ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ಮಂಗಳವಾರ, ಏಪ್ರಿಲ್ 23, 2019
31 °C
ಮೂರು ದಶಕಗಳಿಂದ ರಸ್ತೆಯಿಲ್ಲ, ಬಸ್‌ ಬರಲ್ಲ, ನಗರದಲ್ಲಿದ್ದೂ ಸೌಲಭ್ಯ ವಂಚಿತ ದೇವಪ್ರಿಯ ನಗರ

ಮತದಾನ ಬಹಿಷ್ಕಾರಕ್ಕೆ ನಿರ್ಧಾರ

Published:
Updated:
Prajavani

ಹುಬ್ಬಳ್ಳಿ: ಮೂರು ದಶಕಗಳಿಂದ ಒಮ್ಮೆಯೂ ಡಾಂಬರ್‌ ಕಾಣದ ರಸ್ತೆ, ಎಲ್ಲೆಂದರೆಲ್ಲ ಕಸದ ರಾಶಿ, ಮಳೆ ಬಂದರೆ ಮನೆಗಳ ಮುಂದೆಯೇ ಮೊಣಕಾಲದ ಎತ್ತರಕ್ಕೆ ನಿಲ್ಲುವ ನೀರು, ಒಳಚರಂಡಿಯ ನೀರೆಲ್ಲ ಮನೆಯ ಮಂದೆ ಸಂಗ್ರಹವಾಗಿ ಕೆಟ್ಟ ವಾಸನೆ.

ಇದು ಹಳ್ಳಿಯ ಪರಿಸ್ಥಿತಿಯಲ್ಲ. ಉಣಕಲ್‌ ಕ್ರಾಸ್‌ನಿಂದ ಅರ್ಧ ಕಿ.ಮೀ. ದೂರದಲ್ಲಿರುವ ದೇವಪ್ರಿಯ ನಗರದ ವಾಸ್ತವ ಚಿತ್ರಣ. ನಗರದ ಭಾಗವಾಗಿರುವ ಈ ಬಡಾವಣೆಯಲ್ಲಿ ನಗರದ ಯಾವ ಛಾಯೆಯೂ ಕಾಣುವುದಿಲ್ಲ. ನೃಪತುಂಗ ಬೆಟ್ಟದ ಹಿಂಭಾಗದಲ್ಲಿರುವ ಬಡಾವಣೆಯಲ್ಲಿನ ರಸ್ತೆಗಳು ಮಳೆ ಬಂದರೆ ಕೆಸರು ಗದ್ದೆಗಳಾಗುತ್ತವೆ. ಅಂಕುಡೊಂಕಾದ ರಸ್ತೆಯಲ್ಲಿ ವಾಹನ ಸವಾರರು, ಮಕ್ಕಳು ಬಿದ್ದಿದ್ದಕ್ಕೆ ಲೆಕ್ಕವೇ ಇಲ್ಲ. ಕೆಲ ರಸ್ತೆಗಳು ಪ್ರವಾಹಕ್ಕೆ ಕೊಚ್ಚಿ ಹೋದಂತಿವೆ!

30 ವರ್ಷಗಳ ಹಿಂದೆ ಬಡಾವಣೆ ನಿರ್ಮಾಣವಾಗಿದೆ. ಶಾಸಕ ಬಸವರಾಜ ಬೊಮ್ಮಾಯಿ ಅವರು ದೇವಪ್ರಿಯ ನಗರ ಎಂದು ನಾಮಕರಣ ಮಾಡಿದ್ದಾರೆ. ಆದರೆ, ಇದುವರೆಗೂ ಈ ಬಡಾವಣೆಗೆ ಮೂಲಸೌಲಭ್ಯಗಳಿಲ್ಲ. ಪ್ರತಿ ಬಾರಿ ಚುನಾವಣೆ ಬಂದಾಗ ಬರುವ ಅಭ್ಯರ್ಥಿಗಳು, ಚುನಾವಣೆ ಬಳಿಕ ಈ ಕಡೆ ತಿರುಗಿಯೂ ನೋಡಿಲ್ಲ ಎಂಬುದು ಸ್ಥಳೀಯರ ಆಕ್ರೋಶ.

ಆದ್ದರಿಂದ ಸ್ಥಳೀಯರೆಲ್ಲರೂ ಸೇರಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ. ‘ನೋ ರೋಡ್‌, ನೋ ವೋಟ್‌’ ಅಭಿಯಾನ ಆರಂಭಿಸಿ ಬಡಾವಣೆಯಲ್ಲಿ ಭಿತ್ತಿಪತ್ರಗಳನ್ನು ಅಂಟಿಸಲು ಮುಂದಾಗಿದ್ದಾರೆ

‘ಈ ಬಡಾವಣೆಗೆ ಬಂದಾಗ ನನ್ನದೊಂದೇ ಮನೆಯಿತ್ತು. ಆಗ ಬಡಾವಣೆ ಹೇಗಿತ್ತೋ, ಈಗಲೂ ಹಾಗೆಯೇ ಇದೆ. ಸ್ಥಳೀಯರೆಲ್ಲರೂ ಸೇರಿ ಒಂದಷ್ಟು ಹಣ ಕಲೆಹಾಕಿ ನಾವೇ ಒಳಚರಂಡಿ ನಿರ್ಮಿಸಿಕೊಂಡಿದ್ದೇವೆ. ಚರಂಡಿ ಕೆಟ್ಟು ಹೋದರೆ ಯಾವ ಅಧಿಕಾರಿ, ಜನಪ್ರತಿನಿಧಿ ಇತ್ತ ತಿರುಗಿಯೂ ನೋಡುವುದಿಲ್ಲ. ಸ್ಥಳೀಯರೇ ಶ್ರಮಪಟ್ಟು ಕಚ್ಚಾರಸ್ತೆ ಮಾಡಿಕೊಂಡಿದ್ದೇವೆ‌’ ಎಂದು ಮೌಲಾಸಾಬ್‌ ನಗಾರಿ ತಿಳಿಸಿದರು.

ಸ್ಥಳೀಯರು ‘ಪ್ರಜಾವಾಣಿ’ ಮುಂದೆ ತಮ್ಮ ಬಡಾವಣೆಯ ಸಮಸ್ಯೆ ಹೇಳುತ್ತಿದ್ದಾಗ ದೂರದಿಂದಲೇ ಓಡೋಡಿ ಬಂದ ಫಾತಿಮಾ, ‘ಪ್ರತಿ ಸಲ ಬರ್ತೀರಿ, ಬರ್ಕೊಂಡು ಹೋಗ್ತೀರಿ, ಈ ಸಲನೂ ಹಂಗ ಮಾಡ್ರೀ, ನಿಮಗೆ ವೋಟ್‌ ಹಾಕೋದಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

ನಾವು ಮಾಧ್ಯಮದವರು ಎಂದು ಹೇಳಿದಾಗ ‘ನಮ್ಮ ಕ್ಷೇತ್ರದ ಶಾಸಕ ಜಗದೀಶ ಶೆಟ್ಟರ್‌ ಸಾಹೇಬ್ರ ಮನಿಗೆ ನೂರಾರು ಸಲ ಹೋಗಿಬಂದೀವಿ. ಮನವಿ ಕೊಟ್ಟೀವಿ. ಇನ್ನೂ ರೋಡ್‌ ಆಗಿಲ್ಲ. ರೋಡ್‌ ಕಾಣೋದು ನಮ್ ನಸೀಬದಾಗ ಇದ್ದಂಗಿಲ್ಲ‘ ಎಂದು ಬೇಸರ ವ್ಯಕ್ತಪಡಿಸಿದರು.

15 ವರ್ಷಗಳಿಂದ ವಾಸವಿರುವ ಫಾತಿಮಾ ‘ರಸ್ತೆ ನಿರ್ಮಿಸಲು ಶೆಟ್ಟರ್‌ ಅವರು ಮೂರು ಸಲ ಭೂಮಿಪೂಜೆ ಮಾಡಿದ್ದಾರೆ. ಆದರೆ, ಇನ್ನೂ ರಸ್ತೆ ನಿರ್ಮಾಣವಾಗಿಲ್ಲ. ನಗರದಲ್ಲಿದ್ದರೂ ಕಾಡಿನಲ್ಲಿದ್ದಂತಾಗಿದೆ ನಮ್ಮ ಬಡಾವಣೆಯ ಸ್ಥಿತಿ’ ಎಂದು ನೋವು ತೋಡಿಕೊಂಡರು. ಇದಕ್ಕೆ ದನಿಗೂಡಿಸಿದ ಬೀಬಿಜಾನ್‌ ‘ನಮ್ಮನ್ನು ಆಳೋರಿಗೆ ಕಾಲು ಮುಗಿಯೋದಷ್ಟೇ ಬಾಕಿ ಐತಿ ನೋಡ್ರಿ... ಇದಕ್ಕಿಂತ ಇನ್ನೇನ್‌ ಮಾಡೋಕ ಆಗಂಗಿಲ್ರೀ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !