ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ದರ ಪರಿಷ್ಕರಣೆ ಕೈಬಿಡಲು ಒತ್ತಾಯ

ಸಾರ್ವಜನಿಕರೊಂದಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸಭೆ
Last Updated 1 ಮಾರ್ಚ್ 2023, 6:03 IST
ಅಕ್ಷರ ಗಾತ್ರ

ಧಾರವಾಡ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮಂಗಳವಾರ ನಡೆಸಿದ ವಿದ್ಯುತ್ ದರ ಪರಿಷ್ಕರಣೆಯ ಸಾರ್ವಜನಿಕ ವಿಚಾರಣೆಯಲ್ಲಿ ಪಾಲ್ಗೊಂಡಿದ್ದ ಉದ್ಯಮಿಗಳು, ಸಂಘ–ಸಂಸ್ಥೆಗಳ ಪ್ರತಿನಿಧಿಗಳು, ಕೈಗಾರಿಕಾ ಕಂಪನಿ ಪ್ರತಿನಿಧಿಗಳು, ರೈತರು ವಿದ್ಯುತ್ ದರ ಪರಿಷ್ಕರಣೆ ಕೈಬಿಡುವಂತೆ ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಂಗಣದಲ್ಲಿ ಆಯೋಗದ ಅಧ್ಯಕ್ಷ ಪಿ. ರವಿಕುಮಾರ್, ಸದಸ್ಯರಾದ ಎಚ್.ಎಂ. ಮಂಜುನಾಥ, ಎಂ.ಡಿ. ರವಿ ನೇತೃತ್ವದಲ್ಲಿ ಸಭೆ ನಡೆಯಿತು.

ಉತ್ತರ ಕನ್ನಡ ಜಿಲ್ಲೆಯ ಮಾಧವ ಹೆಗಡೆ ಮಾತನಾಡಿ, ‘ನಿತ್ಯ 7 ಗಂಟೆ ಮೂರು ಫೇಸ್‌ಗಳ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಕಂಬಗಳು ಬೀಳುವ ಸ್ಥಿತಿಯಲ್ಲಿದ್ದರೂ ದುರಸ್ತಿ ಮಾಡಿಲ್ಲ. ಅರ್ಜಿ ಸಲ್ಲಿಸಿ ಎರಡು ವರ್ಷಗಳೂ ಗತಿಸಿದರೂ ಟಿಸಿ ಒದಗಿಸಿಲ್ಲ. ಇದರಿಂದ ನೀರಾವರಿ ಅವಲಂಬಿತ ರೈತರಿಗೆ ಅನ್ಯಾಯವಾಗುತ್ತಿದೆ. ಇಂತಹ ಸಮಯದಲ್ಲಿ ವಿದ್ಯುತ್ ದರ ಹೆಚ್ಚಿಸಿ, ಹೊರೆ ಹಾಕಬಾರದು’ ಎಂದು ಮನವಿ ಮಾಡಿದರು.

ಸಂಯುಕ್ತ ಕಿಸಾನ್ ಸಂಘದ ಬೆಳಗಾವಿ ಘಟಕದ ಸದಸ್ಯ ಎಸ್. ಶಿವಾನಂದ ಮಾತನಾಡಿ, ‘ಕಳೆದ 40 ವರ್ಷಗಳಿಂದ ವಿದ್ಯುತ್ ತಂತಿ ಮಾರ್ಗಗಳ ದುರಸ್ತಿ ಆಗಿಲ್ಲ. ಆದರೂ ಪ್ರತಿ ಬಾರಿ ನಿಗದಿತ ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ. ಇದನ್ನು ಕಡಿಮೆ ಮಾಡಬೇಕು’ ಎಂದರು.

ಅದಕ್ಕೆ ಉತ್ತರಿಸಿದ ಆಯೋಗದ ಅಧ್ಯಕ್ಷ, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕರ್ನಾಟಕ ಹಿತ ರಕ್ಷಣಾ ಸಮಿತಿ ಬಿ.ತುಷಾರ್ ಮಾತನಾಡಿ, ‘ಗ್ರಾಹಕರಿಗಾಗಿ ಇರುವ ಬಹುತೇಕ ಯೋಜನೆಗಳ ಅನುಷ್ಠಾನ ಆಗುತ್ತಿಲ್ಲ. ಅಧಿಕಾರಿಗಳು ಕುಂಟು ನೆಪ ಹೇಳಿ ಕಾಲ ಕಳೆಯುತ್ತಿದ್ದಾರೆ. ಮುಂಗಡ ಶುಲ್ಕ ಪಾವತಿಸುವ ಗ್ರಾಹಕರಿಗೆ ಶೇ. 2.5ರಷ್ಟು ಹಣ ವಾಪಸ್ ಕೊಡಬೇಕೆಂಬ ಯೋಜನೆಯಿದೆ. ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.

ಈ ಕುರಿತು ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ರವಿಕುಮಾರ್, ‘ಕಾರಣ ಹೇಳದೇ ಯೋಜನೆಗಳನ್ನು ಅನುಷ್ಠಾನ ಮಾಡಬೇಕು. ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ರೈತರಿಂದ ಕಡಿಮೆ ಬೆಲೆಯಲ್ಲಿ ಕಬ್ಬು ಖರೀದಿಸುವ ಕಾರ್ಖಾನೆಗಳು, ಕಬ್ಬಿನ ಉತ್ಪನ್ನಗಳಿಂದ ವಿದ್ಯುತ್ ತಯಾರಿಸುತ್ತಿವೆ. ಅದನ್ನು ರೈತರಿಗೆ ಉಚಿತವಾಗಿ ನೀಡಲು ಆಯೋಗ ಕ್ರಮ ಜರುಗಿಸಬೇಕು ಎಂದು ಕಲಘಟಗಿಯ ಕಬ್ಬು ಬೆಳೆಗಾರರು ಆಗ್ರಹಿಸಿದರು.

ಟಿಸಿ ಒದಗಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಹಗಲು–ರಾತ್ರಿಯಲ್ಲಿ ಒದಗಿಸುವ ತ್ರಿಫೇಸ್ ವಿದ್ಯುತ್ ಬಗ್ಗೆ ಸ್ಪಷ್ಟತೆ ನೀಡುವಂತೆ ಆಯೋಗದ ಅಧ್ಯಕ್ಷ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಧಾರವಾಡ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಕೈಗಾರಿಕೋದ್ಯಮಿಗಳು, ವಿವಿಧ ಗ್ರಾಹಕ ಸಂಘಗಳು, ವಿದ್ಯುತ್ ಬಳಕೆದಾರರ ಸಂಘಗಳು, ರೈತರು, ಸಾರ್ವಜನಿಕರು ಭಾಗವಹಿಸಿ, ದರ ಹೆಚ್ಚಳಕ್ಕೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT