ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಚಾಲನೆ’

ತವರಿಗೆ ಬಂದ ಸಚಿವ ಜಗದೀಶ ಶೆಟ್ಟರ್‌ಗೆ ಅದ್ಧೂರಿ ಸ್ವಾಗತ
Last Updated 21 ಆಗಸ್ಟ್ 2019, 11:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸಿಆರ್‌ಎಫ್‌ ರಸ್ತೆ ನಿರ್ಮಾಣ ಸೇರಿದಂತೆ ಅವಳಿನಗರದಲ್ಲಿ ಹಲವು ಯೋಜನೆಗಳ ಕೆಲಸಗಳು ನನೆಗುದಿಗೆ ಬಿದ್ದಿವೆ. ಹಣ ಬಿಡುಗಡೆಯಾಗಿದ್ದರೂ ಎಷ್ಟೋ ಯೋಜನೆಗಳು ಇನ್ನೂ ಆರಂಭವಾಗಿಲ್ಲ. ಅವುಗಳಿಗೆ ಮೊದಲು ಚಾಲನೆ ನೀಡಲಾಗುವುದು’ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಸಚಿವರಾದ ಬಳಿಕ ಬುಧವಾರ ಬೆಳಿಗ್ಗೆ ಹುಬ್ಬಳ್ಳಿಗೆ ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿ,‘ಪಾಲಿಕೆಗೆ ಬರಬೇಕಾದ ₹100 ಕೋಟಿ ಬಾಕಿ ಪಿಂಚಣಿ ಮೊತ್ತದ ಪೈಕಿ, ತಕ್ಷಣ ₹50 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ. ಉಳಿದ ₹50 ಕೋಟಿಯನ್ನು ಆದಷ್ಟು ಬೇಗ ತರಲು ಕ್ರಮ ಕೈಗೊಳ್ಳುವೆ’ ಎಂದರು.

‘ರಾಜ್ಯದಲ್ಲಿ ಸಂಭವಿಸಿದ ಪ್ರವಾಹಕ್ಕೆ ಕೇಂದ್ರ ಸರ್ಕಾರದಿಂದ ಪರಿಹಾರ ಬಂದಿಲ್ಲ ಎಂದ ಮಾತ್ರಕ್ಕೆ, ಪರಿಹಾರ ಕಾರ್ಯಗಳೇನು ನಿಂತಿಲ್ಲ. ಕೇಂದ್ರದ ತಂಡ ರಾಜ್ಯದಲ್ಲಿ ಪ್ರವಾಹ ಸ್ಥಿತಿ ಅಧ್ಯಯನ ನಡೆಸಿದ ಬಳಿಕ, ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಲಿದೆ’ ಎಂದರು.

‘ಸಂಪುಟ ಸಭೆಯಲ್ಲಿ ಪ್ರವಾಹಪೀಡಿತ ಪ್ರದೇಶಗಳ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಿದೆ. ಒಬ್ಬೊಬ್ಬ ಸಚಿವ ಎರಡೆರಡು ಜಿಲ್ಲೆಗಳಿಗೆ ಭೇಟಿ ನೀಡಿ, ಪ್ರವಾಹದಿಂದ ಹಾನಿಗೊಂಡ ಸ್ಥಳಗಳನ್ನು ವೀಕ್ಷಿಸಬೇಕು. ಪರಿಹಾರ ಕಾರ್ಯಗಳನ್ನು ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದ್ದಾರೆ’ ಎಂದು ಹೇಳಿದರು.

‘ನಾನು ಧಾರವಾಡ ಹಾಗೂ ಉತ್ತರಕನ್ನಡ ಜಿಲ್ಲೆಯ ಪ್ರವಾಹಪೀಡಿತ ಸ್ಥಳಗಳಿಗೆ ಭೇಟಿ ನೀಡುವೆ. ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಹಾರ ಕಾರ್ಯದ ಬಗ್ಗೆ ಮಾಹಿತಿ ಪಡೆದು ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ಸೂಚಿಸುವೆ. ಪ್ರವಾಹದಲ್ಲಿ ಸಂಪೂರ್ಣ ಮನೆ ಕುಸಿದಿದ್ದರೆ ₹5 ಲಕ್ಷ ಹಾಗೂ ಭಾಗಶಃ ಕುಸಿದಿದ್ದರೆ ₹1 ಲಕ್ಷ ಪರಿಹಾರ ನೀಡಲು ಸರ್ಕಾರ ಚಿಂತನೆ ನಡೆಸಿದೆ’ ಎಂದರು.

‘ಹಿಂಗಾರು ಹಂಗಾಮಿನಲ್ಲಿ ಬರದಿಂದ ತತ್ತರಿಸಿದ್ದ ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಿರುವ ₹1,029.39 ಕೋಟಿ ಪರಿಹಾರ ಸಾಲದು. ಹಾಗಾಗಿ, ಮತ್ತಷ್ಟು ಪರಿಹಾರ ನೀಡುವಂತೆ ಮನವಿ ಮಾಡಲಾಗುವುದು’ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಬೇಂದ್ರೆ ಸಾರಿಗೆ ಸಂಸ್ಥೆ ಪರವಾನಗಿಯನ್ನು ಮತ್ತೆ ಐದು ವರ್ಷ ನವೀಕರಣ ಮಾಡಿರುವುದರ ಕುರಿತ ಪ್ರತಿಕ್ರಿಯಿಸಿದ ಶೆಟ್ಟರ್, ‘ಈ ವಿಷಯದಲ್ಲಿ ಕೆಲ ಹಂತದಲ್ಲಿ ತಪ್ಪುಗಳಾಗಿವೆ. ಮುಂದೆ ಅದನ್ನು ಸರಿಪಡಿಸಲಾಗುವುದು’ ಎಂದರು.

ಅಭಿನಂದನೆಯ ಮಹಾಪೂರ:

ಮನೆಗೆ ಬಂದ ಜಗದೀಶ ಶೆಟ್ಟರ್ ಹಾಗೂ ಪತ್ನಿ ಶಿಲ್ಪಾ ಶೆಟ್ಟರ್ ಅವರಿಗೆ ಸಂಬಂಧಿಕರು ಆರತಿ ಬೆಳಗಿ ಸ್ವಾಗತಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಪಕ್ಷದ ಮುಖಂಡರು ಹಾಗೂ ಅಭಿಮಾನಿಗಳ ಪೈಕಿ ಕೆಲವರು ಹೂಗುಚ್ಛ ಹಾಗೂ ಉಳಿದವರು ನೋಟ್ ಪುಸ್ತಕಗಳನ್ನು ನೀಡಿ ಅಭಿನಂದಿಸಿದರು.

ಸಚಿವರಾದ ಸಿ.ಸಿ. ಪಾಟೀಲ ಮತ್ತು ಗೋವಿಂದ ಕಾರಜೋಳ ಹುಬ್ಬಳ್ಳಿಗೆ ವಿಮಾನದಲ್ಲಿ ಬಂದು, ಬಳಿಕ ತಮ್ಮ ಕ್ಷೇತ್ರಗಳಿಗೆ ಪ್ರಯಾಣ ಬೆಳೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT