ಶನಿವಾರ, ಸೆಪ್ಟೆಂಬರ್ 21, 2019
21 °C

ಪಕ್ಷಾಂತರ ಪ್ರಜಾಪ್ರಭುತ್ವಕ್ಕೆ ಕಂಟಕ: ಕೆ.ಎನ್‌. ಭಟ್

Published:
Updated:
Prajavani

ಹುಬ್ಬಳ್ಳಿ: ‘ನಾಗರಿಕ ಪ್ರಾತಿನಿಧ್ಯ ಅಧಿನಿಯಮ 1951 ತಿದ್ದುಪಡಿ ಮಾಡಿದರೆ ಪಕ್ಷಾಂತರ ಮಾಡಿದ ಶಾಸಕರು ಕನಿಷ್ಠ ಆರು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ತಡೆಹಿಡಿಯಬಹುದು’ ಎಂದು ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಕೆ.ಎನ್. ಭಟ್ ಅಭಿಪ್ರಾಯ ಪಟ್ಟರು.

ಇಲ್ಲಿನ ಕಾನೂನು ವಿಶ್ವವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನ್ಯಾಯಮೂರ್ತಿ ಆರ್.ಜಿ. ದೇಸಾಯಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಪಕ್ಷಾಂತರ ನಿಷೇಧ ಕಾನೂನು-ಕರ್ನಾಟಕದಲ್ಲಿ ಕಂಡು ಬಂದಿರುವ ನ್ಯೂನತೆಗಳು ಮತ್ತು ಸೂಚಿಸಲಾದ ಪರಿಹಾರಗಳು’ ಎಂಬ ವಿಷಯದ ಮೇಲೆ ಅವರು ಮಾತನಾಡಿದರು.

‘ಚುನಾವಣಾ ಪೂರ್ವದಲ್ಲಿ ಪಕ್ಷಗಳು ಒಪ್ಪಂದ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಿದರೆ ಅದು ಸ್ವಾಗತಾರ್ಹ. ಆದರೆ, ಅದರ ಹಿಂದೆ ಬೇರೆ ಉದ್ದೇಶ, ಧ್ಯೇಯ ಮತ್ತು ನಿಷ್ಠೆಗಳನ್ನು ಹೊಂದಿರುವ ಪಕ್ಷಗಳು ಚುನಾವಣಾ ನಂತರದಲ್ಲಿ ಮೈತ್ರಿ ಮಾಡಿಕೊಳ್ಳುವುದು ಆಕ್ಷೇಪಾರ್ಹ ಬೆಳವಣಿಗೆ’ ಎಂದರು.

‘ಪಕ್ಷಾಂತರ ತಡೆಯಲು ಸಂವಿಧಾನದ ತಿದ್ದುಪಡಿಯೇ ಆಗಬೇಕೆಂದಿಲ್ಲ. ನಾಗರಿಕ ಪ್ರಾತಿನಿಧ್ಯ ಅಧಿನಿಯಮ ತಿದ್ದುಪಡಿ ಮಾಡಿದರೂ ಪಕ್ಷಾಂತರಗೊಂಡ ಶಾಸಕರನ್ನು ಆರು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಮಾಡಬಹುದು. ಒಂದು ಪಕ್ಷದಿಂದ ಆಯ್ಕೆಯಾಗಿ ಮತ್ತೊಂದು ಪಕ್ಷಕ್ಕೆ ಹೋಗುವುದು ಪ್ರಜೆಗಳ ನಂಬಿಕೆ ಬುಡಮೇಲು ಮಾಡುತ್ತದೆ’ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಈಶ್ವರ ಭಟ್, ‘ಪಕ್ಷಾಂತರ ಪ್ರಕ್ರಿಯೆ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ. ಇದು ಪ್ರಜೆಗಳ ನಂಬಿಕೆಯನ್ನು ಘಾಸಿ ಮಾಡುವುದಲ್ಲದೆ ಸಂವಿಧಾನಾತ್ಮಕ ಸಿದ್ಧಾಂತಗಳಿಂದ ವಿಚಲಿತಗೊಳ್ಳುವಂತೆ ಮಾಡುತ್ತದೆ’ ಎಂದರು. 

ಕುಲಸಚಿವ ಡಾ. ಜಿ.ಬಿ. ಪಾಟೀಲ, ಹಿರಿಯ ವಕೀಲ ಮೋಹನ ಕಾತರಕಿ, ಆರ್. ರವಿಶಂಕರ, ಡಾ. ಸಿ.ಎಸ್. ಪಾಟೀಲ ಇದ್ದರು.

 

Post Comments (+)