ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪ್ತ ಬರಹ | ದೀಪ ಬೆಳಗಲಿ, ಜೀವನ ಸುಡದಿರಲಿ...

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 27 ಅಕ್ಟೋಬರ್ 2019, 2:58 IST
ಅಕ್ಷರ ಗಾತ್ರ

ದೀಪಾವಳಿ ಹಬ್ಬ ಅಂದ್ರ ನೀರು ತುಂಬುವ ಸಂಭ್ರಮ. ಮನ್ಯಾಗಿದ್ದ ಹಂಡೆ, ತಪ್ಪೇಲಿ, ಹುಬ್ಬಳ್ಳಿ ಮಾಟದ ಕೊಡ ಎಲ್ಲಾ ಹುಣಶಿಹಣ್ಣು, ಹಳ್ಳುಪ್ಪು ಹಚ್ಚಿ ತಿಕ್ಕಿತಿಕ್ಕಿ, ನಮ್ಮ ಮಾರಿ ಕಾಣುವಷ್ಟು ಕೆಂಪಾದಾಗ ಮ್ಯಾಲೊಂದಷ್ಟು ವೀಭೂತಿ ಬಳದು ಲಕಲಕ ಹೊಳಿಯೂಹಂಗ ಮಾಡ್ತಿದ್ವಿ. ಯಾಕಂದ್ರ ದೀಪಾವಳಿ ಹಬ್ಬನ ನೀರು ತುಂಬೂದ್ರಿಂದ ಆರಂಭ ಆಗ್ತಿತ್ತು.

ನೀರು ಹಿಡಿಯುವ ಎಲ್ಲ ಪಾತ್ರೆಗಳಲ್ಲೂ ನೀರು ತುಂಬಿ, ಮಾಗಿ ಚಳಿಯಲ್ಲಿ ನೀರೊಲಿಗೆ ಹಂಡೆ ತುಂಬ ನೀರು ಕಾಯಿಸ್ತಿದ್ರ ನಮಗೆಲ್ಲ ಒಳಗೊಳಗೇ ನಡುಕ. ನಸುಕಿನಾಗ ಸ್ನಾನ ಮಾಡಿಸುವ ಸಂಭ್ರಮದೊಳಗ ಅಪ್ಪ ಅಮ್ಮ ಮುಣಗಿರ್ತಿದ್ದರು. ಅಪ್ಪ, ಉಗುರು ಬಿಸಿ ಎಣ್ಣಿಗೆ ಬಳ್ಳೊಳ್ಳಿ ಫಳಕು ಹಾಕಿ, ಕಾಯಿಸಿ, ಮೈಗೆಲ್ಲ ಉಜ್ತಿದ್ರು. ನಮ್ಮ ಅಭ್ಯಂಜನ ಶುರು ಆಗ್ತಿದ್ದದ್ದೇ ಹಂಗ. ನಡುನತ್ತಿಗೆ ಈ ಉಗುರು ಬಿಸಿ ಎಣ್ಣಿಬಿದ್ದಾಗ.. ಆಹಹಾ... ಆಮೇಲೆ ಅಪ್ಪನ ಪ್ರೀತಿ ತುಂಬಿದ ಥಪ್ಕಿಗಳು... ಆಗೆಲ್ಲ ಆಆಆಆಆ ಅಂತ ಬರುವ ಸ್ವರಲಾಪಗಳನ್ನು ಕೇಳಿ ನಾವೇ ಖುಷಿ ಪಡ್ತಿದ್ವಿ.

ತಾರಕಕ್ಕೇರೂದು, ಅಮ್ಮ ಸುಡುಸುಡು ನೀರು ಸುರದಾಗಲೇ. ನರಕಚತುರ್ದಶಿ ಆರಂಭ ಆಗ್ತಿದ್ದಿದ್ದೇ ಈ ಅಭ್ಯಂಜನದಿಂದ. ಆಮೇಲೆ ಲಕುಮಿ ಬ್ರಾಹ್ಮಿ ಮುಹುರ್ತದಾಗ ಬರ್ತಾಳಂತ್ರಿ.. ಚೂರು ಬೆಳಕು ಹರದಮ್ಯಾಲರೆ ಬರಬಾರದಾ..? ಊಹೂಂ.. ಸಾಧ್ಯನ ಇಲ್ಲ.. ಅಕಿಗೂ ನಿದ್ದಿಗೆಡೋರಿಗೂ ಭಾರಿ ಪ್ರೀತಿಯ ಸಂಬಂಧ ಅನಸ್ತದ. ಅಂತೂ ಕರಿಕಾಳ ಕತ್ತಲೆಯೊಳಗ ಬಂದು ಪ್ರತಿಷ್ಠಾಪಿಸ್ತಾಳಂತ ಅವಾಗ ಪೂಜಾ ಮಾಡೋರು. ನಮ್ಮನ್ಯಾಗ ಎದ್ದೀವಿ ನಮ್ಮವ್ವ, ದೀಪಾ ಹಚ್ಚಿಟ್ಟೇವಿ, ನೈವೇದ್ಯನೂ ಇಟ್ಟೇವಿ ಅಂತ ಜೋರಗೆ ಹೇಳಾಕ ಪೂಜಾ ಆಗೂತ್ಲೆ ಪಟಾಕಿ ಹಚ್ಚೂದು. ನಮ್ಮ ಲಕುಮಿಗೆ ಕೇಳಲಿಬಿಡಲಿ, ಊರಿಗೆಲ್ಲ ಎಬ್ಸೂದು ಮಾತ್ರ ಹಿಂಗೆನೆ.

ಲಕ್ಷ್ಮಿ ಯಾರ ಮನಿಗೆ ಬಂದ್ರೂ ಮನಿ ಹೆಣ್ಮಕ್ಕಳಿಗೆ ಮಾತ್ರ ಖರೇನೆ ಕೈತುಂಬುವಷ್ಟು ಬರ್ತಾಳ. ಅಪ್ಪಾಜಿಗೆ, ಅಣ್ಣ ತಮ್ಮಂದಿರಿಗೆ ಆ ಕತ್ತಲ ರಾತ್ರಿಯೊಳಗ ಕುರ್ತಾ ಪೈಜಾಮಾ ಹಾಕಿಕೊಂಡು ಕುಂತ ವರಿಗೆ ವೀರತಿಲಕವಿಟ್ಟು, ಅಕ್ಷತೆ ಕಾಳು ಹಾಕಿ, ಆರತಿ ಬೆಳಗೂಮುಂದ ಆ ಬೆಳಕು ಅವರ ಕಣ್ಣಾಗೂ, ಬೆಳಗುವ ನಮ್ಮ ಕಣ್ಣಾಗೂ ಬೆಳಕು ಮೂಡ್ತಿತ್ತು. ಆ ಆರತಿ ಆದ ಕೂಡ್ಲೆ ಅಪ್ಪಾಜಿ, ಮಡಚಿಕೊಟ್ಟಿದ್ದ ನೋಟುಗಳು, ನಾಣ್ಯದೊಂದಿಗೆ ಆರತಿತಟ್ಟಿಗೆ ಬರ್ತಿದ್ವು. ಎಷ್ಟು ಖುಷಿಯಪ್ಪ... ಅವಾಗ. ಆಮೇಲೆ ಅಣ್ಣಂದಿರ ಮುಖ ಸಣ್ದು ಆಗಿರ್ತಿತ್ತು. ಅಕೀಗಾದ್ರ ನಾವು ರೊಕ್ಕ ಕೊಡಬೇಕು.. ನಮಗೇನು? ಹಿಂಗ ಹಟ ಇದ್ದ ಇರ್ತಿತ್ತು.

ತಂಗಿ ಕಾಲುಬೀಳಬೇಕಪ್ಪ. ಮನಿ ಲಕ್ಷ್ಮಿ ಅಕಿ ಅಂತ ಅಪ್ಪಾಜಿನೂ ಬಗ್ಗಿದಾಗ ಮಾತ್ರ ಕಣ್ತುಂಬಿ ಬರ್ತಿದ್ವು. ಅಣ್ಣಂದಿರು ಕಾಲ್ಮುಟ್ಟಿದ್ಹಂಗ ಮಾಡಿ, ಕಾಲು ಚೂಟಿದಾಗ ಕಣ್ಣೀರು ಬಂದಬಿಡ್ತಿತ್ತು. ನರಕ ಚತುರ್ದಶಿಯ ಆರಂಭ ಹಿಂಗಿರ್ತಿತ್ತು.

ಅವೊತ್ತಿನ ಊಟ ಸರಳ ಇರ್ತಿತ್ತು. ನಸುಕಿಲೆ ಎದ್ದು ಪೂಜೆ ಆಗ್ತಿತ್ತಲ್ಲ ಅದಕ್ಕಿರಬೇಕು. ಚಪಾತಿ, ಎಣ್ಣಿಗಾಯಿ (ಬದನಿಕಾಯಿ, ಡೊಣ್ಣಗಾಯಿ, ಹೀರಿಕಾಯಿ) ಯಾರ ಮನ್ಯಾಗ ಯಾವುದು ಹೆಚ್ಚು ತಿಂತಾರೋ ಅದೇನೆ. ಆದ್ರ ಎಣ್ಣಿಗಾಯಿ ಕಾಯಂ. ಜೊತಿಗೆ ಸಪ್ಪನಬ್ಯಾಳೆ, ಚಪ್ಪರಬದನಿಕಾಯಿ ಚಟ್ನಿ (ಖಗ್ಗ ಟೊಮೆಟೊ ಚಟ್ನಿ), ಅನ್ನ ಸಾರು ಹಪ್ಪಳ ಸಂಡಿಗೆ ಇವಿಷ್ಟೆ ಇರ್ತಾವಪ್ಪ.

ಅಮವಾಸಿ ದಿನಾ ನೋಡ್ರಿ. ಹೆಣ್ಮಕ್ಕಳು ಒಂದು ವಾರ ಮೊದಲೇ ಪ್ಯಾಟಿಗೆ ಹೋಗಿ ತಂದ ಹೊಸ ಸೀರಿ ಲಕ್ಷ್ಮಿಗೆ ಏರಸ್ತಾರ. ಪೂರ್ಣಕುಂಭದಾಗ ಯಾವಾಗಲೂ ವೀಳ್ಯದೆಲೆ ಇಟ್ರ, ಈಗ ಮಾವಿನೆಲಿ ಇಡಬೇಕಂತ. ವೀಳ್ಯದೆಲಿ ಇಟ್ರ, ಗೌರಿ. ಮಾವಿನೆಲೆ ಇಟ್ರ ಲಕ್ಷ್ಮಿ. ಈ ವ್ಯವಸ್ಥೆ ದೇವರೇ ಮಾಡ್ಕೊಂಡುಬಿಟ್ಟಾರ. ಮತ್ತ ಕನ್ಫ್ಯೂಸ್‌ ಆಗಬಾರದಲ್ಲ ಅದಕ್ಕ. ಹಂಗ ಅಕ್ಕಿ ಅಥವಾ ಗೋದಿ ಪೇರಿಸಿಟ್ಟು ಅದರಾಗ ಕಳಶ ಇಟ್ಟು, ಲಕ್ಷ್ಮಿ ಮುಖೋಟ ಇದ್ರ ಅದನ್ನು ಪ್ರತಿಷ್ಠಾಪಿಸಿ, ಹೊಳಿಯುವ ಮೂಗುಬೊಟ್ಟಿಟ್ಟು, ಸೀರಿ ಉಡಿಸಿದರ ಸಾಕ್ಷಾತ್‌ ಲಕ್ಷ್ಮಿನ ಜಗುಲಿ ಏರಿ ಕುಂತ ಲಕ್ಷಣ ಬಂದೇಬಿಡ್ತದ. ಮಾಡಿಟ್ಟಿದ್ದ ಫಳಾರೆಲ್ಲ ಪ್ಲೇಟ್‌ ಅಲಂಕರಸ್ತಾವ. ಶೋಲಾ ಶಿಂಗಾರ ಆಗ್ಬೇಕಲ್ಲ, ಪನ್ನೀರು, ಕುಂಕುಮ, ಅರಿಶಿಣ, ಗಂಧ, ಹೂ, ಕಾಡಿಗಿ, ಕನ್ನಡಿ, ಸುಗಂಧ ದ್ರವ್ಯ, ಹೂ ಹಿಂಗೆ ಎಲ್ಲವೂ ಒಂದೊಂದೇ ತಮ್ಮ ಸ್ಥಾನ ಅಲಂಕರಸ್ತಾವ. ಇಷ್ಟೊತ್ತು ನಿರಾಲಂಕಾರವಾಗಿದ್ದ ದೇವರು, ಇದ್ದಕ್ಕಿದ್ದಂಗ ಪಾರ್ಲರ್‌ಗ ಹೋಗಿ ಅಲಂಕಾರ ಮಾಡಿಕೊಂಡಂಗ ರೆಡಿ ಆಗೇಬಿಡ್ತಾಳಪ್ಪ.

ಅಷ್ಟರೊಳಗ ಮನ್ಯಾಗ ಹೂರ್ಣ ರುಬ್ಬುವ ಸಡಗರ ಶುರು ಆಗಿರ್ತದ. ಬ್ಯಾಳಿ ಬೆಂದಾವ, ಗಂಡದಾವ ಅಂದಾಗಲೆಲ್ಲ ನಂಗ್ಯಾಕೋ ಈ ಬೇಯೂದು ಹೆಣ್ಮಕ್ಕಳಿಗೆ ಅಷ್ಟ ಅನ್ವಯ ಆಗ್ತದ ಅನಿಸ್ತಿತ್ತು. ಹೋಳಗಿ, ಹೆಸರುಬೇಳೆ ಕೋಸಂಬ್ರಿ, ಕಡಲಿಬ್ಯಾಳಿ ವಡಿ, ಕಟ್ಟಿನ ಸಾರು ಮಾಡಾಕ ಕೊಬ್ಬರಿ, ಈರುಳ್ಳಿ, ಬೆಳ್ಳುಳ್ಳಿ ಸುಟ್ಟ ಹದವಾದ ವಾಸನಿ. ಇಷ್ಟೆಲ್ಲ ಘಂ ಅನ್ನೂಮುಂದ ನಮ್ಮ ಕುಬೇರ, ಬಲಿ ಚಕ್ರವರ್ತಿ ಹೆಂಗ ತಮ್ಮ ಲೋಕದಾಗ ಇರ್ತಾರ.. ಭೂಲೋಕಕ್ಕ ಈ ವಾಸ್ನಿನೆ ಕರಕೊಂಡು ಬರ್ತದ. ಹಿಂಗ ಕರಕೊಂಡು ಬರಲಿ ಅಂತನ ಕರಿಯೂದು ಹೆಚ್ಗಿ ಈ ಹಬ್ಬದಾಗ. ಇಷ್ಟ ಆದ್ರ ಸಾಲೂದಿಲ್ಲ, ಭಜಿನೂ ಬೇಕ. ಅನ್ನ ಕಟ್ಟಿನ ಸಾರಿನ ಜೊತಿಗೆ ಸ್ವಲ್ಪ ಕರಿಚಟ್ನಿ ಬೇಕಲ್ಲ. ಅದುನು ಇದ್ದೇ ಇರ್ತದ.

ಇಷ್ಟು ಮಾಡೂದ್ರೊಳಗ ಇಳಿ ಸಂಜಿ. ಗೋದೂಳಿ ಸಮಯದೊಳಗ ಮನಿಮುಂದ ರಂಗೋಲಿ ಹಾಕಿ ದೀಪ ಹಚ್ಚಿಟ್ರ, ಬಲಿ ಚಕ್ರವರ್ತಿಗೂ ಸ್ವರ್ಗ ಯಾವುದು, ಭೂಮಿ ಯಾವುದು ಅಂತ ಗೊತ್ತಾಗೂದೇ ಅವಾಗವಾಗ ‘ಢಂ’ ಅನ್ನುವ ಪಟಾಕಿ ಹಚ್ಚಿದಾಗ.

ಮರುದಿನ ಬಲಿಪಾಡ್ಯಮಿ. ‘ಪಾಡ್ಯ’ ಅಂತಲೇ ಕರಿಯೂದು. ಪಾಡ್ಯದ ಆಕರ್ಷಣೆ ಪೂರಿ, ಖೀರು ಅಥವಾ ಬಾಸುಂದಿ ಊಟ. ಚಿತ್ರಾನ್ನ, ವಡಿ, ಮೊಸರನ್ನ. ಈ ಊಟದ್ದೊಂದಾದ್ರ ಇನ್ನೊಂದು ಲಕ್ಷ್ಮೀಪೂಜಾಕ್ಕ ಹೋಗುವ ಸಂಭ್ರಮ. ಅಂಗಡಿ, ಆಫೀಸಿನ ಪೂಜಾಗಳಿಗೆ ಹೋಗೂದು. ಎಲ್ಲಾರ ಅಂಗಡಿಯೊಳಗೂ ಸಾಂಬ್ರಾಣಿ ವಾಸು, ದೀಪದ ಬೆಳಕು, ಧೂಪದ ಹೊಗಿ, ಕಬ್ಬಿನ ಮಂಟಪ, ಮಾವಿನೆಲಿಯ ತೋರಣ. ರಂಗೋಲಿ ಚಿತ್ತಾರ, ಚೆಂಡು ಸೇವಂತಿಗೆ ಹೂವಿನ ಅಲಂಕಾರ. ಉಂಡಿ, ಪೇಡೆ ಪ್ರಸಾದ. ಚುರುಮುರಿಯೊಳಗ ಕೊಬ್ಬರಿ, ಬತ್ತಾಸು ಮಿಶ್ರಗೊಳಿಸಿದ ಪ್ರಸಾದ.

ಎಲ್ಲ ಹೆಣ್ಮಕ್ಕಳೂ ರೇಷ್ಮಿ ಸೀರಿಯೊಳಗ ಕಂಗೊಳಿಸಿದ್ರ ಗಂಡುಮಕ್ಕಳು ತಲಿಮ್ಯಾಲೊಂದು ಟೋಪಿ, ಕೊರಳಿಗೊಂದು ಟವಲ್‌ ಅಥವಾ ಅಂಗವಸ್ತ್ರ ಹಾಕ್ಕೊಂಡು, ವೀರತಿಲಕ ಇಟ್ಕೊಂಡು ಓಡಾಡ್ತಿರ್ತಾರ. ಆ ಹಬ್ಬದ ಲಕ್ಷಣನೆ ಹಂಗ. ಇವರು ನಮ್ಮಣ್ಣ, ನಮ್ಮಪ್ಪ, ನನ್ನ ಸಂಗಾತಿ ಅನ್ನುವ ಅಭಿಮಾನ ಮೂಡುವಹಂಗ.ದೀಪ ಬೆಳಗಸ್ತೀವಿ. ಕಣ್ಣೂ ಬೆಳಗ್ತಾವ.

ನೆರೆಗಾಗಿ ಸರಳ ಆಚರಣೆ

ನೀರು ತುಂಬುವ ಸಂಭ್ರಮ ಇದೀಗ ಮನೆಯೊಳಗೆ ತುಂಬಿರುವ ಪ್ರವಾಹದ ನೀರು ಹೊರಚೆಲ್ಲುವುದರೊಳಗ ಮಾಸಿಹೋಗಿದೆ. ಪಣತಿಗಳಲ್ಲಿ ಎಣ್ಣಿ ಹಾಕಬೇಕಾದವರು, ಕಣ್ಣಾಗ ಎಣ್ಣಿಬಿಟ್ಗೊಂಡು ಪರಿಹಾರ ಕೇಂದ್ರದೊಳಗ ಕುಂತಾರ. ಮಣ್ಣಿಲ್ಲದೇ ಬದುಕು ಮಣ್ಣಾಯಿತು ಅನ್ನುವ ಕಲಾವಿದರದಾರ. ಬಲಿಚಕ್ರವರ್ತಿ, ಕುಬೇರ ಭೂಮಿಗೆ ಬಂದಾಗ ಒಂದಷ್ಟು ಹೊಂದಾಣಿಕಿ ಮಾಡ್ಕೊತಾರ. ಪಟಾಕಿ ಕಡಿಮಿ ಮಾಡಿ, ದುಂದುವೆಚ್ಚ ಕಡಿಮಿ ಮಾಡಿ, ಕತ್ತಲೆಯೊಳಗಿದ್ದವರ ಜೀವನದೊಳಗ ದೀಪ ಬೆಳಗಿಸಲು ಏನು ಮಾಡಲಾದೀತು ಅಂತ ವಿಚಾರ ಮಾಡಿ, ಹಂಗ ಕೆಲಸ ಮಾಡಿದ್ರ ದೀಪಗಳ ಸಾಲು, ಮನಿಯಂಗಳದಾಗಷ್ಟೇ ಅಲ್ಲ ಎಲ್ಲರ ಮನದೊಳಗೂ ಬೆಳಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT