ಶುಕ್ರವಾರ, ಆಗಸ್ಟ್ 12, 2022
24 °C
ಕಿಮ್ಸ್‌ ಬಳಿಯ ಗುಂಡಿಯಲ್ಲಿ ಹೊರ ಚಾಚಿರುವ ಸರಳುಗಳು

ಹುಬ್ಬಳ್ಳಿ ಕೀಮ್ಸ್‌ ಎದುರು ಅಪಾಯ ಆಹ್ವಾನಿಸುವ ಗುಂಡಿ

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಇದು ನಗರದ ಕಿಮ್ಸ್‌ ಎದುರಿನ ರಸ್ತೆ ಬದಿ ನಡೆಯುವವರ, ಬೈಕ್‌ ಓಡಿಸುವವರ ಗಮನಕ್ಕೆ. ಇಲ್ಲಿ ಓಡಾಡುವಾಗ ಕೊಂಚ ಯಾಮಾರಿದರೂ ಚರಂಡಿ ಮೇಲಿನ ಗುಂಡಿಗಳಿಗೆ ಬೀಳೋದು ಖಚಿತ. ಬಿದ್ದರೆ ಅದರಲ್ಲಿ ಹೊರಚಾಚಿಕೊಂಡಿರುವ ಸರಳುಗಳು ಈಚೆ ಹೊಕ್ಕು ಆಚೆ ಹೊರಬರುವುದು ಖಚಿತ. ಇಂಥ ಅಪಾಯಕಾರಿ ಗುಂಡಿಗಳು ಇರೋದು ಹುಬ್ಬಳ್ಳಿ–ಧಾರವಾಡ ನಡುವಿನ ಕಿಮ್ಸ್‌ ವೃತ್ತದ ಬಳಿ.

ಕಿಮ್ಸ್‌ ವೃತ್ತದ ಗಾಂಧೀಜಿ ಪ್ರತಿಮೆಯ ಎದುರಿಗೊಂದು, ಅಲ್ಲಿಂದ ಆಚೆ ಬಲಭಾಗ ದಲ್ಲಿ ಇರುವ ಹನುಮನ ಗುಡಿಗೆ ಮೊದಲು, ದಾಟಿದ ನಂತರ ಒಂದು... ಹೀಗೆ ಮೂರು ಗುಂಡಿಗಳು ಬಾಯ್ದೆರೆದುಕೊಂಡು ದಾರಿ ಹೋಕರಿಗೆ ಅಪಾಯವನ್ನು ಆಹ್ವಾನಿಸುತ್ತಿವೆ. ಗುಂಡಿಗಳನ್ನು ಕಾಟಾಚಾರಕ್ಕೆ ಮುಚ್ಚಲಾದ ಡ್ರೈನೇಜ್‌ ಮುಚ್ಚುಳ, ಕಲ್ಲಿನ ಹಲಗೆಗಳು ಕಾಲಿಗೆ ಎಡತಾಕಿದರೂ ಮುಗ್ಗರಿಸುವುದು ತಪ್ಪಿದ್ದಲ್ಲ.

ಸದಾ ಜನಸಂದಣಿಯಿಂದ ಕೂಡಿರುವ ಕಿಮ್ಸ್‌ ವೃತ್ತದಲ್ಲಿ ಎಷ್ಟುಹೊತ್ತಿಗೆ ಯಾವ ಕಡೆಗಳಿಂದ ವಾಹನ ನುಗ್ಗುತ್ತದೆ ಎಂದು ಹೇಳಲಾಗದು. ಅದರಲ್ಲೂ ಬೈಕ್‌ ಸವಾರರು ಒನ್‌ ವೇಯನ್ನು ಯಾಮಾರಿಸಿ ಹನುಮಂತನ ಗುಡಿ ಎದುರಿಂದ ದಾಟಲು ಹೋಗುತ್ತಾರೆ. ಮಳೆ ಬಂದಾಗ ಸುತ್ತಲಿನ ಪ್ರದೇಶದ ನೀರೆಲ್ಲ ಒಗ್ಗೂಡಿ ಈ ಗುಂಡಿಗಳಲ್ಲಿ ನುಗ್ಗುತ್ತದೆ. ರಸ್ತೆ ಜಲಾವೃತವಾದಾಗ ಈ ಗುಂಡಿಗಳು ಗಮನಕ್ಕೆ ಬಾರವು. ತಪ್ಪು ಮಾರ್ಗದಲ್ಲಿ ನುಸುಳುವ ಭರದಲ್ಲಿ ಬೈಕ್‌ನ ಗಾಲಿಗಳು ಎಲ್ಲಿಯಾದರೂ ಗುಂಡಿಗಳಲ್ಲಿ ಇಳಿದರೆ ಅಪಾಯ ಕಟ್ಟಿಟ್ಟ ಬುತ್ತಿ.

‘ಮೊದಮೊದಲು ಕೊಂಚ ತೆರೆದುಕೊಂಡಿದ್ದ ಈ ಹೊಂಡಗಳು ಇತ್ತೀಚೆಗೆ ಇನ್ನಷ್ಟು ಅಪಾಯಕಾರಿಯಾಗಿ ತೆರೆದುಕೊಂಡಿವೆ. ಪಾದಚಾರಿಗಳ ಕಾಲು, ಬೈಕ್‌ನ ಚಕ್ರಗಳು ಇಳಿದರೆ ಅಪಾಯ ತಪ್ಪಿದಲ್ಲ’ ಎಂದು ಇದೇ ಮಾರ್ಗದಲ್ಲಿ ನಡೆದು ಬಂದು ಹನುಮನಿಗೊಂದು ನಮಸ್ಕಾರ ಹಾಕಿ ಕಿಮ್ಸ್‌ ಆವರಣಕ್ಕೆ ತೆರಳುವ ವಾಯುವಿಹಾರಿ ಪ್ರಕಾಶ ಅವರು ಹೇಳಿದರು.

‘ಕಿಮ್ಸ್‌ ವೃತ್ತದ ಹೈಮಾಸ್ಟ್‌ ದೀಪ ಕೆಟ್ಟಿರುವುದರಿಂದ ಕತ್ತಲೆ ಕವಿದಿರುತ್ತದೆ. ಈ ಪ್ರದೇಶದ ಬೀದಿ ದೀಪಗಳೂ   ತಿಂಗಳಲ್ಲಿ ಒಂದು ವಾರ ಬೆಳಗಿದರೂ ಹೆಚ್ಚೆ. ಲಾಕ್‌ಡೌನ್ ಮುಗಿದು ವಾಹನಗಳ ಓಡಾಟ ಆರಂಭವಾದರೆ ಅಪಾಯ ತಪ್ಪಿದ್ದಲ್ಲ‘ ಎನ್ನುವ ಅವರು,  ಏನಾದರೂ ಅಪಾಯ ಘಟಿಸುವ ಮೊದಲು ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಈ ಗುಂಡಿಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು