗೂ ಶಿಕ್ಷಣ, ಸಂಶೋಧನೆ ಕೈಗೊಳ್ಳಲು ಅವಕಾಶ ಕಲ್ಪಿಸುವ ಆಶಯದೊಂದಿಗೆ ಬರುವ ಡಿಸೆಂಬರ್‌ನ ಶನಿವಾರ, ರವಿವಾರಗಳಂದು ವಿದ್ಯಾರ್ಥಿಗಳ ಸಹಯೋಗದಲ್ಲಿ ಈ ಕಾರ್ಯ ಕೈಗೊಳ್ಳಲಾಗುವುದು. ಗೆಜೆಟಿಯರ್‌ನಲ್ಲಿ ಬಿಟ್ಟು ಹೋಗಿರುವ ಅಂಶಗಳನ್ನು ಸಂಗ್ರಹಿಸಿ ವಿಕಿಪೀಡಿಯ ಮಾದರಿಯಲ್ಲಿ ಅಂತರ್ಜಾಲಕ್ಕೆ ಅಳವಡಿಸಲಾಗುವುದು. ಹಿರಿಯರು, ಅನುಭವಿಗಳು, ತಜ್ಞರು ಆ ಮಾಹಿತಿಗಳನ್ನು ಸಂಪಾದನೆ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ, ಗಂಗೂಬಾಯಿ ಹಾನಗಲ್ ಸ್ಮಾರಕ, ಪ್ರವಾಸೋದ್ಯಮ ಇಲಾಖೆ ಹಾಗೂ ಧಾರವಾಡದಲ್ಲಿರುವ ಟ್ರಸ್ಟುಗಳ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು.

ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಸಿಇಓ ಡಾ.ಬಿ.ಸಿ.ಸತೀಶ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಹೆಚ್.ಚನ್ನೂರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)