ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ದೇಸಾಯಿ ವೃತ್ತ: ಕಾಮಗಾರಿ ಮತ್ತೆ ಆರಂಭ

ಹತ್ತು ದಿನದ ಬಳಿಕ ಸಂಚಾರಕ್ಕೆ ಮುಕ್ತ; ಡಾಂಬರು ಕೆಲಸಕ್ಕೆ ಚಾಲನೆ
Last Updated 14 ನವೆಂಬರ್ 2019, 13:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ವಿಜಯಪುರ ರಸ್ತೆಯ ದೇಸಾಯಿ ವೃತ್ತದ ಬಳಿ ನಿರ್ಮಿಸಿರುವ ಮೇಲ್ಸೇತುವೆ ರಸ್ತೆಗೆ ಡಾಂಬರು ಹಾಕುವ ಹಾಗೂ ನನೆಗುದಿಗೆ ಬಿದ್ದಿದ್ದ ಒಂದು ಭಾಗದ ರಸ್ತೆ ನಿರ್ಮಾಣ ಕೆಲಸ ಆರಂಭಗೊಂಡಿದೆ.

ಹಳೇ ಕೋರ್ಟ್ ವೃತ್ತದಿಂದ ಕೇಶ್ವಾಪುರ ಕಡೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಹೆಚ್ಚಿನ ವಾಹನಗಳು ಸಂಚರಿಸುತ್ತವೆ. ಹಾಗಾಗಿ, ರಸ್ತೆ ಕೆಲಸ ಅಪೂರ್ಣವಾಗಿದ್ದರೂ, ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗಿತ್ತು. ಜಲ್ಲಿ ಪುಡಿ ಹಾಕಿದ್ದ ಈ ರಸ್ತೆ ವಿಪರೀತ ದೂಳು ಸೂಸುತ್ತಿತ್ತು. ಇದರಿಂದಾಗಿ, ಸವಾರರಿಗೆ ನಿತ್ಯ ದೂಳಿನ ಮಜ್ಜನವಾಗುತ್ತಿತ್ತು.‌

‘ಮೇಲ್ಸೇತುವೆಗೆ ಡಾಂಬರು ಹಾಕುವ ಹಾಗೂ ಒಂದು ಭಾಗದ ರಸ್ತೆ ನಿರ್ಮಾಣ ಕೆಲಸ ಎರಡು ದಿನದಿಂದ ಆರಂಭಗೊಂಡಿದೆ’ ಎಂದು ಗುತ್ತಿಗೆದಾರ ವಿ.ಎಸ್‌.ವಿ. ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈಲ್ವೆ ಮೇಲ್ಸೇತುವೆಯ ಪೆಟ್ರೋಲ್ ಬಂಕ್ ಬಳಿಯ ರಸ್ತೆ ಜಾಗ ತಕರಾರಿನಲ್ಲಿತ್ತು. ಇದರಿಂದಾಗಿ, ಅಲ್ಲಿನ ಕೆಲಸ ನಿಲ್ಲಿಸಲಾಗಿತ್ತು. ಇದೀಗ ಎಲ್ಲವೂ ಪರಿಹಾರಗೊಂಡಿದೆ. ಹತ್ತು ದಿನದೊಳಗೆ ರಸ್ತೆ ಹಾಗೂ ಡಾಂಬರು ಹಾಕುವ ಕೆಲಸವನ್ನು ಮುಗಿಸಿ, ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಬಳಿಕ, ಅಂಡರ್‌ಪಾಸ್‌ನ ಎರಡೂ ಬದಿಯ ಸರ್ವೀಸ್‌ ರಸ್ತೆ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿದರು.

ಸಂಚಾರ ದಟ್ಟಣೆ:ಕಾಮಗಾರಿ ನಿಮಿತ್ತ ಹಳೇ ಕೋರ್ಟ್‌ ವೃತ್ತದಿಂದ ಗಾಲ್ಫ್ ಕೋರ್ಸ್‌ವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಇದರಿಂದಾಗಿ, ಲ್ಯಾಮಿಂಗ್ಟನ್‌ ರಸ್ತೆ, ಹಳೇ ಕೋರ್ಟ್ ವೃತ್ತ, ಸಂಗೊಳ್ಳಿ ರಾಯಣ್ಣ, ವೃತ್ತ, ಚನ್ನಮ್ಮನ ವೃತ್ತ, ಸ್ಟೇಷನ್ ರಸ್ತೆ, ಸಿದ್ದಪ್ಪ ಕಂಬಳಿ ರಸ್ತೆ ಹಾಗೂ ಪಿಂಟೊ ರಸ್ತೆಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆಯಾಗುತ್ತಿದೆ.

ಸದ್ಯ ವಿಜಯಪುರ ರಸ್ತೆ ಕಡೆಯಿಂದ ಬರುವ ವಾಹನಗಳು ಕೇಶ್ವಾಪುರ ವೃತ್ತದಿಂದ ಎಡ ತಿರುವು ಪಡೆದು, ಲ್ಯಾಮಿಂಗ್ಟನ್‌ ರಸ್ತೆ ಹಾದು ನಗರ ತಲುಪುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT