ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಕ್ಷೇತ್ರ: ಕ್ಷೀಣಿಸಿದ ಜೆಡಿಎಸ್ ಶಕ್ತಿ

ಕ್ಷೇತ್ರದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಪಕ್ಷ
Last Updated 26 ಏಪ್ರಿಲ್ 2019, 10:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜನತಾ ಪರಿವಾರ ಗೆಲುವು ಸಾಧಿಸಿಲ್ಲವಾದರೂ, ಹಲವು ಚುನಾವಣೆಗಳಲ್ಲಿ ಅದರ ಅಭ್ಯರ್ಥಿಗಳು ಎರಡನೇ ಸ್ಥಾನದಲ್ಲಿದ್ದರು. ಇತ್ತೀಚಿನ ಚುನಾವಣೆಗಳಲ್ಲಿ ಠೇವಣಿ ಕಳೆದುಕೊಂಡ ಸ್ಥಿತಿಗೆ ತಲುಪಿದೆ. ಚುನಾವಣೆಯಿಂದ ಚುನಾವಣೆಗೆ ದಳದ ಶಕ್ತಿ ಕುಂದುತ್ತಿದೆ.

1962 ರಿಂದ 1977ರವರೆಗೆ ಕಾಂಗ್ರೆಸ್‌ನಿಂದ ಸತತ ನಾಲ್ಕು ಚುನಾವಣೆಗಳಲ್ಲಿ ಸರೋಜಿನಿ ಮಹಿಷಿ ಅವರು ಗೆಲುವು ಸಾಧಿಸಿರುತ್ತಾರೆ. 1980ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ. ನಾಯ್ಕರ್‌ ಸ್ಪರ್ಧಿಸುತ್ತಾರೆ. ಹೀಗಾಗಿ ಸರೋಜಿನಿ ಮಹಿಷಿ ಕಾಂಗ್ರೆಸ್‌ ತೊರೆದು ಜನತಾ ಪಕ್ಷದಿಂದ ಸ್ಪರ್ಧಿಸುವುದರೊಂದಿಗೆ ಧಾರವಾಡ ಲೋಕಸಭಾ ಕ್ಷೇತ್ರಕ್ಕೂ ಜನತಾ ಪರಿವಾರ ಕಾಲಿಡುತ್ತದೆ. ಅವರು, 1,11,575 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ.

1984ರಲ್ಲಿ ನಡೆಯುವ ಚುನಾವಣೆಯಲ್ಲಿ ಡಿ.ಕೆ. ನಾಯ್ಕರ್‌ ವಿರುದ್ಧ ಜನತಾ ಪಕ್ಷದಿಂದ ಎಸ್‌.ಐ. ಶೆಟ್ಟರ್‌ ಸ್ಪರ್ಧಿಸುತ್ತಾರೆ. 1,85,014 ಮತಗಳನ್ನು ಪಡೆದರೂ ಸೋಲುತ್ತಾರೆ. ಎರಡನೇ ಸ್ಥಾನ ಆಗಲೂ ಮುಂದುವರೆಯುತ್ತದೆ.

1989ರ ಚುನಾವಣೆ ವೇಳೆ ಜನತಾ ಪಕ್ಷ ಇಬ್ಭಾಗವಾಗಿರುತ್ತದೆ. ಜನತಾ ದಳದಿಂದ ಸ್ಪರ್ಧಿಸಿದ್ದ ಚಂದ್ರಕಾಂತ ಬೆಲ್ಲದ ಅವರು 2,20,997 ಮತ ಪಡೆದರೆ, ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಸೈಯದ್ ನಿಜಾಮುದ್ದೀನ್‌ ಕೇವಲ 13,405 ಮತಗಳನ್ನು ಪಡೆಯುತ್ತಾರೆ.

1991ರ ಚುನಾವಣೆಯು ಕಾಂಗ್ರೆಸ್‌, ಜನತಾ ದಳ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ನಡುವೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗುತ್ತದೆ. ಕಾಂಗ್ರೆಸ್‌ನ ಡಿ.ಕೆ. ನಾಯ್ಕರ್‌ ವಿರುದ್ಧ ಜನತಾ ದಳದಿಂದ ಸ್ಪರ್ಧಿಸಿದ್ದ ಚಂದ್ರಕಾಂತ ಬೆಲ್ಲದ ಅವರು, 1,53,891 ಮತಗಳನ್ನು ಪಡೆದು ಕೇವಲ 3,791 ಮತಗಳಿಂದ ಸೋಲುತ್ತಾರೆ.

1996 ರಲ್ಲಿ ನಡೆಯುವ ಚುನಾವಣೆಯಲ್ಲಿ ಜನತಾ ದಳದಿಂದ ಎಸ್‌.ಐ. ಮುನವಳ್ಳಿ ಸ್ಪರ್ಧಿಸಿ 1,88,221 ಮತಗಳನ್ನು ಪಡೆದು ಎರಡನೇ ಸ್ಥಾನವನ್ನು ಉಳಿಸಿಕೊಳ್ಳುತ್ತಾರೆ. ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದರೆ, ಅಲ್ಲಿಯವರೆಗೆ ಗೆಲುವಿನ ಸವಿಯುಂಡಿದ್ದ ಕಾಂಗ್ರೆಸ್‌ ಪಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪುಡುತ್ತದೆ.

1998ರ ಚುನಾವಣೆಯಲ್ಲಿ ಜನತಾ ದಳದಿಂದ ಎಸ್‌.ಐ. ಮುನವಳ್ಳಿ ಸ್ಪರ್ಧಿಸಿ 1,13,763 ಮತಗಳನ್ನು ಪಡೆಯುತ್ತಾರೆ. ಕಾಂಗ್ರೆಸ್‌ ಎರಡನೇ ಸ್ಥಾನ ಪಡೆದರೆ, ಜನತಾ ದಳ ಮೂರನೇ ಸ್ಥಾನಕ್ಕೆ ಕುಸಿಯುತ್ತದೆ.

1999ರಲ್ಲಿ ಜೆಡಿಎಸ್‌ನಿಂದ ಇಸ್ಮಾಯಿಲ್‌ಸಾಬ್‌ ಕಾಲೇಬುಡ್ಡೆ ಸ್ಪರ್ಧಿಸಿ 71,146 ಮತ ಪಡೆಯುತ್ತಾರೆ. 2004ರಲ್ಲಿ ಶಾಗೋಟಿ ಚಿಕ್ಕಪ್ಪ ನಿಂಗಪ್ಪ ಸ್ಪರ್ಧಿಸಿ 52,572 ಮತ ಪಡೆಯುತ್ತಾರೆ, 2014ರಲ್ಲಿ ಜೆಡಿಎಸ್‌ನಿಂದ ಬಂಕಾಪುರ ಕೇವಲ 8,836 ಮತಗಳನ್ನು ಪಡೆದಿದ್ದರು. ಮತ ಗಳಿಕೆಯ ಪ್ರಮಾಣ ನೋಡಿದಾಗ ಚುನಾವಣೆಯಿಂದ ಚುನಾವಣೆಗೆ ಶಕ್ತಿ ಕಳೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಈ ಬಾರಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಜೆಡಿಎಸ್‌ ಅಭ್ಯರ್ಥಿಯೇ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT