ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಕರಿಗೆ ಮಗು ಹಸ್ತಾಂತರಿಸಲು ಆಗ್ರಹ

Last Updated 30 ಸೆಪ್ಟೆಂಬರ್ 2022, 16:59 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಭಾರತ ಮೂಲದ 17 ತಿಂಗಳ ಹೆಣ್ಣು ಮಗುವನ್ನು ಜರ್ಮನಿಯ ಪೊಲೀಸ್‌ ಅಧಿಕಾರಿಗಳ ವಶದಿಂದ ಬಿಡಿಸಿ ಅವರ ಪಾಲಕರಿಗೆ ಒಪ್ಪಿಸಲು ಕ್ರಮಕೈಗೊಳ್ಳಬೇಕೆಂದು ರಾಷ್ಟ್ರಪತಿ, ಪ್ರಧಾನಿ, ವಿದೇಶಾಂಗ ಸಚಿವ ಹಾಗೂ ಮುಖ್ಯಮಂತ್ರಿಗೆ ನಗರದಲ್ಲಿ ಜೈನ ಸಮುದಾಯದವರು ಶುಕ್ರವಾರ ಒತ್ತಾಯಿಸಿದರು.

ನಗರದ ಕಂಚಗಾರ ಗಲ್ಲಿಯಿಂದ ಮಿನಿ ವಿಧಾನಸೌಧದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಅವರು, ಮಗುವನ್ನು ರಕ್ಷಿಸಿ ಎನ್ನುವ ಮಾಹಿತಿ ಇರುವ ಬ್ಯಾನರ್‌ ಪ್ರದರ್ಶಿಸಿದರು. ರಾಷ್ಟ್ರಪತಿ ಸೇರಿದಂತೆ ಗಣ್ಯರಿಗೆ ಮಾಡಿಕೊಂಡ ಮನವಿಯನ್ನು ತಹಶೀಲ್ದಾರ್‌ ಅವರಿಗೆ ಸಲ್ಲಿಸಿದರು.

ಜರ್ಮನಿಯಲ್ಲಿ ನೆಲೆಸಿರುವ ಜೈನ ಸಮುದಾಯದ ದಂಪತಿ, ತಮ್ಮ ಮಗುವಿನ ಡೈಪರ್‌ನಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿವೆ ಎಂದು ವೈದ್ಯರ ಬಳಿ ಕರೆದೊಯ್ದಿದ್ದರು. ಆಗ, ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಅಲ್ಲಿನ ಪೊಲೀಸರು ಮಗುವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯುವ ಬದಲು, ಮಗುವನ್ನು ಯಾಕೆ ಪಡೆದಿದ್ದಾರೆ. ಮಗುವಿಗೆ ಆರು ತಿಂಗಳು ಇದ್ದಾಗಲೇ ವಶಕ್ಕೆ ಪಡೆದಿದ್ದು, ಇದೀಗ ಮಗುವಿಗೆ ಒಂದೂವರೆ ವರ್ಷವಾಗಿದೆ. ಇದುವರೆಗೆ ಮಗುವನ್ನು ಬಿಟ್ಟಿಲ್ಲ’ ಎಂದು ಸಮಾಜದ ಮುಖಂಡ ಮಹೇಂದ್ರ ಸಿಂಘಿ ವಿವರಿಸಿದರು.

‘ಅಹಿಂಸೆಯನ್ನು ಪ್ರತಿಪಾದಿಸುವ ಜೈನ್‌ ಸಮಾಜದ ಮಗುವಿಗೆ, ಮಾಂಸಾಹಾರ ತಿನ್ನಿಸುವ ಸಾಧ್ಯತೆಯಿದೆ. ಹೆಚ್ಚು ಕಾಲ ಅವರ ವಶದಲ್ಲಿದ್ದರೆ, ನಮ್ಮ ಸಂಸ್ಕೃತಿ, ಭಾಷೆ ಕಲಿಸಲು ಕಷ್ಟವಾಗುತ್ತದೆ. ಕೂಡಲೇ, ರಾಷ್ಟ್ರಪತಿ ಮತ್ತು ಪ್ರಧಾನಿ ಅವರು ಮಧ್ಯಪ್ರವೇಶಿಸಿ, ಮಗುವನ್ನು ಪೋಷಕರಿಗೆ ಹಸ್ತಾಂತರಿಸುವಂತೆ ಜರ್ಮನಿಯ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಆಗ್ರಹಿಸಿದರು.

ಚಂದ್ರಶೇಖರ ಗೋಕಾಕ, ನಿರಂಜನ ಹಿರೇಮಠ, ರಾಜೇಂದ್ರ ಬಿಳಗಿ, ರಾಕೇಶ ಕೊಠಾರಿಯಾ, ರಮೇಶ ಕೊಠಾರಿ, ಪವನ್‌ ಓಸ್ತವಾಲ್‌, ಮುಖೇಶ ಕೊಠಾರಿ, ಅಮೃತ ಓಸ್ತವಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT