ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಜಾಗೃತಿ ಮಧ್ಯೆಯೂ ಡೆಂಗಿ ಉಲ್ಬಣ!

ವರ್ಷದಿಂದ ವರ್ಷಕ್ಕೆ ಏರಿಕೆ, 2023ರ ಏಪ್ರಿಲ್‌ವರೆಗೆ 54 ಪ್ರಕರಣಗಳು ವರದಿ
Published 25 ಮೇ 2023, 6:56 IST
Last Updated 25 ಮೇ 2023, 6:56 IST
ಅಕ್ಷರ ಗಾತ್ರ

ಶಿವರಾಯ ಪೂಜಾರಿ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸದ್ದಿಲ್ಲದೆ ಡೆಂಗಿ ಪ್ರಕರಣಗಳು ಹೆಚ್ಚುತ್ತಿವೆ. ಡೆಂಗಿ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸಿದರೂ ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಪ್ರಸಕ್ತ ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ 560 ಜನರಲ್ಲಿ ಡೆಂಗಿ ಗುಣಲಕ್ಷಣಗಳು ಕಂಡುಬಂದಿದ್ದು, 504 ಡೆಂಗಿ ಶಂಕಿತರ ರಕ್ತ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 54 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಧಾರವಾಡದಲ್ಲಿ 8,  ಧಾರವಾಡ ನಗರ 20, ಹುಬ್ಬಳ್ಳಿ 4, ಹುಬ್ಬಳ್ಳಿ ನಗರ 13, ಕಲಘಟಗಿ 2, ಕುಂದಗೋಳ 4, ನವಲಗುಂದ 3 ಪ್ರಕರಣಗಳು ದಾಖಲಾಗಿವೆ.

ಕೊರೊನಾ ಹಿನ್ನೆಲೆ 2020ರಲ್ಲಿ 36 ಡೆಂಗಿ ಪ್ರಕರಣಗಳು ಮಾತ್ರ ದಾಖಲಾಗಿದ್ದವು. ಆದರೆ, ಕಳೆದ ವರ್ಷ 2022ರಲ್ಲಿ ಗರಿಷ್ಠ ಪ್ರಕರಣಗಳು ಕಾಣಿಸಿಕೊಂಡಿದ್ದವು. 1,136 ಡೆಂಗಿ ಶಂಕಿತರ ರಕ್ತ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 264 ಪ್ರಕರಣಗಳು ದೃಢಪಟ್ಟಿದ್ದವು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

‘DENV1, DENV2, DENV3 ಮತ್ತು DENV4 - ಈ ನಾಲ್ಕರಲ್ಲಿ ಯಾವುದಾದರೊಂದು ವೈರಸ್‌ನಿಂದ ಡೆಂಗಿ ಜ್ವರ ಕಾಣಿಸಿಕೊಳ್ಳುತ್ತದೆ. ಈಡಿಸ್ ಸೊಳ್ಳೆಯಿಂದ ಬರುವ ಕಾಯಿಲೆಯಾಗಿದೆ. ತೀವ್ರ ಜ್ವರ, ಮೈಕೈ ನೋವು ಮತ್ತು ಕೀಲುನೋವು, ತಲೆನೋವು, ಕಣ್ಣಿನ ಹಿಂಭಾಗದ ನೋವು, ವಾಕರಿಕೆ ಮತ್ತು ವಾಂತಿ, ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವವಾಗುವುದು ಡೆಂಗಿ ಲಕ್ಷಣಗಳಾಗಿವೆ’ ಎಂದು ಜಿಲ್ಲಾ ಮಲೇರಿಯಾ ರೋಗ ನಿಯಂತ್ರಣಾಧಿಕಾರಿ ಡಾ. ಮಂಜುನಾಥ ಮಾಹಿತಿ ನೀಡಿದರು.

ಡೆಂಗಿ ಶುದ್ಧ ನೀರಿನಲ್ಲೂ ಉತ್ಪತ್ತಿ ಆಗುತ್ತದೆ. ಹೀಗಾಗಿ ಎಚ್ಚರ ವಹಿಸಬೇಕು. ಮನೆಯಲ್ಲಿನ ನೀರಿನ ತೊಟ್ಟಿಗಳು, ಡ್ರಮ್‌, ಬ್ಯಾರೆಲ್‍ ಮತ್ತು ಸಿಂಟೆಕ್ಸ್‌ಗಳನ್ನು ಕನಿಷ್ಠ ವಾರಕ್ಕೆ ಒಮ್ಮೆಯಾದರೂ ಸ್ವಚ್ಛಗೊಳಿಸಿ, ಭದ್ರವಾಗಿ ಮುಚ್ಚಿಡಬೇಕು. ಅಲ್ಲದೆ, ಮನೆ ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಮಲೇರಿಯಾ, ಚಿಕುನ್ ಗುನ್ಯ ಬಗ್ಗೆಯೂ ಇರಲಿ ಎಚ್ಚರ: 

‘ಮಳೆಗಾಲದ ವೇಳೆ ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಮನೆ ಸುತ್ತಲೂ ನೀರು ನಿಲ್ಲದಂತೆ, ಸೊಳ್ಳಗಳ ಉತ್ಪತ್ತಿ ತಾಣವಾಗದಂತೆ ನೋಡಿಕೊಂಡು ಸ್ವಚ್ಛ ಪರಿಸರ ಕಾಪಾಡಿಕೊಳ್ಳಬೇಕು’ ಎಂದು ಡಾ. ಮಂಜುನಾಥ ಸಲಹೆ ನೀಡಿದರು.

‘2022ರಲ್ಲಿ ಜಿಲ್ಲೆಯಲ್ಲಿ 9 ಮಲೇರಿಯಾ ಪ್ರಕರಣಗಳು ಕಂಡುಬಂದಿದ್ದವು. ಈ ವರ್ಷ ಏಪ್ರಿಲ್ ಅಂತ್ಯದವರೆಗೆ ನವಲಗುಂದ ತಾಲ್ಲೂಕಿನಲ್ಲಿ 1 ಹಾಗೂ ಹುಬ್ಬಳ್ಳಿ ನಗರದಲ್ಲಿ 1 ಸೇರಿ 2 ಪ್ರಕರಣಗಳು ವರದಿಯಾಗಿವೆ.

ಅಲ್ಲದೆ, 2022ರಲ್ಲಿ 43 ಚಿಕುನ್ ಗುನ್ಯ ಪ್ರಕರಣಗಳು ಕಾಣಿಸಿಕೊಂಡಿದ್ದವು. ಪ್ರಸಕ್ತ ವರ್ಷ ಏಪ್ರಿಲ್‌ವರೆಗೆ 306 ಚಿಕುನ್ ಗುನ್ಯ ಶಂಕಿತರ ರಕ್ತಪರೀಕ್ಷೆ ಮಾಡಲಾಗಿದ್ದು, 7 ಜನರಲ್ಲಿ ಕಾಯಿಲೆ ಕಾಣಿಸಿಕೊಂಡಿತ್ತು ಎಂದು ತಿಳಿಸಿದರು.

Highlights - null

Quote - ಮಕ್ಕಳು ಗರ್ಭಿಣಿಯರು ವೃದ್ಧರಿಗೆ ಡೆಂಗಿ ಗಂಭೀರವಾಗಿ ಮಾರ್ಪಡುವ ಸಾಧ್ಯತೆ ಹೆಚ್ಚು. ಹೀಗಾಗಿ ಹೆಚ್ಚು ಜಾಗರೂಕತೆ ವಹಿಸುವುದು ಅಗತ್ಯ –ಡಾ. ಶಶಿ ಪಾಟೀಲ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ

Cut-off box - ಡೆಂಗಿ ನಿಯಂತ್ರಣಕ್ಕೆ ಜಾಗೃತಿ ‘ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಪ್ರತಿ ಬುಧವಾರ ಮತ್ತು ಶುಕ್ರವಾರದಂದು ಮನೆ ಮನೆಗಳಿಗೆ ತೆರಳಿ ಆರೋಗ್ಯ ಕಾರ್ಯಕರ್ತರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ಲಾರ್ವಾ ಸಮೀಕ್ಷೆ ಮಾಡಲಾಗುತ್ತದೆ. ಈ ವೇಳೆ ಸಾಂಕ್ರಾಮಿಕ ರೋಗಗಳ ತಡೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಅಲ್ಲದೆ ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಮೂಲಕ ಫಾಗಿಂಗ್ ಮಾಡಿಸಿ ಸ್ವಚ್ಛ ಪರಿಸರ ಕಾಪಾಡಬೇಕು. ಪಿಡಿಒ ನೇತೃತ್ವದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಮಂಜುನಾಥ ತಿಳಿಸಿದರು. === ಕಳೆದ ಐದು ವರ್ಷಗಳಲ್ಲಿ ಡೆಂಗಿ ಪ್ರಕರಣಗಳು ವರ್ಷ; ಪ್ರಕರಣಗಳು 2018; 122 2019; 250 2020; 36 2021; 123 2022; 264 ====== ಕಳೆದ ಐದು ವರ್ಷಗಳಲ್ಲಿ ಮಲೇರಿಯಾ ಪ್ರಕರಣಗಳು ವರ್ಷ; ಪ್ರಕರಣಗಳು 2018; 25 2019; 17 2020; 08 2021; 06 2022; 09

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT