ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕಲ್‌ನಲ್ಲಿ ಡಿ.ಸಿ ನಗರ ಪ್ರದಕ್ಷಿಣೆ: ಸ್ವಚ್ಛ ಸರ್ವೇಕ್ಷಣ ಜಾರಿ ಪರಿಶೀಲನೆ

Last Updated 26 ಜನವರಿ 2022, 3:47 IST
ಅಕ್ಷರ ಗಾತ್ರ

ಧಾರವಾಡ: ನಸುಕಿನಲ್ಲೇ ಸೈಕಲ್ ಏರಿ ನಗರದ ವಿವಿಧ ಬಡಾವಣೆ, ಮಾರುಕಟ್ಟೆಯನ್ನು ಸುತ್ತಾಡಿದ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಹಾಗೂ ಪಾಲಿಕೆ ಆಯುಕ್ತ ಡಾ. ಬಿ.ಗೋಪಾಲಕೃಷ್ಣ ಅವರು ಸ್ವಚ್ಛಭಾರತ, ಸ್ವಚ್ಛ ಸರ್ವೇಕ್ಷಣ ಅಭಿಯಾನದ ಪರಿಶೀಲನೆ ನಡೆಸಿದರು.

ಸೂಪರ್‌ ಮಾರುಕಟ್ಟೆಯಲ್ಲಿ ಸುತ್ತಾಡಿದ ಅಧಿಕಾರಿಗಳ ತಂಡ ರಸ್ತೆ ಅತಿಕ್ರಮಿಸಿರುವ ಅನಧಿಕೃತ ಅಂಗಡಿಗಳು ಹಾಗೂ ಗೂಡಂಗಡಿಗಳ ತೆರವು ಕುರಿತು ಪರಿಶೀಲಿಸಿದರು. ಪ್ರತಿದಿನ ತರಕಾರಿ, ಹಣ್ಣು, ಹೂವು ಮುಂತಾದ ವ್ಯಾಪಾರ ನಡೆಸುವ ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು, ಅವರಿಗೆ ಸುಸುಜ್ಜಿತ ಸ್ಥಳಾವಕಾಶ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ನಂತರ ಆಜಾದ್ ಉದ್ಯಾನಕ್ಕೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಹಾಗೂ ಮಾಹಾತ್ಮಗಾಂಧಿ ಪುತ್ಥಳಿಗೆ ಅಲಂಕಾರ ಸೇರಿದಂತೆ, ಉದ್ಯಾನಕ್ಕೆ ಸ್ಮಾರಕದ ಸ್ವರೂಪ ನೀಡಲು ಸಲಹೆ ನೀಡಿದರು.

ಲೈನ್ ಬಜಾರ್, ಸಿಬಿಟಿ, ವಿವೇಕಾನಂದ ವೃತ್ತ, ಟಿಕಾರೆ ರಸ್ತೆಯಲ್ಲಿ ಸುತ್ತಾಡಿ ಕಸ ಚೆಲ್ಲುವ ಕಪ್ಪುಪಟ್ಟಿಗೆ ಸೇರಿದ ಪ್ರದೇಶಗಳನ್ನು ಪರಿಶೀಲಿಸಿದರು. ವ್ಯಾಪಾರಸ್ಥರಲ್ಲಿ, ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವಂತೆ ಸೂಚಿಸಿದರು.

ಸುಭಾಸ ರಸ್ತೆಯಲ್ಲಿ ಪೌರಕಾರ್ಮಿಕರೊಂದಿಗೆ ಚಹಾ ಸೇವಿಸಿ ಅವರ ಅಹವಾಲುಗಳನ್ನು ಆಲಿಸಿದರು. ನಂತರ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಅಧಿಕಾರಿಗಳು, ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆ ಪರಿಶೀಲಿಸಿದರು. ಅಲ್ಲಿಯೇ ಇಡ್ಲಿ ಹಾಗೂ ಪಲಾವ್ ಸೇವಿಸಿದರು. ಗುಣಮಟ್ಟದ ಕುರಿತು ಗ್ರಾಹಕರಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ನಿತೇಶ್ ಕೆ. ಪಾಟೀಲ, ‘ಸ್ವಚ್ಛ ಭಾರತ-ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಅತ್ಯುತ್ತಮ ಸಾಧನೆ ಮಾಡಿ ಕಳೆದ ಸಾಲಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ. ಇನ್ನು ಹೆಚ್ಚಿನ ಸ್ವಚ್ಛತೆ, ಸಾಧನೆ ಮೂಲಕ ಪ್ರಶಸ್ತಿ ಗಳಿಸಲು ಹಾಗೂ ಮಹಾನಗರದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಮಾಡಲು ಪೌರ ಕಾರ್ಮಿಕರು ಸೇರಿದಂತೆ, ಪಾಲಿಕೆಯ ಸಿಬ್ಬಂದಿಯನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು’ ಎಂದರು.

‘ಪಾಲಿಕೆ ವ್ಯಾಪ್ತಿಯಖಾಲಿ ನಿವೇಶನ ಮತ್ತು ಸರ್ಕಾರಿ ಸ್ಥಳಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಎಲ್ಲೆಂದರಲ್ಲಿ ಕಸ ಚೆಲ್ಲುತ್ತಿದ್ದ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿ, ₹5 ಸಾವಿರ ದಂಡವನ್ನು ವಿಧಿಸಲಾಗಿದೆ. ಮಹಾನಗರ ಸ್ವಚ್ಛತೆಗೆ, ಹಸರೀಕರಣಕ್ಕೆ ಮತ್ತು ಸೌಂದರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಜಿಲ್ಲಾಧಿಕಾರಿ ವಿನಂತಿಸಿದರು.

ಪಾಲಿಕೆ ಆಯುಕ್ತ ಡಾ. ಬಿ.ಗೋಪಾಲಕೃಷ್ಣ ಮಾತನಾಡಿ, ‘ಪೌರಕಾರ್ಮಿಕರ ಬೇಡಿಕೆಯಂತೆ ಅವರು ಕೆಲಸ ನಿರ್ವಹಿಸುವ ಸ್ಥಳದ ಹತ್ತಿರವಿರುವ ಕ್ಯಾಂಟೀನ್, ಹೋಟೆಲ್‌ಗಳಿಂದ ಉಪಾಹಾರ ಸರಬರಾಜು ಮಾಡುವ ಕುರಿತು ಪರಿಶೀಲಿಸಲಾಗುವುದು’ ಎಂದರು.

ಪಾಲಿಕೆ ಜಂಟಿ ಆಯುಕ್ತ ಮಾಧವ ಗಿತ್ತೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT