ಶನಿವಾರ, ನವೆಂಬರ್ 23, 2019
17 °C

ಸರ್ಕಾರ ವಜಾಕ್ಕೆ ಆಗ್ರಹ ಹಾಸ್ಯಾಸ್ಪದ: ಶೆಟ್ಟರ್

Published:
Updated:

ಹುಬ್ಬಳ್ಳಿ: ಸುಳ್ಳು ಆಡಿಯೊ ಮತ್ತು ವಿಡಿಯೊಗಳನ್ನು ಇಟ್ಟುಕೊಂಡು ಕ್ಷುಲ್ಲಕ ರಾಜಕೀಯ ಮಾಡುವುದು ಕಾಂಗ್ರೆಸ್‌ಗೆ ಹವ್ಯಾಸವಾಗಿದೆ ಎಂದು ಸಚಿವ ಜಗದೀಶ ಶೆಟ್ಟರ್‌ ಟೀಕಿಸಿದ್ದಾರೆ.

‘ಸುಳ್ಳು ಆಡಿಯೊ ಹಾಗೂ ವಿಡಿಯೊ ಇಟ್ಟುಕೊಂಡು ರಾಜಭವನಕ್ಕೆ ತೆರಳಿ ಸರ್ಕಾರದ ವಜಾಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ವರ್ತನೆ ಕ್ಷುಲ್ಲಕ ಹಾಗೂ ಹಾಸ್ಯಾಸ್ಪದ’ ಎಂದು ಲೇವಡಿ ಮಾಡಿದ್ದಾರೆ.

‘ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿರುವಾಗ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಇದಾಗಿದೆ. ಜನರ ಕಷ್ಟಗಳಿಗೆ ಸ್ಪಂದಿಸುವುದು ಬಿಟ್ಟು, ಅನಗತ್ಯ ಗೊಂದಲ ಸೃಷ್ಟಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇಂಥ ಸುಳ್ಳು ಹೇಳಿಕೆಗಳು ಕಾಂಗ್ರೆಸ್‌ ನಾಯಕರ ಬೌದ್ಧಿಕ ದಿವಾಳಿತನ ತೋರಿಸುತ್ತದೆ. ಹಿಂದೆಯೂ ಬಿ.ಎಸ್‌. ಯಡಿಯೂರಪ್ಪ ಮತ್ತು ಅನಂತಕುಮಾರ್‌ ಅವರು ಪಕ್ಷದ ಆಂತರಿಕ ವೇದಿಕೆಯಲ್ಲಿ ಮಾತನಾಡಿದ್ದನ್ನು ಧ್ವನಿಮುದ್ರಣ ಮಾಡಿ ಬಿಡುಗಡೆ ಮಾಡಿ ರಾದ್ದಾಂತ ಮಾಡಿದ್ದು ಇತಿಹಾಸ’ ಎಂದಿದ್ದಾರೆ.

‘ಸ್ವತಃ ವಕೀಲರಾಗಿರುವ ಸಿದ್ದರಾಮಯ್ಯ ಅವರು ಯಾವುದೇ ಕಾನೂನು ಮೌಲ್ಯವಿಲ್ಲದೆ ಕ್ಷುಲ್ಲಕ ವಿಷಯದ ಬಗ್ಗೆ ಮಾತನಾಡುವುದನ್ನು ನೋಡಿದರೆ, ಅವರ ಕಾನೂನು ಜ್ಞಾನದ ಬಗ್ಗೆ ಅನುಮಾನ ಉಂಟಾಗುತ್ತದೆ. ಇಂಥ ಧ್ವನಿ ಸುರುಳಿಗಳು ಮತ್ತು ಜನರ ಹೇಳಿಕೆಗಳ ಬಗ್ಗೆ ಹಿಂದೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳನ್ನು ಅವರು ಪರಮಾರ್ಶೆ ಮಾಡಿದರೆ ಉತ್ತಮ’ ಎಂದು ಶೆಟ್ಟರ್ ಸಲಹೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)