ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಚಾಕು ಇರಿತ ಪ್ರಕರಣದ ಇಬ್ಬರು ಆರೋಪಿಗಳ ಬಂಧನ

ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ ಚಾಕು ಇರಿತ
Last Updated 9 ಮಾರ್ಚ್ 2022, 6:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಳೆದ ತಿಂಗಳು 23ರಂದು ಬೆಳಗಾವಿ–ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ನಗರದ ಆರ್‌.ಜೆ. ಬೆಟಸೂರ ಎಂಬುವರ ಮೇಲೆ ನಡೆದಿದ್ದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಮೂವರು ದುಷ್ಕರ್ಮಿಗಳು, ಚಲಿಸುತ್ತಿದ್ದ ರೈಲಿನಲ್ಲಿ ಬೆಟಸೂರ ಅವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿ ಹಣ ಹಾಗೂ ಮೊಬೈಲ್‌ ಫೋನ್‌ ಕಿತ್ತುಕೊಂಡು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಪಡೆಯುವಾಗ ದಾವಣಗೆರೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಲ್ಲಿನ ಹಳೇ ಹುಬ್ಬಳ್ಳಿಯ ನೂರಾನಿ ಗ್ರೌಂಡ್‌ ಸಮೀಪದ ಈಶ್ವರ ನಗರದ ಮೊಹಮ್ಮದ್‌ ರಫೀಕ್‌ ಬಂಧಿತ ಆರೋಪಿ. ಇನ್ನುಳಿದ ಇಬ್ಬರು ಬಾಲ ಆರೋಪಿಗಳಾಗಿದ್ದಾರೆ. ಇದರಲ್ಲಿ ಒಬ್ಬ ತಲೆಮರೆಸಿಕೊಂಡಿದ್ದು ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಬಾಲ ಆರೋಪಿಗಳ ಮೇಲೆ ಈ ಹಿಂದೆ ಹುಬ್ಬಳ್ಳಿ, ಗದಗ ಮತ್ತು ದಾವಣಗೆರೆಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಿದ್ದಾರೆ.

ರೈಲ್ವೆ ಪೊಲೀಸ್‌ ಅಧೀಕ್ಷಕಿ ಸಿರಿಗೌರಿ ಡಿ.ಆರ್‌., ಡಿವೈಎಸ್‌ಪಿ ಪುಷ್ಪಲತಾ ಎನ್‌., ಹುಬ್ಬಳ್ಳಿ ರೈಲ್ವೆ ಪೊಲೀಸ್‌ ವೃತ್ತಿ ನಿರೀಕ್ಷಕ ಆಂಜನೇಯ ಎನ್‌.ಎಚ್‌. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕಳವು: ನಗರದ ‌‌ಗೋಕುಲ ರಸ್ತೆ ಶ್ರೇಯಾ ಎಸ್ಟೇಟ್‌ನಲ್ಲಿರುವ ತ್ರಿನೇತ್ರಾ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿದ್ದ ದೇವರ ಎರಡು ಹುಂಡಿಗಳನ್ನು ಕಳವು ಮಾಡಲಾಗಿದೆ.

ಕಳ್ಳರು ದೇವಸ್ಥಾನದ ಕಿಡಕಿಯ ಕಬ್ಬಿಣದ ಗ್ರಿಲ್‌ಗಳನ್ನು ಹರಿತವಾದ ವಸ್ತುವಿನಿಂದ ತೆಗೆದು, ಗರ್ಭಗುಡಿಯಲ್ಲಿದ್ದ ಹುಂಡಿಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಎರಡೂ ಹುಂಡಿಯಲ್ಲಿ ಸೇರಿ ₹50 ಸಾವಿರ ಇರಬಹುದು ಎಂದು ಅಂದಾಜಿಸಲಾಗಿದೆ. ಗೋಕುಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ: ಹಳೇ ಹುಬ್ಬಳ್ಳಿಯ ನೇಕಾರ ನಗರದ ತಿಮ್ಮಸಾಗರ ರಸ್ತೆ ಲೇಔಟ್‌ನ ಮನೆಯೊಂದರಲ್ಲಿ ಒಟ್ಟು ₹4.95 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿವೆ.

ಶರತ್ ಕುಮಾರ ತಬೀಬ ಎಂಬುವರ ಮನೆಯಲ್ಲಿ ಕೃತ್ಯ ನಡೆದಿದ್ದು, ಕಳ್ಳರು ಮನೆಯ ಹಿಂಭಾಗಿಲಿನ ಚಿಲಕ ಮುರಿದು ಬೆಡ್‌ರೂಮ್‌ದಲ್ಲಿದ್ದ 110 ಗ್ರಾಂ ತೂಕದ ಬಂಗಾರ ಕಳ್ಳತನ ಮಾಡಲಾಗಿದೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT