ಬುಧವಾರ, ನವೆಂಬರ್ 13, 2019
22 °C

ಬಾಯ್ತೆರೆದ ಕೊಳವೆ ಬಾವಿ: ಪಾಲಿಕೆ ನಿರ್ಲಕ್ಷ್ಯ

Published:
Updated:
Prajavani

‌ಹುಬ್ಬಳ್ಳಿ: ಇಲ್ಲಿನ ಮಂಜುನಾಥನಗರದ ಗಣೇಶ ದೇವಸ್ಥಾನದ ಬಳಿ ಇರುವ ಕೊಳವೆ ಬಾವಿಯೊಂದು, ಹಲವು ದಿನಗಳಿಂದ ತೆರೆದ ಸ್ಥಿತಿಯಲ್ಲಿದೆ. ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಈ ಬಾವಿ ಅಪಾಯವನ್ನು ಆಹ್ವಾನಿಸುತ್ತಿದ್ದರೂ, ಪಾಲಿಕೆಯವರು ಅದನ್ನು ಸರಿಯಾಗಿ ಮುಚ್ಚದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಪಾಲಿಕೆ ವತಿಯಿಂದ ಕೊರೆದಿದ್ದ ಕೊಳವೆ ಬಾವಿ ಇಲ್ಲಿನ ಜನರ ನೀರಿನ ಮೂಲವಾಗಿತ್ತು. ಆರು ತಿಂಗಳ ಹಿಂದೆ ವಾಹನವೊಂದು ಅದಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅದಕ್ಕೆ ಅಳವಡಿಸಿದ್ದ ಹ್ಯಾಂಡ್‌ ಪಂಪ್ ಹಾನಿಗೊಂಡಿತ್ತು.

‘ಸ್ಥಳೀಯರು ನೀಡಿದ ದೂರಿನ ಮೇರೆಗೆ ಪಾಲಿಕೆಯವರು ಹ್ಯಾಂಡ್‌ ಪಂಪ್‌ ಬಿಚ್ಚಿಕೊಂಡು ದುರಸ್ತಿಗೆ ಕೊಂಡೊಯ್ದರು. ಹೋಗುವಾಗ ಕೊಳವೆ ಬಾವಿಗೆ ಪ್ಲಾಸ್ಟಿಕ್ ಚೀಲ ಕಟ್ಟಿ, ಮೇಲ್ಭಾಗದಿಂದ ಕಲ್ಲನ್ನು ಇಟ್ಟಿದ್ದರು. ಆದರೆ, ಆರು ತಿಂಗಳಾದರೂ ಹ್ಯಾಂಡ್ ಪಂಪ್‌ ತಂದು ಮತ್ತೆ ಅಳವಡಿಸಲಿಲ್ಲ. ಇತ್ತೀಚೆಗೆ ಸುರಿದ ಗಾಳಿ, ಮಳೆಯಿಂದ ಬಾವಿಗೆ ಕಟ್ಟಿದ್ದ ಪ್ಲಾಸ್ಟಿಕ್ ಹರಿದು, ಕಲ್ಲು ಪಕ್ಕಕ್ಕೆ ಸರಿದಿದೆ’ ಎಂದು ಜೆ.ಸಿ. ನಗರ ನಿವಾಸಿಗಳ ಸಂಘದ ಕಾರ್ಯದರ್ಶಿ ಮಹೇಶ ಪತ್ತಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇವಸ್ಥಾನದ ಪಕ್ಕವೇ ಇರುವ ಕೊಳವೆ ಬಾವಿ ಸಮೀಪವೇ ಮಕ್ಕಳು ಆಟವಾಡುತ್ತಿರುತ್ತಾರೆ. ಹಾಗಾಗಿ, ಅಪಾಯ ಸಂಭವಿಸುವುದಕ್ಕೆ ಮುಂಚೆ ಪಾಲಿಕೆಯವರು ಎಚ್ಚೆತ್ತುಕೊಂಡು ಕೊಳವೆ ಬಾವಿಗೆ ಹ್ಯಾಂಡ್ ಪಂಪ್ ಅಳವಡಿಸಬೇಕು. ಇಲ್ಲದಿದ್ದರೆ, ಬಾವಿಯನ್ನು ಸೂಕ್ತ ರೀತಿಯಲ್ಲಿ ಮುಚ್ಚಬೇಕು’ ಎಂದು ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)