ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಅಕ್ರಮ ನಿಗ್ರಹಿಸಲು ಬ್ಯಾಂಕ್‌ ಖಾತೆಗಳ ಮೇಲೆ ಕಣ್ಣು

ಹುಬ್ಬಳ್ಳಿ ಗೋಕುಲ ಹೊಸ ಬಸ್ ನಿಲ್ದಾಣದಲ್ಲಿ ಮತ ಜಾಗೃತಿ
Last Updated 18 ಏಪ್ರಿಲ್ 2019, 14:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ಸಂಶಯಾಸ್ಪದ 789 ಬ್ಯಾಂಕ್‌ ಖಾತೆಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಈ ಸಂಬಂಧ ಪ್ರತಿ ದಿನದ ಹಣಕಾಸು ವಹಿವಾಟನ್ನು ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

ಗೋಕುಲ ಬಸ್‌ ನಿಲ್ದಾಣದಲ್ಲಿ ಗುರುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ಮತದಾನ ಪ್ರಕ್ರಿಯೆ ಹಾಗೂ ಮತ ಜಾಗೃತಿ ಪ್ರೇರಣೆ ಕುರಿತು ಏರ್ಪಡಿಸಿರುವ ವಿಶೇಷ ವಸ್ತುಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 19 ಪ್ರಕರಣಗಳು ದಾಖಲಾಗಿದ್ದು, ₹ 43 ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂದರು.

₹ 1 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆದ ಯಾವುದೇ ಬ್ಯಾಂಕ್‌ ಖಾತೆಯನ್ನು ಪರಿಶೀಲನೆ ನಡೆಸಲಾಗುತ್ತಿದೆ. ಇದರ ಜೊತೆಗೆ ₹ 10 ಲಕ್ಷಕ್ಕಿಂತ ಹೆಚ್ಚಿನ ಹಣ ವಹಿವಾಟು ಆದರೆ ಅಂತಹ ಖಾತೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ ಎಂದರು.

ಜಿಲ್ಲೆಯಲ್ಲಿ ಏ.23ರಂದು ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಪ್ರತಿಯೊಬ್ಬರು ತಪ್ಪದೆ ಮತ ಚಲಾವಣೆ ಮಾಡಬೇಕು. ಕಳೆದ ಬಾರಿಗಿಂತ ಈ ಸಲ ಗರಿಷ್ಠ ಮತದಾನವಾಗುವಂತೆ ಎಲ್ಲೆಡೆ ಜಾಗೃತಿ ಮೂಡಿಸಲಾಗಿದೆ ಎಂದರು.

ಮತದಾರರಲ್ಲಿ ಜಾಗೃತಿ ಮೂಡಿಸಲು ವಿವಿಧ ಘೋಷ ವಾಕ್ಯಗಳು ಹಾಗೂ ಕಾರ್ಟೂನ್ ಚಿತ್ರಗಳನ್ನು ಬಳಸಿಕೊಂಡು ಸಿದ್ಧಪಡಿಸಲಾಗಿರುವ ಪ್ರಚಾರ ಫಲಕಗಳು ಎಲ್ಲರ ಗಮನ ಸೆಳೆಯುತ್ತಿವೆ.

ಏ.18 ರಿಂದ 20 ರವರೆಗೆ ಮೂರು ದಿನಗಳ ಕಾಲ ಹುಬ್ಬಳ್ಳಿ ನಗರದ ಹೊಸ ಬಸ್ ನಿಲ್ದಾಣದಲ್ಲಿ ವಿಶೇಷ ವಸ್ತುಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ.

ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳನ್ನು ಮೊಬೈಲ್ ಆ್ಯಪ್ ಸಿ-ವಿಜಿಲ್ ಹಾಗೂ ಚುನಾವಣಾ ಆ್ಯಪ್ ಬಳಕೆಯ ವಿಧಾನ ಕುರಿತ ಫಲಕವನ್ನು ಪ್ರದರ್ಶಿಸಲಾಗಿದೆ. ವೋಟ್ ಮಾಡಿದವನೆ ಹೀರೋ, ಮಹಿಳೆಯರಿಗೆ ಪ್ರತ್ಯೇಕ ಸಾಲು, ಅಂಗವಿಕಲರಿಗೆ ಸೌಲಭ್ಯ, ಮತದಾನ ಎಲ್ಲರ ಕರ್ತವ್ಯ ಸೇರಿದಂತೆ ಹಲವು ಮತ ಜಾಗೃತಿಯ ಘೋಷಣೆಗಳನ್ನು ಹಾಗೂ ಮಾಹಿತಿ ಪ್ರಚಾರ ಫಲಕಗಳನ್ನು ಪ್ರದರ್ಶಿಸಲಾಗಿದೆ.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಬಿ.ಸಿ.ಸತೀಶ, ತಹಸೀಲ್ದಾರ್‌ ಶಶಿಧರ ಮಾಡ್ಯಾಳ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ವಾಯವ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಅಶೋಕ ಪಾಟೀಲ, ಉಪ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಪಿ.ಜಿ.ನಾಯ್ಕ್‌, ನಿಲ್ದಾಣಾಧಿಕಾರಿ ಸವಿತಾ ಪಾಟೀಲ, ವಾರ್ತಾ ಇಲಾಖೆ ಕಚೇರಿ ಅಧೀಕ್ಷಕ ವಿನೋದಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT