ಶುಕ್ರವಾರ, ಜೂನ್ 25, 2021
24 °C

ಅಭಿವೃದ್ಧಿ ಕಾರ್ಯ ಅರ್ಹರಿಗೆ ತಲುಪಲಿ: ಸಚಿವ ಜಗದೀಶ ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ‘ಕೋವಿಡ್ ಸೋಂಕು, ಅತಿವೃಷ್ಟಿ ಹಾಗೂ ಪ್ರವಾಹದಂತ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸುವುದರೊಂದಿಗೆ, ಜನಸಾಮಾನ್ಯರ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಲಾಭವು ಅರ್ಹರಿಗೆ ತಲುಪುವಂತೆ ಮಾಡಲು ಪ್ರತಿಯೊಬ್ಬರ ಸಹಕಾರ ಅಗತ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

74ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಇಲ್ಲಿನ ಆರ್‌.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಶನಿವಾರ ಅವರು ಮಾತನಾಡಿದರು.

‘ಕೊರೊನಾ ವೈರಾಣು ಇಡೀ ಜಗತ್ತನ್ನೇ ವ್ಯಾಪಿಸಿರುವ ಸಮಯದಲ್ಲಿ ದೇಶ ಹಾಗೂ ನಮ್ಮ ರಾಜ್ಯ ಅದನ್ನು ಸಮರ್ಥವಾಗಿ ಎದುರಿಸುತ್ತಿದೆ. ಜಿಲ್ಲೆಯಲ್ಲಿ ಮೂಗು ಹಾಗು ಗಂಟಲು ದ್ರವ ಸಂಗ್ರಹಣೆಗೆ 63 ಕೇಂದ್ರಗಳು ಹಾಗೂ ಆ್ಯಂಟಿಜೆನ್ ಪರೀಕ್ಷೆ ನಡೆಸಲಾಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಗುಣಮುಖರಾದ 16 ಜನರು ಪ್ಲಾಸ್ಮಾ ದಾನ ಮಾಡಿದ್ದಾರೆ. ಇವರಿಗೆ ಗೌರವಧನವಾಗಿ ತಲಾ ₹5ಸಾವಿರ ನೀಡಿ ಪುರಸ್ಕರಿಸಲಾಗುತ್ತಿದೆ’ ಎಂದರು.

ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ವಾಡಿಕೆಯಂತೆ 33 ಮಿ.ಮಿ. ಮಳೆ ಬದಲು 78 ಮಿ.ಮೀ. ಮಳೆ ಸುರಿದಿದೆ. ಇದರಿಂದ ಸಾರ್ವಜನಿಕ ಆಸ್ತಿ–ಪಾಸ್ತಿಗೆ ಹಾನಿಯಾಗಿವೆ. ತುರ್ತು ಪರಿಹಾರಕ್ಕಾಗಿ ಸರ್ಕಾರ ₹5ಕೋಟಿ ಬಿಡುಗಡೆ ಮಾಡಿದೆ. ಇದರೊಂದಿಗೆ ಇದೇ ಸಾಲಿನಿಂದ ರೈತರು ತಮ್ಮ ಜಮೀನಿನಲ್ಲಿರುವ ಬೆಳೆಗಳನ್ನು ತಾವೇ ಸಮೀಕ್ಷೆ ಮಾಡುವ ಸಲುವಾಗಿ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಇದರ ಲಾಭವನ್ನು ರೈತರು ಪಡೆದುಕೊಳ್ಳಬೇಕು’ ಎಂದರು.

‘ಕಳಸಾ ಬಂಡೂರಿ ನಾಲಾ ತಿರುವು ಯೋಜನೆಗೆ ₹791.50ಕೋಟಿ ವಿನಿಯೋಗಿಸಲು ರಾಜ್ಯ ಸರ್ಕಾರ ತಾತ್ವಿಕ ಆಡಳಿತಾತ್ಮಕ ಅನುಮೋದನೆ ನೀಡಿದೆ. ಜತೆಗೆ ಬೆಣ್ಣಿಹಳ್ಳ ಪ್ರವಾಹ ನಿಯಂತ್ರಣಕ್ಕೆ ₹1536 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು, ಆದ್ಯತೆ ಮೇರೆಗೆ ಈ ಕಾರ್ಯ ಕೈಗೆತ್ತಿಕೊಳ್ಳಲಾಗುವುದು’ ಎಂದರು.

‘ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಸರ್ಕಾರ ₹386ಕೋಟಿ ಅನುದಾನ ನೀಡಿದ್ದು, ಅದನ್ನು ಬಳಸಿಕೊಂಡು ನಗರವನ್ನು ಅಂದಗೊಳಿಸುವ ಪ್ರಕ್ರಿಯೆ ನಡೆದಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹಳೆಯ ನಿಲ್ದಾಣವನ್ನು ಕಾರ್ಗೊ ಟರ್ಮಿನಲ್ ಆಗಿ ಪರಿವರ್ತಿಸಲಾಗುತ್ತಿದ್ದು, ಈ ವರ್ಷಾಂತ್ಯದೊಳಗೆ ಇದು ಕಾರ್ಯಾರಂಭ ಮಾಡಲಿದೆ. ಹಾಗೆಯೇ ಬಂಡವಾಳ ಹೂಡಿಕೆ ಸಮಾವೇಶದಿಂದ 47 ಕೈಗಾರಿಕೋದ್ಯಮಿಗಳು ಜಿಲ್ಲೆಯಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿದ್ದಾರೆ. ಇದರಿಂದ ₹72ಸಾವಿರ ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆ ಬಂದಿದೆ’ ಎಂದರು.

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಯೋಧರನ್ನು ನೆನೆಯುವುದರ ಜತೆಗೆ ಕೋವಿಡ್ ಸೋಂಕು ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ವೈದ್ಯರು, ಶುಶ್ರೂಷಕ ಸಿಬ್ಬಂದಿ, ಪೌರಕಾರ್ಮಿಕರು, ಅಧಿಕಾರಿಗಳು, ಪೊಲೀಸರ ಪರಿಶ್ರಮವನ್ನೂ ನೆನೆಯಬೇಕಿದೆ. ದೇಶದ ಭವಿಷ್ಯವು ನಮ್ಮ ವಿದ್ಯಾರ್ಥಿಗಳು ಮತ್ತು ಯುವಜನಾಂಗವನ್ನು ಅವಲಂಬಿಸಿದೆ. ನಾವು ನಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸುವುದರ ಮೂಲಕ ಭವ್ಯ ಭಾರತವನ್ನು ನಿರ್ಮಿಸಲು ಕಂಕಣಬದ್ಧರಾಗಬೇಕು.

ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ, ಪೊಲೀಸ್ ಆಯುಕ್ತ ಆರ್. ದಿಲೀಪ್, ಪೊಲೀಸ್ ವರಿಷ್ಠಾಧಿಕಾರಿ ವರ್ತಿಕ ಕಟಿಯಾರ್, ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸಿ.ಸತೀಶ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು