ಹುಬ್ಬಳ್ಳಿ: ಎಪಿಎಂಸಿ ಹತ್ತಿರದ ಅಮರಗೋಳ ರೈಲ್ವೆ ನಿಲ್ದಾಣದಿಂದಲೇ ಕೃಷಿ ಉತ್ಪನ್ನಗಳ ಸರಕು ತುಂಬಲು ವ್ಯವಸ್ಥೆ ಕಲ್ಪಿಸಬೇಕು ಎಂದು ವ್ಯಾಪಾರಸ್ಥರ ಸಂಘದ ಗೌರವ ಕಾರ್ಯದರ್ಶಿ ರಾಜಕಿರಣ ಮೆಣಸಿನಕಾಯಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಎಪಿಎಂಸಿ ಮಾರುಕಟ್ಟೆಯಲ್ಲಿ 1,000ಕ್ಕೂ ಅಧಿಕ ವ್ಯಾಪಾರಸ್ಥರು ಕೃಷಿ ಉತ್ಪನ್ನಗಳ ವ್ಯಾಪಾರ ನಡೆಸುತ್ತಾರೆ. ಬೇರೆ ಜಿಲ್ಲೆ, ರಾಜ್ಯಗಳಿಂದ ಕೃಷಿ ಉತ್ಪನ್ನಗಳು ಮಾರಾಟಕ್ಕೆ ಬರುತ್ತವೆ ಹಾಗೂ ವ್ಯಾಪಾರಸ್ಥರು ಖರೀದಿಗೆ ಬರುತ್ತಾರೆ. ಮೆಕ್ಕೆಜೋಳ, ಹತ್ತಿಕಾಳು, ಹಿಂಡಿ, ಆಹಾರಧಾನ್ಯ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಖರೀದಿಸಿ ಬೇರೆ ರಾಜ್ಯಗಳಿಗೆ ಕಳುಹಿಸಲು ಹುಬ್ಬಳ್ಳಿ ಅಥವಾ ರಾಯಾಪುರ ರೈಲ್ವೆ ಸ್ಟೇಷನ್‌ಗೆ ಹೋಗಬೇಕಾಗಿದೆ. ಇದರಿಂದ ಸಮಯದ ಅಭಾವ, ಲಾರಿ ಬಾಡಿಗೆ, ಹಮಾಲಿ ಕೂಲಿ ನೀಡಬೇಕಾಗುಗುತ್ತದೆ’ ಎಂದಿದ್ದಾರೆ.
‘ಅಮರಗೋಳ ರೈಲ್ವೆ ನಿಲ್ದಾಣದಿಂದಲೇ ಕೃಷಿ ಉತ್ಪನ್ನಗಳ ಸರಕು ತುಂಬಲು ವ್ಯವಸ್ಥೆ ಕಲ್ಪಿಸಿದರೆ ವ್ಯಾಪಾರಸ್ಥರಿಗೆ ಸಹಾಯವಾಗಲಿದೆ. ಹೆಚ್ಚಿನ ಖರ್ಚು ತಪ್ಪಿಸಿದಂತಾಗುತ್ತದೆ. ಸಮಯವೂ ಉಳಿತಾಯವಾಗುತ್ತದೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.