ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಬೇಡ್ಕರ್ ಸಂವಿಧಾನ ಬರೆದಿಲ್ಲ’ ಎಂದು ಸುತ್ತೋಲೆ: ಅಧಿಕಾರಿಗಳ ವಿರುದ್ಧ ಆಕ್ರೋಶ

ಶಿಕ್ಷಣ ಇಲಾಖೆಯ ವಿವಾದಾತ್ಮಕ ಸುತ್ತೋಲೆಗೆ ದಲಿತ ಸಂಘಟನೆಗಳ ಖಂಡನೆ
Last Updated 14 ನವೆಂಬರ್ 2019, 12:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಭಾರತದ ಸಂವಿಧಾನವನ್ನು ಡಾ.ಬಿ.ಆರ್. ಅಂಬೇಡ್ಕರ್ ಬರೆದಿಲ್ಲ’ ಎಂಬ ಸುತ್ತೋಲೆ ಮೂಲಕ, ವಿವಾದ ಹುಟ್ಟುಹಾಕಿದ ಶಿಕ್ಷಣ ಇಲಾಖೆಯ ನಿರ್ದೇಶಕರು ಹಾಗೂ ಆಯುಕ್ತರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ, ವಿವಿಧ ದಲಿತ ಸಂಘಟನೆಗಳು ಹುಬ್ಬಳ್ಳಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದವು.

ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ದಲಿತ ಮುಖಂಡರು, ಶಿಕ್ಷಣ ಇಲಾಖೆ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಹಿರಿಯ ದಲಿತ ಮುಖಂಡ ಪಿತಾಂಬ್ರಪ್ಪ ಬೀಳಾರ, ‘ಅಂಬೇಡ್ಕರ್ ವಿರುದ್ಧ ಅಪಪ್ರಚಾರ ಮಾಡುವ ಸುತ್ತೋಲೆಗಳನ್ನು ಹೊರಡಿಸುವ ಮೂಲಕ, ಬಿಜೆಪಿ ಸರ್ಕಾರ ಮುಗ್ಧ ಮಕ್ಕಳ ಮನಸ್ಸಿನಲ್ಲಿ ವಿಷದ ಬೀಜ ಬಿತ್ತುತ್ತಿದೆ. ಇದಕ್ಕೆ ಶಿಕ್ಷಣ ಇಲಾಖೆಯ ಆಯಕಟ್ಟಿನ ಜಾಗದಲ್ಲಿರುವ ಅಧಿಕಾರಿಗಳ ಕುಮ್ಮಕ್ಕು ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅನಗತ್ಯವಾಗಿ ವಿವಾದ ಹುಟ್ಟು ಹಾಕುವ ಇಂತಹ ಸುತ್ತೋಲೆ ಬರಲು ಕಾರಣವಾದ, ಸಿಎಂಸಿಎ ಎಂಬ ಸಾಮಾಜಿಕ ಸೇವಾ ಸಂಸ್ಥೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಹೆಚ್ಚುವರಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಉತ್ತರ ಕರ್ನಾಟಕ ಸಮತಾ ಸೈನಿಕ ದಳ, ಬಾಬಾ ಸಾಹೇಬ್ ಅಂಬೇಡ್ಕರ್ ಯುವಜನ ಸುಧಾರಣಾ ಸಮಿತಿ, ಛಲವಾದಿ ಯುವ ಸಮಿತಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

ದಲಿತ ಮುಖಂಡರಾದ ತಮ್ಮಣ್ಣ ಮಾದಾರ, ಶಂಕರ ಅಜಮನಿ, ಮಂಜುನಾಥ ಗುಡಿಮನಿ, ಗಂಗಾಧರ ಪೆರೂರ, ಸೋಮು ಹಂಜಗಿ, ಬಸವರಾಜ ಛಲವಾದಿ, ಮಲ್ಲಿಕಾರ್ಜುನ ಬಿಳಾರ, ಹನುಮಂತಪ್ಪ ಹುನ್ನೂರ, ದೇವೇಂದ್ರಪ್ಪ ಇಟಗಿ, ಶಮಿಅಹ್ಮದ ಮುಲ್ಲಾ, ಪಕ್ಕಾಣ್ಣಾ ದೊಡ್ಡಮನಿ, ನಿರ್ಮಲಾ ಹಂಜಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT