ಭಾನುವಾರ, ಡಿಸೆಂಬರ್ 6, 2020
22 °C

PV Web Exclusive: ದೇವಪ್ಪಜ್ಜ ಎಂದರೆ ನುಡಿ ಕನ್ನಡ, ನಡೆ ಕನ್ನಡ...

ಪ್ರಮೋದ‌ Updated:

ಅಕ್ಷರ ಗಾತ್ರ : | |

Devajja

ಸುಲಿದ ಬಾಳೆಹಣ್ಣಿನಷ್ಟೇ ಸುಲಭ ನಮ್ಮ ಕನ್ನಡ ಭಾಷೆ ಮಾತನಾಡುವುದು. ಭಾಷೆ ಕಲಿತಷ್ಟೂ, ಬಳಸಿದಷ್ಟೂ ಇದರ ಹರಿವು ಹೆಚ್ಚಾಗುತ್ತಲೇ ಹೋಗುತ್ತದೆ. ಆದರೆ, ಅನೇಕ ವರ್ಷಗಳಿಂದ ನಮಗೇ ಗೊತ್ತಿಲ್ಲದಂತೆ ಕನ್ನಡ ಭಾಷೆ ಮಾತನಾಡುತ್ತ ಅದರೊಳಗೆ ಆಂಗ್ಲ ಪದಗಳನ್ನು ಸೇರಿಸಿಕೊಂಡು ಬಿಟ್ಟಿದ್ದೇವೆ. ನಮಗರಿವಿಲ್ಲದೆ ಒಂದಷ್ಟು ಆಂಗ್ಲ ಪದಗಳು ನಮ್ಮ ಮಾತುಗಳ, ಚರ್ಚೆಗಳ ನಡುವೆ ಬಂದು ಹೋಗುತ್ತಿವೆ. ಹೀಗಾಗಿ ನಾವೀಗ ಸ್ವಚ್ಛ ಕನ್ನಡ ಮಾತನಾಡುತ್ತಿಲ್ಲ.

ಇದಕ್ಕೆ ಅಪವಾಧ ಎನ್ನುವಂತೆ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದ ದಕ್ಷಿಣ ವೈಷ್ಣೋದೇವಿ ಮಂದಿರದ ಧರ್ಮದರ್ಶಿ ದೇವಪ್ಪಜ್ಜ ಮಾತು ಮತ್ತು ನಡೆ ಕನ್ನಡವಾಗಿಸಿ ಬದುಕುತ್ತಿದ್ದಾರೆ. ಅವರಿಗೆ ಮಧ್ಯರಾತ್ರಿಯಲ್ಲಿ ಎಬ್ಬಿಸಿ ಮಾತಿಗೆಳೆದರೂ ಅವರಿಂದ ಸ್ವಚ್ಛ, ಅಚ್ಛ ಕನ್ನಡದ ಪದಗಳೇ ಹೊರಡುತ್ತವೆ. ‘ಅಭಿನಯ ಅಂಡಯ್ಯ’ ಎಂದೇ ಹೆಸರಾಗಿರುವ ದೇವಪ್ಪಜ್ಜ ಅವರ ಬಾಯಿಂದ ಆಂಗ್ಲ ಪದಗಳನ್ನು ಹೇಳಿಸಬೇಕು ಎಂದು ಭಾರತದ ಹಲವಾರು ರಾಜ್ಯಗಳಲ್ಲಿ, ವಿದೇಶಗಳಲ್ಲಿ ಸ್ಪರ್ಧೆಗಳು ನಡೆದಿವೆ. ಪ್ರತಿ ನವೆಂಬರ್‌ ಬಂತೆಂದರೆ ಅವರನ್ನು ‘ಸೋಲಿಸಲು’ ಸ್ಪರ್ಧೆಗಳು ಆಯೋಜನೆಯಾಗುತ್ತಲೇ ಇರುತ್ತವೆ. ಒಮ್ಮೆಯೂ ಅವರನ್ನು ಸೋಲಿಸಲು ಸಾಧ್ಯವಾಗಿಲ್ಲ.

ಕನ್ನಡ ಕಂಗ್ಲಿಷ್‌ ಮಯವಾಗಿರುವ ಕಾಲದಲ್ಲಿ ಕನ್ನಡದ ಮಾತಿನ ನಡುವೆ ಆಂಗ್ಲ ಪದಗಳು ನುಸುಳಿಸುವುದು ಕಷ್ಟವೇನಲ್ಲ ಎಂದುಕೊಂಡು ಅನೇಕರು ದೇವಪ್ಪಜ್ಜ ಅವರನ್ನು ಸೋಲಿಸುವ ಹುಮ್ಮಸ್ಸಿನಿಂದ ಬಂದು, ಅವರ ಕನ್ನಡ ಪದಗಳ ಪಾಂಡಿತ್ಯವನ್ನು ಅಪ್ಪಿಕೊಂಡಿದ್ದಾರೆ. 35 ವರ್ಷಗಳಿಂದ ಅವರ ಬಾಯಿಂದ ಆಂಗ್ಲ ಪದಗಳನ್ನು ಹೇಳಿಸಲು ಪೈಪೋಟಿ ನಡೆಯುತ್ತಿದೆ.

ದೇವಪ್ಪಜ್ಜ ಅವರಿಂದ ಆಂಗ್ಲ ಪದಗಳನ್ನು ನುಡಿಸುವ ಸ್ಪರ್ಧೆಗೆ ಸಾಹಿತಿಗಳು, ಕಲಾವಿದರು, ಭಾಷಾ ತಜ್ಞರು, ಶಿಕ್ಷಕರು, ರಾಜಕಾರಣಿಗಳು, ವಿದ್ಯಾರ್ಥಿಗಳು ಹೀಗೆ ಎಲ್ಲರೂ ಪ್ರಯತ್ನಿಸಿ ಸೋತಿದ್ದಾರೆ. ಇವರು ‘ಕನ್ನಡದ ಕಾಯಕ’ ಆರಂಭಿಸಿದ ವರ್ಷಗಳಲ್ಲಿ ₹500ರಿಂದ ₹700ರ ತನಕ ಬಾಜಿ ಕಟ್ಟಲಾಗುತ್ತಿತ್ತು. 2006–07ರ ನವೆಂಬರ್‌ನಲ್ಲಿ ₹1 ಕೋಟಿ ಬಹುಮಾನ ಮೊತ್ತ ನಿಗದಿ ಮಾಡಿದ್ದರೂ, ಅವರನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ.

ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ಚಂದ್ರಶೇಖರ ಪಾಟೀಲ, ಮಾತೆ ಮಹಾದೇವಿ, ಚನ್ನವೀರ ಕಣವಿ, ಚಂದ್ರಕಾಂತ ಬೆಲ್ಲದ, ಸಿ.ಎಸ್‌. ಶಿವಳ್ಳಿ, ಖುಷ್ವಂತ್‌ ಸಿಂಗ್‌, ರಾಮಕೃಷ್ಣ ಹೆಗಡೆ, ಎಂ.ಪಿ. ಪ್ರಕಾಶ, ಪಾಟೀಲ ಪುಟ್ಟಪ್ಪ ಹೀಗೆ ಅನೇಕರು ಅಜ್ಜನಿಂದ ಆಂಗ್ಲ ಪದ ನುಡಿಸಲಾಗದೆ ಸೋಲೊಪ್ಪಿಕೊಂಡಿದ್ದಾರೆ.

ಕುಸುಗಲ್‌ ಮತ್ತು ಹುಬ್ಬಳ್ಳಿಯಲ್ಲಿ ಬದುಕು ಕಳೆದಿರುವ ಅವರು ರಷ್ಯನ್‌ ಭಾಷೆಯಲ್ಲಿ (ಹಿಂದಿ ಮೂಲಕ) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಪತ್ನಿ ಮತ್ತು ಪುತ್ರಿ ಇಬ್ಬರೂ ವೈದ್ಯರು. ಆದರೂ ಕುಟುಂಬದವರ ಜೊತೆ ಆಂಗ್ಲ ಭಾಷೆಯ ಸೊಲ್ಲಿಲ್ಲ. 56 ವರ್ಷದ ದೇವಪ್ಪಜ್ಜ ಕನ್ನಡದ ಜೊತೆಗೆ ರಷ್ಯನ್‌, ಮಲೆಯಾಳಂ, ಗುಜರಾತಿ, ರಾಜಸ್ಥಾನಿ, ಉರ್ದು, ತೆಲುಗು, ಇಂಗ್ಲಿಷ್‌, ಹಿಂದಿ ಸೇರಿದಂತೆ 11 ಭಾಷೆಗಳಲ್ಲಿ ಮಾತನಾಡುತ್ತಾರೆ. ಇವರು ವ್ಯವಹಾರಿಕವಾಗಿ ಮತ್ತು ಕಂಪನಿಯ ಹೆಸರುಗಳನ್ನು (ಉದಾಹರಣೆಗೆ: ಡೆಕ್ಕನ್‌ ಹೆರಾಲ್ಡ್‌, ಟಾಟಾ ಮೋಟರ್ಸ್‌, ಮಾರುತಿ ಸುಜುಕಿ) ಹೇಳಲು ಮಾತ್ರ ಆಂಗ್ಲ ಪದಗಳನ್ನು ಬಳಸುತ್ತಾರೆ. ಉಳಿದ ಸಮಯದಲ್ಲಿ ಎಲ್ಲವೂ ಕನ್ನಡಮಯ.

ಫೋನ್‌ ಮಾಡಿದಾಗಲೆಲ್ಲ ಮೊದಲು ಸಹಜವಾಗಿ ‘ಹಲೊ’ ಎನ್ನುತ್ತೇವೆ. ಇದಕ್ಕೆ ಪ್ರತಿಯಾಗಿ ಯಾರೇ ಕರೆ ಮಾಡಿದರೂ ಅಜ್ಜ ‘ಶರಣರೀ’ ಎಂದು ಮಾತು ಆರಂಭಿಸುತ್ತಾರೆ. ಇಲ್ಲಿಂದಲೇ ಅವರ ಕನ್ನಡ ಭಾಷಾಭಿಮಾನ ಅನಾವರಣಗೊಳ್ಳುತ್ತ ಹೋಗುತ್ತದೆ. ದೇವಪ್ಪಜ್ಜ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದಿದ್ದು ಇಂಗ್ಲಿಷ್‌ ಮಾಧ್ಯಮದಲ್ಲಿ. ಆಂಗ್ಲ ಭಾಷೆಗಳಲ್ಲಿ ಪ್ರಶ್ನೆಗಳನ್ನು ಕೇಳಿದರೂ ಕನ್ನಡದಲ್ಲಿ ಉತ್ತರ ನೀಡುತ್ತಾರೆ.

‘1991ರಲ್ಲಿ ನಿತ್ಯ ₹22 ಕೂಲಿ ಪಡೆಯುತ್ತಿದ್ದ ಕಾರ್ಮಿಕನೊಬ್ಬ ತನ್ನ ದಿನದ ದುಡಿಮೆಯ ಪೂರ್ತಿ ಹಣ ಪಣಕ್ಕಿಟ್ಟು ಕುಸುಗಲ್‌ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ  ಸ್ಪರ್ಧೆ ಆಯೋಜಿಸಿದ್ದ. ಇನ್ನೊಂದು ಸಲ ಹತ್ತು ತೊಲೆ ಬಂಗಾರವಿಟ್ಟು ನನ್ನಿಂದ ಆಂಗ್ಲ ಪದಗಳನ್ನು ಮಾತನಾಡಿಸುವ ಪ್ರಯತ್ನ ಮಾಡಲಾಗಿತ್ತು. ಕಾಲ ಬದಲಾದಂತೆ ಹೊಸ, ಹೊಸ ತಾಂತ್ರಿಕ ಶಬ್ದಗಳು ಬಂದಂತೆ ಕನ್ನಡದಲ್ಲಿ ಪದಗಳನ್ನು ಜೋಡಿಸುವುದು ಕೂಡ ಸವಾಲಾಗಿದೆ. ಹೆಸರುಗಳು ಮತ್ತು ಕಂಪನಿ ಹೆಸರುಗಳನ್ನು ಬಿಟ್ಟು ಬೇರೆ ಎಲ್ಲಿಯೂ ಆಂಗ್ಲ ಪದ ಬಳಸುವುದಿಲ್ಲ. ಯಾರು ಎಲ್ಲೇ ಸ್ಪರ್ಧೆ ಏರ್ಪಡಿಸಿದರೂ ನಾನು ಸಿದ್ಧನಿದ್ದೇನೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು