ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಖಾಸಗೀಕರಣ ಕೈ ಬಿಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸಾರಿಗೆ ಸೇರಿದಂತೆ ಬಹಳಷ್ಟು ವಲಯಗಳಲ್ಲಿ ರಾಜ್ಯ ಸರ್ಕಾರ ಖಾಸಗೀಕರಣಕ್ಕೆ ಆದ್ಯತೆ ಕೊಡುತ್ತಿದೆ. ಇದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮೇಲೆ ಪರಿಣಾಮ ಬೀರುತ್ತಿದ್ದು, ಖಾಸಗೀಕರಣಕ್ಕೆ ಅವಕಾಶ ನೀಡಬಾರದು ಎಂದು ಉತ್ತರ ಜನಶಕ್ತಿ ಸೇನಾ ಪಕ್ಷದ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ಎಸ್‌.ಎಸ್‌. ಶಂಕರಣ್ಣ ಆಗ್ರಹಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹುಬ್ಬಳ್ಳಿ–ಧಾರವಾಡ ನಡುವೆ ಬಿಆರ್‌ಟಿಎಸ್‌ ಸಂಚಾರ ಆರಂಭವಾದ ಬಳಿಕವೂ ಬೇಂದ್ರೆ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಅವಳಿ ನಗರಗಳಿಗಷ್ಟೇ ಸೀಮಿತವಾಗಿದ್ದ ಖಾಸಗಿ ಬಸ್‌ಗಳ ಸಂಚಾರ ಈಗ ದೂರದ ಊರುಗಳಿಗೂ ವಿಸ್ತರಣೆಯಾಗಿದೆ’ ಎಂದರು.

‘ಹುಬ್ಬಳ್ಳಿಯಿಂದ ಬಾಗಲಕೋಟೆ ಹಾಗೂ ವಿಜಯಪುರಕ್ಕೆ 15, ಗದುಗಿಗೆ 11 ಮತ್ತು ಬೆಳಗಾವಿಯಿಂದ ಅಥಣಿ ಮತ್ತು ವಿಜಯಪುರಕ್ಕೆ 15 ಖಾಸಗಿ ಬಸ್‌ಗಳಿಗೆ ಸರ್ಕಾರ ಪರ್ಮಿಟ್‌ ನೀಡಿದೆ. ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿಯನ್ನೇ ನಂಬಿಕೊಂಡು 1.3 ಲಕ್ಷ ಸಿಬ್ಬಂದಿ ಇದ್ದಾರೆ. ಕೋವಿಡ್‌ ಕಾರಣದಿಂದಾಗಿ ಅವರಿಗೂ ಪೂರ್ಣ ವೇತನ ಸೇರಿದಂತೆ ಇನ್ನಿತರ ಸೌಲಭ್ಯಗಳು ಸಿಗುತ್ತಿಲ್ಲ. ಖಾಸಗಿಗೆ ಪರ್ಮಿಟ್‌ ನೀಡುವುದನ್ನು ಮುಂದುವರಿಸಿದರೆ ಸಾರಿಗೆ ನಿಗಮಗಳು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ತಮಿಳುನಾಡು ಮಾದರಿಯಲ್ಲಿ ಶೇ 60ರಷ್ಟು ಸರ್ಕಾರಿ ಮತ್ತು ಶೇ 40ರಷ್ಟು ಖಾಸಗಿ ಬಸ್‌ಗಳ ಓಡಾಟಕ್ಕೆ ಮಾತ್ರ ಅವಕಾಶ ಕೊಡಬೇಕು. ಸರ್ಕಾರಿ ಸ್ವಾಮ್ಯದ ಉದ್ಯಮಗಳು ನಷ್ಟದಲ್ಲಿವೆ ಎಂದು ತೋರಿಸಿ ಕಾಯಂ ಆಗಿ ಅವುಗಳನ್ನು ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ. ಇದರಿಂದ ಖಾಸಗೀಕರಣಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ’ ಎಂದು ಆರೋಪಿಸಿದರು.

ಈರಣ್ಣ ಎಮ್ಮಿ ಹಾಗೂ ಸಂಜೀವ ಧುಮ್ಮಕ್ಕನಾಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.