ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ವಿಭಜನೆ ಬೇಡುತ್ತಿರುವ ಕ್ಷೇತ್ರಕ್ಕೆ ಬೇಕಿದೆ ಅಭಿವೃದ್ಧಿ

ಹ್ಯಾಟ್ರಿಕ್ ಗೆಲುವು ದಾಖಲಿಸಿದ ಬಿಜೆಪಿಯ ಅರವಿಂದ ಬೆಲ್ಲದ ಮೇಲೆ ಅಪಾರ ನಿರೀಕ್ಷೆ
Published 25 ಮೇ 2023, 6:52 IST
Last Updated 25 ಮೇ 2023, 6:52 IST
ಅಕ್ಷರ ಗಾತ್ರ

ಧಾರವಾಡ: ಒಂದೆಡೆ ಅಭಿವೃದ್ಧಿ ಹಾಗೂ ಅನುದಾನ ತಾರತಮ್ಯದ ಆರೋಪದಡಿ ಪ್ರತ್ಯೇಕತೆ ಬಯಸುತ್ತಿರುವ ಧಾರವಾಡ. ಅನುದಾನ ಲಭ್ಯವಾದರೂ ಅದು ಬಡವರಿಗೆ ಸಿಗುತ್ತಿಲ್ಲ ಎಂಬ ಕೂಗು ಹುಬ್ಬಳ್ಳಿಯದ್ದು. ಈ ನಡುವೆ ಹುಬ್ಬಳ್ಳಿ–ಧಾರವಾಡ ಪಶ್ಚಿಮದ ಕ್ಷೇತ್ರದಲ್ಲಿ ಇಂದಿಗೂ ಅಭಿವೃದ್ಧಿಯದ್ದೇ ಚರ್ಚೆ.

ಸತತ ಮೂರನೇ ಅವಧಿಗೆ ಶಾಸಕರಾಗುವ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸಿದವರು ಬಿಜೆಪಿಯ ಅರವಿಂದ ಬೆಲ್ಲದ. ಕಾಂಕ್ರೀಟ್ ರಸ್ತೆ ನಿರ್ಮಾಣ, ಬಡವರಿಗೆ ಅಪಾರ್ಟ್‌ಮೆಂಟ್ ಮಾದರಿಯ ಮನೆ ನಿರ್ಮಾಣದ ಸಾಧನೆಯನ್ನು ಚುನಾವಣೆ ಸಂದರ್ಭದಲ್ಲಿ ಹೇಳಿಕೊಂಡಿದ್ದ ಅವರ ಕ್ಷೇತ್ರದಲ್ಲಿ ಇಂದಿಗೂ ಸಮರ್ಪಕ ರಸ್ತೆ ಹಾಗೂ ಮನೆಗಾಗಿ ನಿವಾಸಿಗಳು ಹಾಗೂ ಬಡವರು ಕಾಯುತ್ತಿದ್ದಾರೆ.

ಕೆಲ ಸಂಸ್ಥೆಗಳ ಘೋಷಣೆ ಹೊರತುಪಡಿಸಿದರೆ, ಸ್ಮಾರ್ಟ್ ಸಿಟಿ ಅನುದಾನ ಸೇರಿದಂತೆ ಹಲವು ಅನುದಾನಗಳು ಧಾರವಾಡಕ್ಕೆ ಲಭ್ಯವಾಗಲೇ ಇಲ್ಲ. ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆ ಹುಬ್ಬಳ್ಳಿ–ಧಾರವಾಡ. ಮುರುಘಾಮಠದಿಂದ ಸಿದ್ಧಾರೂಢ ಮಠದವರೆಗೆ ವ್ಯಾಪಿಸಿರುವ ಈ ಕ್ಷೇತ್ರದ ಬಹುತೇಕ ನಗರ ಪ್ರದೇಶ ಹೊಂದಿದೆ. ಎರಡೂ ನಗರಗಳು ಸೇರಿದ್ದರೂ ಧಾರವಾಡ ನಗರ ಮಲತಾಯಿ ಧೋರಣೆ ಅನುಭವಿಸುತ್ತಿದೆ ಎಂಬುದು ಪ್ರತ್ಯೇಕ ಪಾಲಿಕೆ ಹೋರಾಟಗಾರರ ಆರೋಪ.

‘ಚುನಾವಣೆ ಸಂದರ್ಭದಲ್ಲಿ ಪ್ರತ್ಯೇಕ ಪಾಲಿಕೆಗೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಹೇಳಿಕೆ ನೀಡಿದ ಅರವಿಂದ ಬೆಲ್ಲದ, ‘ನಮ್ಮ ಸರ್ಕಾರ ಬಂದರೆ ಆರು ತಿಂಗಳಲ್ಲಿ ಪ್ರತ್ಯೇಕ ಪಾಲಿಕೆ ಮಾಡಲಾಗುವುದು’ ಎಂದು ಭರವಸೆ ನೀಡಿದರು. ತಮ್ಮ ಸರ್ಕಾರ ಇದ್ದಾಗಲೇ ಆಗದ್ದು, ಮುಂದೆ ಹೇಗಾಗಲಿದೆ ಎಂದು ಜನರು ಕುಹಕವಾಡಿದರೂ, ಭಾರೀ ಬಹುತಮದೊಂದಿಗೆ ಗೆಲುವು ತಂದುಕೊಟ್ಟರು. ಈಗ ಶಾಸಕರಾಗಿ ತಮ್ಮ ಜನರ ಬೇಡಿಕೆ ಈಡೇರಿಸುವರೋ ಅಥವಾ ತಮ್ಮ ಸರ್ಕಾರ ಬರಲಿಲ್ಲ ಎಂದು ಕೈಚೆಲ್ಲುತ್ತಾರೋ ನೋಡಬೇಕು’ ಎಂದು ಪ್ರತ್ಯೇಕ ಪಾಲಿಕೆ ಹೋರಾಟ ವೇದಿಕೆಯ ಗೌರವಾಧ್ಯಕ್ಷ ವೆಂಕಟೇಶ ಮಾಚಕೂರ ಹೇಳಿದರು.

‘ಮೂಲ ಧಾರವಾಡದ ಒಳ ರಸ್ತೆಗಳು ಅಭಿವೃದ್ಧಿಯಾಗಬೇಕಿವೆ. ವಿಸ್ತರಣಾ ಪ್ರದೇಶಗಳಲ್ಲೂ ಹಲವು ಕಾಮಗಾರಿಗಳು ಹಾಗೇ ಉಳಿದಿವೆ. ಚುನಾವಣೆ ಸಂದರ್ಭದಲ್ಲಿ ಒಂದಷ್ಟು ರಸ್ತೆಗಳ ಕಾಮಗಾರಿಗಳು ಅಲ್ಲಲ್ಲಿ ಆಗಿವೆ. ಅವು ಪೂರ್ಣಗೊಳ್ಳುವವೋ ಅಥವಾ ಇರುವುದನ್ನೇ ಮುಂದಿನ ಐದು ವರ್ಷ ಜನರು ಬಳಸಬೇಕೋ ಗೊತ್ತಿಲ್ಲ. 40 ವರ್ಷಗಳಿಂದ ಗಾಂಧಿನಗರಕ್ಕೆ ಒಳಚರಂಡಿ ವ್ಯವಸ್ಥೆ ಇಲ್ಲ ಎಂಬುದೇ ಸೋಜಿಗವಾಗಿದೆ. ಸರ್ಕಾರ ಬದಲಾಗಿದೆ, ಪ್ರತ್ಯೇಕ ಪಾಲಿಕೆ ಆಗುವ ಭರವಸೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸವದತ್ತಿ ರಸ್ತೆಯ ಟೆಂಡರ್ ಶೂರ್ ಕನಸಾಗಿಯೇ ಉಳಿಯಿತು. ಜಿಲ್ಲಾಧಿಕಾರಿ ಕೌಂಪೌಂಡ್‌ನಲ್ಲಿ 2018ರಿಂದ ನಿರ್ಮಾಣಗೊಳ್ಳುತ್ತಿರುವ ಕ್ರೀಡಾ ಸಂಕೀರ್ಣ ಕಾಮಗಾರಿ ಕುಂಟುತ್ತಲೇ ಸಾಗಿದೆ. ₹14 ಕೋಟಿಯ ಕಾಮಗಾರಿಯ ಯೋಜನಾ ಗಾತ್ರ ₹35 ಕೋಟಿಗೆ ಹೆಚ್ಚಳಗೊಂಡರೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ’ ಎಂಬುದು ಕ್ರೀಡಾಸಕ್ತರ ಆರೋಪ.

‘ಉತ್ತಮವಾಗಿದ್ದ ಕೆಲಗೇರಿ ಕೆರೆಗೆ ಕೊಳಚೆ ನೀರು ಸೇರುತ್ತಿದೆ. ಇಲ್ಲೊಂದು ಮನರಂಜನಾ ಉದ್ಯಾನ ಬರಲಿದೆ ಎಂಬ ಭರವಸೆ ಈಡೇರಬೇಕಿದೆ. ಉದ್ಯಾನಗಳು ನಿರ್ವಹಣೆ ಕಾಣದೆ ಬಡವಾಗಿವೆ. ನವಲೂರು, ಕೋಳಿಕೆರೆಯ ಸ್ಥತಿಯಂತೂ ಹೇಳುವುದೇ ಬೇಡ. ಕ್ಷೇತ್ರದಲ್ಲಿ ಯುವ ಸಮುದಾಯಕ್ಕೆ ಆರ್.ಎನ್.ಶೆಟ್ಟಿ ಕ್ರೀಡಾಂಗಣ, ಕೆಸಿಡಿ ಹೊರತುಪಡಿಸಿ ಬಡಾವಣೆಗಳಲ್ಲಿ ಕ್ರೀಡಾಂಗಣಗಳಿಲ್ಲ.  ಕಲಾಭವನ ಕಾರ್ಯಾರಂಭಕ್ಕೆ ಇನ್ನೂ ಎಷ್ಟು ದಿನಗಳು ಬೇಕೋ ಗೊತ್ತಿಲ್ಲ’ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದರು.

ಮಳೆಗಾಲದಲ್ಲಿ ಜಲಾವೃತವಾಗುವ ಪಿಬಿ ರಸ್ತೆಯ ಅವ್ಯವಸ್ಥೆಗೆ ಪರಿಹಾರ ಬೇಕಿದೆ. ನವಲೂರು ಬಳಿಯ ಸೇತುವೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಅವಳಿ ನಗರಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಅಭಿವೃದ್ಧಿಯೂ ಆಗಬೇಕಿದೆ. ಬಹಳಷ್ಟು ಅಕ್ರಮ–ಸಕ್ರಮ ಮನೆಗಳಿಗೆ ಹಕ್ಕುಪತ್ರ ಹಾಗೂ ಬಡಾವಣೆಗಳ ಅಭಿವೃದ್ಧಿಯ ಜತೆಗೆ, ನೂರಾರು ಬಡ ಕುಟುಂಬಗಳ ಸೂರಿನ ಕನಸು ನನಸಾಗಬೇಕಿದೆ ಎಂಬ ಬೇಡಿಕೆಗಳು ಕ್ಷೇತ್ರದ ಜನರಿಂದ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT