ಧಾರವಾಡ: ಉತ್ತರ ಕನ್ನಡ, ಸಕಲೇಶಪುರ ಮತ್ತು ಕೇರಳದ ವಯನಾಡ್ ನಲ್ಲಿ ಗುಡ್ಡ ಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತುರ್ತು ಕ್ರಮ ತೆಗೆದುಕೊಳ್ಳಬೇಕು, ಪ್ರೊ. ಮಾಧವ್ ಗಾಡ್ಗಿಳ್ ವರದಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ 'ಪರಿಸರಕ್ಕಾಗಿ ನಾವು ಸಂಘಟನೆ"ಯವರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕರಾರು ಜುಬಿಲಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
'ಜೀವನದಿಗಳ ಉಗಮ ಪಶ್ಚಿಮ ಘಟ್ಟ', ಉಳಿಸಿ ಉಳಿಸಿ ಪಶ್ಚಿಮಘಟ್ಟ ಉಳಿಸಿ', ' ಪರಿಸರ ಸಂರಕ್ಷಣೆ ಎಲ್ಲರ ಹೊಣೆ' ಘೋಷಣೆಗಳನ್ನು ಕೂಗಿದರು.
ಪ್ರೊ. ಗಾಡ್ಗಿಳ್ ವರದಿಯನ್ನು ಕನ್ನಡಕ್ಕೆ ಅನುವಾದಿಸಿ ಪ್ರತಿ ಪಂಚಾಯಿತಿಗೂ ತಲುಪಿಸಬೇಕು, ಸ್ಥಳೀಯರ ಅಭಿಪ್ರಾಯ ಪಡೆದು ಅನುಷ್ಠಾನಗೊಳಿಸಬೇಕು. ಪಶ್ಚಿಮ ಘಟ್ಟಗಳ ಮೇಲೆ ಒತ್ತಡ ಬೀಳದಂತೆ ಇತರ ಪ್ರದೇಶಗಳಲ್ಲಿ ನೀರಿನ ನಿರ್ವಹಣೆ ಸರಿಯಾಗಿ ಮಾಡಬೇಕು. ಸ್ಥಳೀಯವಾಗಿ ಲಭ್ಯ ವಿರುವ ನೀರಿನ ಸಮರ್ಪಕ ನಿರ್ವಹಣೆಯಾದ ನದಿಗಳನ್ನು ತಿರುಗಿಸಿ ತರುವ ಯೋಜನೆಗಳ ಅಗತ್ಯ ಇಲ್ಲ ಎಂದು ಒತ್ತಾಯಿಸಿದರು.
ಡಾ. ಸಂಜೀವ ಕುಲಕರ್ಣಿ, ಪ್ರಕಾಶ್ ಭಟ್, ಶಂಕರ ಕುಂಬಿ, ಬಸವಪ್ರಭು ಹೊಸಕೇರಿ, ಕವಿತಾ ಎ. ಎಸ್, ಗೋಪಾಲ ದಾಬಡೆ, ಸುಭದ್ರಾ ಕುಲಕರ್ಣಿ, ಶಿವಾನಂದ ಶೆಟ್ಟರ್, ಅಶೋಕ್ ಹಡಪದ, ಇತರರು ಪಾಲ್ಗೊಂಡಿದ್ದರು.