ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ನೆರವಾದವರಿಗೆ ಜಿಲ್ಲಾಧಿಕಾರಿ ಕೃತಜ್ಞತೆ

ಅತಿವೃಷ್ಟಿಯಿಂದಾಗಿ ಜಿಲ್ಲಾಡಳಿತದಿಂದ ಸರಳ ಸ್ವಾತಂತ್ರ್ಯೋತ್ಸವ ಸಮಾರಂಭ
Last Updated 15 ಆಗಸ್ಟ್ 2019, 14:01 IST
ಅಕ್ಷರ ಗಾತ್ರ

ಧಾರವಾಡ: ನಾಲ್ಕು ವರ್ಷಗಳ ಸತತ ಬರಗಾಲದ ನಂತರ ಸೃಷ್ಟಿಯಾದ ಅತಿವೃಷ್ಟಿಯ ಸಂಕಷ್ಟಕ್ಕೆ ಸಿಲುಕಿದವರ ನೋವಿಗೆ ಸ್ಪಂದಿಸಿ ನೆರವಾದವರಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಕೃತಜ್ಞತೆ ಅರ್ಪಿಸಿದರು.

73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ ಗುರುವಾರ ಮಾತನಾಡಿದ ಅವರು, ‘ಆಗಸ್ಟ್ 1ರಿಂದ 13ರವರೆಗೆ ವಾಡಿಕೆಯಂತೆ 53 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 321 ಮಿ.ಮೀ. ಮಳೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಸಾಕಷ್ಟು ಸಂಕಷ್ಟಗಳು ಎದುರಾದವು. ಸರ್ಕಾರ, ಜಿಲ್ಲಾಡಳಿತ ಹಾಗೂ ಸಾರ್ವಜನಿಕರು ಸಂಕಷ್ಟದಲ್ಲಿರುವವರಿಗೆ ತ್ವರಿತವಾಗಿ ಸ್ಪಂದಿಸಿ, ನೋವುಗಳನ್ನು ಕಡಿಮೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದರು’ ಎಂದರು.

‘ಅತಿಯಾದ ಮಳೆಗೆ ಜಿಲ್ಲೆಯ ನಾಲ್ವರು ಪ್ರಾಣ ಕಳೆದುಕೊಂಡಿದ್ದು ದುರದೃಷ್ಟಕರ. ಈ ಕುಟುಂಬಗಳಿಗೆ ತಲಾ ₹5ಲಕ್ಷ ಪರಿಹಾರ ಒದಗಿಸಲಾಗಿದೆ. 214 ಜಾನುವಾರುಗಳು ಮೃತಪಟ್ಟಿವೆ. ಪರಿಹಾರ ವಿತರಣೆ ಕಾರ್ಯ ಮುಂದುವರಿದಿದೆ. ಈ ಕಾರ್ಯದಲ್ಲಿ ಭೌಗೋಳಿಕ, ಪ್ರಾದೇಶಿಕ ಭಿನ್ನತೆ ಹಾಗೂ ಜಾತಿ–ಮತಗಳ ಭೇದ ಮರೆತು ಸಾಕಷ್ಟು ಜನರು ಸ್ಪಂದಿಸಿದ್ದಾರೆ. ಜಿಲ್ಲಾಡಳಿತದ ಪರಿಹಾರ ಸ್ವೀಕಾರ ಕೇಂದ್ರದಲ್ಲಿ ಸುಮಾರು 800ಕ್ಕೂ ಹೆಚ್ಚು ಸಂಘ, ಸಂಸ್ಥೆಗಳು, ಸಾರ್ವಜನಿಕರು ಸಂತ್ರಸ್ಥರಿಗೆ ಅಪಾರ ಪ್ರಮಾಣದ ಪರಿಹಾರ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ’ ಎಂದರು.

ಚಿಕ್ಕ ಹಾಗೂ ಚೊಕ್ಕದಾದ ಭಾಷಣ ಮಾಡಿದ ಜಿಲ್ಲಾಧಿಕಾರಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಜಿಲ್ಲೆಯ ಗಂಗಾಧರರಾವ್ ದೇಶಪಾಂಡೆ, ಕಡಪ ರಾಘವೇಂದ್ರರಾಯರು,ದಿವಾಕರ್ ಹುಕ್ಕೇರಿಕರ್, ಚೌಡನಾಯಕ, ತಿಮ್ಮಪ್ಪನಾಯಕ, ಮೊಹರೆ ಹನುಮಂತರಾಯರು,ರಾಮಚಂದ್ರ ವಡವಿ,ಮೈಲಾರ ಮಹದೇವಪ್ಪ, ಗದಿಗೆಯ್ಯ ಹೊನ್ನಾಪುರಮಠ, ಆರ್.ಆರ್.ದಿವಾಕರ್, ಉಮಾಬಾಯಿ ಕುಂದಾಪುರ, ಎನ್.ಎಸ್. ಹರ್ಡಿಕರ್, ಹಳ್ಳಿಕೇರಿ ಗುದ್ಲೆಪ್ಪನವರು, ಬಿಂದಾಚಾರ್ಯ ಬುರ್ಲಿ, ಕೆ.ಎಫ್.ಪಾಟಿಲ, ಶಿವರಾಯಪ್ಪ ಮನ್ನವರ, ಶಿವಶಂಕರಪ್ಪ ದೇವಪುರ, ಶಿವಪ್ಪ ನೇಸ್ವಿ, ಗೋವಿಂದಾಚಾರ್ಯ ಅಗ್ನಿಹೋತ್ರಿ, ನರಸಿಂಹ ದಾಬಡೆ ಅವರ ಹೋರಾಟವನ್ನು ನೆನೆದರು.

ಜತೆಗೆ ರಾಷ್ಟ್ರಧ್ವಜ ನಿರ್ಮಾಣದಲ್ಲಿ ಗುಣಮಟ್ಟದ ಖಾದಿ ಬಟ್ಟೆ ಉತ್ಪಾದಿಸುವ ಗರಗ ಹಾಗೂ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಘಗಳ ಕೆಲಸವನ್ನೂ ಪ್ರಶಂಸಿದ ಚೋಳನ್‌, ‘ಈ ನೆಲದ ಹಿರಿಮೆ, ಗರಿಮೆಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ದೇಶದ ಭವಿಷ್ಯವು ನಮ್ಮ ವಿದ್ಯಾರ್ಥಿಗಳು ಮತ್ತು ಯುವಜನಾಂಗವನ್ನು ಅವಲಂಬಿಸಿದೆ. ನಾವೆಲ್ಲ ನಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸುವುದರ ಮೂಲಕ ಭವ್ಯ ಭಾರತವನ್ನು ನಿರ್ಮಿಸಲು ಈ ಸಂದರ್ಭದಲ್ಲಿ ಸಂಕಲ್ಪ ಮಾಡೋಣ’ ಎಂದರು.

ಪೊಲೀಸ್, ಗೃಹ ರಕ್ಷಕ ದಳ, ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಹಾಗೂ ಗೈಡ್ಸ್ ಸೇರಿದಂತೆ ವಿವಿಧ 27 ತುಕಡಿಗಳ ಆಕರ್ಷಕ ಪಥ ಸಂಚಲನ ನಡೆಯಿತು. ಇಬ್ಬರೇ ವಿದ್ಯಾರ್ಥಿಗಳಿರುವುದರಿಂದ ಪ್ರತಿ ವರ್ಷ ಆಕರ್ಷಕ ಪಥಸಂಚಲನ ನಡೆಸುತ್ತಿದ್ದ ಎನ್‌.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯ ಮಕ್ಕಳ ತಂಡ ಈ ಬಾರಿ ಇಲ್ಲದ್ದಿದ್ದು ಎದ್ದು ಕಾಣುತ್ತಿತ್ತು. ಜತೆಗೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿಲ್ಲ.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ ಕೆಂಪೇಗೌಡ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ, ಸದಸ್ಯರಾದ ಕಲ್ಲಪ್ಪ ಪುಡಕಲಕಟ್ಟಿ, ರೇಣುಕಾ ಇಬ್ರಾಹಿಂಪೂರ, ಕರೆಪ್ಪ ಮಾದರ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್ ನಾಗರಾಜ, ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ್, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಎಸ್.ಜಿ.ಕೊರವರ, ಆಹಾರ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT