ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹ; ಸರ್ಕಾರದ ವಿರುದ್ಧ ಆಕ್ರೋಶ

ಪೊಲೀಸ್‌ ಅನುಮತಿ ನಿರಾಕರಣೆ ನಡುವೆಯೂ ನಡೆದ ಟ್ರ್ಯಾಕ್ಟರ್‌ ರ‍್ಯಾಲಿ
Last Updated 26 ಜನವರಿ 2021, 11:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಬೆಂಬಲಿಸಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಮಂಗಳವಾರ ವಿವಿಧ ರೈತ ಸಂಘಟನೆ ಹಾಗೂ ರಾಜಕೀಯ ಪಕ್ಷಗಳಿಂದ ಟ್ರ್ಯಾಕ್ಟರ್‌ ರ‍್ಯಾಲಿ ನಡೆಯಿತು.

ಕಾಂಗ್ರೆಸ್‌ ವತಿಯಿಂದ ನಗರದ ರೈಲ್ವೆ ನಿಲ್ದಾಣದಿಂದ ಆರಂಭವಾದ ರ‍್ಯಾಲಿ ಲ್ಯಾಮಿಂಗ್ಟನ್‌ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಬಸವವನ ಮೂಲಕ ಸಾಗಿ ಪುನಃ ಚನ್ನಮ್ಮ ವೃತ್ತಕ್ಕೆ ಬಂದು ಸಮಾವೇಶಗೊಂಡಿತು. ಅಲ್ಲಿ ವಾಹನ ಸಂಚಾರ ತಡೆದು ಧರಣಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್‌ ಹಾಗೂ ಇತರ ರೈತ ಸಂಘಟನೆ ಗಾಜಿನ ಮನೆಯಿಂದ ಟ್ರ್ಯಾಕ್ಟರ್‌ ರ‍್ಯಾಲಿ ಆರಂಭಿಸಿ ಬಸವವನ, ಚನ್ನಮ್ಮ ವೃತ್ತ, ಲ್ಯಾಮಿಂಗ್ಟನ್‌ ರಸ್ತೆ ಮೂಲಕ ಸಾಗಿ ಪುನಃ ಚನ್ನಮ್ಮ ವೃತ್ತದಲ್ಲಿ ಸೇರಿತು.

10ಕ್ಕೂ ಹೆಚ್ಚು ಟ್ರ್ಯಾಕ್ಟರ್‌, ಐದು ಎತ್ತಿನ ಚಕ್ಕಡಿ ಹಾಗೂ 20ಕ್ಕೂ ಹೆಚ್ಚು ಬೈಕ್‌ಗಳೊಂದಿಗೆ ರೈತರು ಹಾಗೂ ಪಕ್ಷದ ಕಾರ್ಯಕರ್ತರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ‘ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಲಾಠಿಚಾರ್ಜ್‌, ಅಶ್ರುವಾಯು ಸಿಡಿಸಿ ಹೋರಾಟ ಹತ್ತಿಕ್ಕಲು ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧೀ ನಡೆಯಾಗಿದೆ. ಕೂಡಲೇ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು. ರಾಜಕೀಯಕ್ಕಾಗಿ, ಪ್ರತಿಷ್ಠೆಗಾಗಿ ಕೇಂದ್ರ ಸರ್ಕಾರ ರೈತರ ಜೊತೆ ಚೆಲ್ಲಾಟವಾಡುವುದು ಬಿಡಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಮೂರು ತಿಂಗಳಿನಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ, ಕೇಂದ್ರ ಸರ್ಕಾರ ಕಾಟಾಚಾರದ ಮಾತುಕತೆ ಎನ್ನುತ್ತ ರೈತ ಸಮುದಾಯವನ್ನು ಸಮಸ್ಯೆಯತ್ತ ನೂಕುತ್ತಿದೆ. ಬಂಡವಾಳಶಾಹಿಗಳಿಗೆ ಮಣೆ ಹಾಕುವ ಕೃಷಿ ಕಾನೂನನ್ನು ಜಾರಿಗೆ ತರಲು ಹೊರಟಿದ್ದು ಸರಿಯಲ್ಲ ಕೂಡಲೇ ಅದನ್ನು ರದ್ದು ಪಡಿಸಬೇಕು’ ಎಂದು ಹುಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರು ಆಗ್ರಹಿಸಿದರು.

ಎನ್..ಎಚ್‌. ಕೋನರಡ್ಡಿ, ಅನೀಲಕುಮಾರ್ ಪಾಟೀಲ್, ಅಲ್ತಾಫ್‌ ಕಿತ್ತೂರು, ರಾಜಶೇಖರ್ ಮೆಣಸಿನಕಾಯಿ, ಬಾಬಾಜಾನ್ ಮುಧೋಳ, ಮೆಹಮ್ಮದ್‌ ಕೋಳೂರ್, ಮೋಹನ ಅಸುಂಡಿ, ಬಂಗಾರೇಶ ಹಿರೇಮಠ, ದೀಪಾ ಗೌರಿ, ತಾರಾದೇವಿ ವಾಲಿ, ಮಂಜುನಾಥ ಉಪ್ಪಾರ, ಶಿವು ಬೆಂಡಿಗೇರಿ, ಮೋಹನ ಹಿರೇಮನಿ, ಬಾಬಾಜಾನ ಮುಧೋಳ, ಅನ್ವರ ಮುಧೋಳ, ಸಿದ್ದು ತೇಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT