ಗುರುವಾರ , ಆಗಸ್ಟ್ 11, 2022
23 °C

ಧಾರವಾಡ: ಖಾಸಗಿ ಶಾಲಾ ಶಿಕ್ಷಕರಿಗೆ ಪ್ಯಾಕೇಜ್ ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಮಕ್ಕಳು ಕಲಿಕೆಯಿಂದ ಹಿಂದೆ ಬೀಳದಂತೆ ಕಾಳಜಿ ವಹಿಸಿರುವ ಅನುದಾನರಹಿತ ಖಾಸಗಿ ಶಾಲೆಗಳ ಎಲ್ಲ ಶಿಕ್ಷಕರು ಹಾಗೂ ಸಿಬ್ಬಂದಿಗೆ ಪ್ಯಾಕೇಜ್ ರೂಪದಲ್ಲಿ ಕನಿಷ್ಠ ವೇತನ ನೀಡಬೇಕು ಎಂದು ಆಗ್ರಹಿಸಿ ಧಾರವಾಡ ಅನುದಾನ ರಹಿತ ಖಾಸಗಿ ಶಾಲಾ ಅಭಿವೃದ್ದಿ ಸಂಸ್ಥೆ ನೇತೃತ್ವದಲ್ಲಿ ಬುಧವಾರ ಧರಣಿ ನಡೆಸಲಾಯಿತು.

’ಶಿಕ್ಷಣ ಸಚಿವರ ದಿನಕ್ಕೊಂದು ಹೇಳಿಕೆಯಿಂದ ಪಾಲಕರು, ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಹಾಗೂ ತಪ್ಪು ಅಭಿಪ್ರಾಯ ಮೂಡುತ್ತಿದೆ. ಇಂಥ ಹೇಳಿಕೆಗಳನ್ನು ಸಚಿವರು ಮೊದಲು ನಿಲ್ಲಿಸಬೇಕು. ಕಳೆದ 8 ತಿಂಗಳಿಂದ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವೇತನವಿಲ್ಲದೆ ಅಥವಾ ಅಲ್ಪ ವೇತನದಲ್ಲೇ ಕೆಲಸ ಮಾಡುತ್ತಿದ್ದಾರೆ. ಇವರಿಗೆ 2012ರ ಜೂನ್‌ವರೆಗೂ ವೇತನ ಪ್ಯಾಕೇಜ್ ನೀಡಿ ಬದುಕು ನಡೆಸಲು ಅನುಕೂಲವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದರು.

‘ಪಾಲಕರಿಗೆ ಮನರಿಕೆ ಆಗುವ ರೀತಿಯಲ್ಲಿ ನೀಡಿ ಶಾಲಾ ಶುಲ್ಕವನ್ನು ಭರಿಸುವಂತೆ ಸರ್ಕಾರ ಹಾಗೂ ಸಚಿವರು ಹೇಳಿಕೆಗಳನ್ನು ನೀಡಬೇಕು. ಕಳೆದ ವರ್ಷದ ಬಾಕಿ ಉಳಿದ ಶಾಲಾ ಶುಲ್ಕವನ್ನು ಹಾಗೂ ಪ್ರಸಕ್ತ ವರ್ಷದ ಶಾಲಾ ಶುಲ್ಕವನ್ನು ಪಡೆಯಲು ಶಾಲೆಗಳಿಗೆ ಮುಕ್ತ ಅವಕಾಶ ನೀಡುವ ಆದೇಶ ನೀಡಿದೆ. ಆದರೆ ಒಂದೊಮ್ಮೆ ಶುಲ್ಕವನ್ನು ತೆಗೆದುಕೊಳ್ಳಬಾರದು ಎಂದಾದರೆ ಕಟ್ಟಡದ ಬಾಡಿಗೆ, ತೆರಿಗೆ, ನೀರು, ವಿದ್ಯುತ್ ಶುಲ್ಕ, ವಾಹನ ವಿಮೆ, ಸಾಲದ ಕಂತು, ರಸ್ತೆ ತೆರಿಗೆ ಸೇರಿದಂತೆ ಸರ್ಕಾರಕ್ಕೆ ನೀಡಬೇಕಾದ ಶುಲ್ಕವನ್ನು ಸರ್ಕಾರವೇ ಭರಿಸಲು ಕ್ರಮಕೈಗೊಳ್ಳಬೇಕು’ ಎಂದು ಸಂಸ್ಥೆಯ ಅಧ್ಯಕ್ಷ ಶಂಕರ ಹಲಗತ್ತಿ ಹೇಳಿದರು.

‘ಕೋವಿಡ್ ಹಾವಳಿಯ ಈ ಸಂದರ್ಭದಲ್ಲಿ ಶಾಲೆಯ ನವೀಕರಣವನ್ನು ಯಾವ ಷರತ್ತುಗಳೂ ಇಲ್ಲದೆ 5 ವರ್ಷಕ್ಕೆ ನವೀಕರಿಸಲು ಶಿಕ್ಷಣ ಇಲಾಖೆ ಆದೇಶಿಸಬೇಕು. ಬಜೆಟ್ ಶಾಲೆಗಳು ಹಾಗೂ ಬೃಹತ್ ಶಾಲೆಗಳನ್ನು ಒಂದೇ ದೃಷ್ಟಿಕೋನದಿಂದ ನೋಡುವುದನ್ನು ಸರ್ಕಾರ ನಿಲ್ಲಿಸಬೇಕು. ಶಾಲಾ ಶುಲ್ಕ ಪಡೆಯುವ ಆಧಾರದ ಮೇಲೆ ಶಿಕ್ಷಕರಿಗೆ ವೇತನ ನೀಡುವ ಮತ್ತು ಶುಲ್ಕ ನಿಗದಿಪಡಿಸುವ ಕುರಿತಂತೆ ಎ, ಬಿ, ಸಿ ಶ್ರೇಣಿಯನ್ನು ಮಾಡಿ ಸಮಗ್ರ ಶಿಕ್ಷಣ ನೀತಿಯನ್ನು ಪ್ರಕಟಿಸಲು ತುರ್ತಾಗಿ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಕಾರ್ಯದರ್ಶಿ ಎಸ್‌.ವಿ.ಸಾಲಿಮಠ ಮಾತನಾಡಿ, ‘ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮಕ್ಕಳನ್ನು ಹಾಗೂ ಶಾಲೆಗಳನ್ನು ಒಂದೇ ದೃಷ್ಟಿಯಿಂದ ಸರ್ಕಾರ ನೋಡಬೇಕು. ಶೈಕ್ಷಣಿಕ ಸಮಸ್ಯೆಗಳು ಬಂದಾಗ ಬರೀ ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸಿ ಅಭಿಪ್ರಾಯ ಮತ್ತು ಮಾಹಿತಿಯನ್ನು ಸರ್ಕಾರ ಪಡೆಯುತ್ತದೆ. ಆದರೆ ಉತ್ತರ ಕರ್ನಾಟಕದಲ್ಲಿ ಹೆಚ್ಚು ಖಾಸಗಿ ಶಾಲೆಗಳಿವೆ. ಹೀಗಿದ್ದರೂ ಇಲ್ಲಿಯವರ ಅಭಿಪ್ರಾಯವನ್ನು ಸರ್ಕಾರ ಪಡೆಯುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರುಪ್ಸಾ ಸಂಘಟನೆ ಮತ್ತು ಕರ್ನಾಟಕ ಗ್ರಾಮೀಣ ಅನುದಾನರಹಿತ ಖಾಸಗಿ ಶಾಲೆಗಳು ಸಂಘಟನೆಗಳು ಬೆಂಬಲಿಸಿದ್ದವು. ಧರಣಿ ನಿರತರು ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು