ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ, ಚಿಕೂನ್‌ ಗುನ್ಯ: ಮುಂಜಾಗ್ರತೆಯೇ ಮದ್ದು

ಫೋನ್‌ ಇನ್‌ ಕಾರ್ಯಕ್ರಮಲ್ಲಿ ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಎ. ಮದಿನಕರ
Last Updated 26 ಜುಲೈ 2019, 12:48 IST
ಅಕ್ಷರ ಗಾತ್ರ

ಡೆಂಗಿ, ಚಿಕೂನ್‌ ಗುನ್ಯ ಬಾರದಂತೆ ಯಾವುದೇ ಔಷಧ ಅಥವಾ ಚಿಕಿತ್ಸೆ ನೀಡಲು ಸಾಧ್ಯ ಇಲ್ಲ. ಆದರೆ, ಅದಕ್ಕೆ ಕಾರಣವಾಗುವ ಸೊಳ್ಳೆಗಳು ಉತ್ಪತ್ತಿ ಆಗದಂತೆ ಮುಂಜಾಗ್ರತೆ ವಹಿಸುವ ಮೂಲಕ ರೋಗ ಬಾರದಂತೆ ತಡೆಯಬಹುದು ಎಂದು ಧಾರವಾಡ ಜಿಲ್ಲೆ ಆರೋಗ್ಯಾಧಿಕಾರಿ ಡಾ. ಯಶವಂತ ಎ. ಮದಿನಕರ ಸಲಹೆ ನೀಡಿದ್ದಾರೆ.

‘ಪ್ರಜಾವಾಣಿ’ ಹುಬ್ಬಳ್ಳಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಫೋನ್‌– ಇನ್‌ ಕಾರ್ಯಕ್ರಮದಲ್ಲಿ ಓದುಗರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

1.86 ಲಕ್ಷ ಆಯುಷ್ಮಾನ್‌ ಕಾರ್ಡ್‌ ವಿತರಣೆ
ಧಾರವಾಡ ಜಿಲ್ಲೆಯಲ್ಲಿ ಈವರಗೆ 1.86 ಲಕ್ಷ ಆಯುಷ್ಮಾನ್‌ ಕಾರ್ಡ್‌ ವಿತರಣೆ ಮಾಡಲಾಗಿದೆ. ಈವರೆಗೆ 3,264 ಜನರ ಚಿಕಿತ್ಸೆಗಾಗಿ ₹11.95 ಕೋಟಿ ವೆಚ್ಚ ಮಾಡಲಾಗಿದೆ ಎಂದು ಡಾ.ಯಶವಂತ ತಿಳಿಸಿದರು.

‘ಆಯುಷ್ಮಾನ್‌ ಯೋಜನೆಯಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿದ ಕುಟುಂಬಕ್ಕೆ ವರ್ಷಕ್ಕೆ ₹5 ಲಕ್ಷದವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ಎಪಿಎಲ್‌ ಕಾರ್ಡ್‌ ಹೊಂದಿದ ಕುಟುಂಬಕ್ಕೂ ಇದೇ ಮೊತ್ತವಿದೆ. ಆದರೆ, ಶೇ 30ರಷ್ಟನ್ನು ಮಾತ್ರ ಸರ್ಕಾರ ಭರಿಸುತ್ತದೆ. ಆಯುಷ್ಮಾನ್‌ ಕಾರ್ಡ್‌ ಪ‍ಡೆಯಲು ಆಧಾರ್‌ ಹಾಗೂ ಬಯೊಮೆಟ್ರಿಕ್‌ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ 67 ಕೇಂದ್ರಗಳಲ್ಲಿ ಕಾರ್ಡ್‌ ನೀಡಲಾಗುತ್ತಿದೆ. ಕಾರ್ಡ್‌ ಹೊಂದಿಲ್ಲದಿದ್ದರೂ ಆಸ್ಪತ್ರೆಗೆ ಸೇರಿಕೊಂಡಾಗ ಕಾರ್ಡ್‌ ಮಾಡಿಸಿಕೊಂಡು ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

ರಸ್ತೆ ಬದಿ ಔಷಧ; ಇರಲಿ ಎಚ್ಚರ
‘ಗಿಡಮೂಲಿಕೆ ಸೇರಿದಂತೆ ಹಲವು ರೀತಿಯ ಔಷಧಗಳನ್ನು ರಸ್ತೆ ಬದಿಯಲ್ಲಿ ಕೊಡುತ್ತಾರೆ. ಅವುಗಳನ್ನು ನಾಗರಿಕರು ನಂಬಬಾರದು ಹಾಗೂ ತೆಗೆದುಕೊಳ್ಳಬಾರದು. ಅವರು ಹೇಳುವ ಮಾತಿಗೆ ಮಾರುಹೋಗದೆ ವಾಸ್ತವವನ್ನು ಅರಿತುಕೊಳ್ಳಬೇಕು. ಔಷಧ ಎಂಬ ಹೆಸರಿನಲ್ಲಿ ರಸ್ತೆ ಬದಿಯಲ್ಲಿ ನೀಡುವವರಿಂದ ಜನರಿಗೆ ಸಾಕಷ್ಟು ತೊಂದರೆ ಆಗಿರುವ ಉದಾಹರಣೆಗಳಿವೆ. ಹೀಗಾಗಿ ನಾಗರಿಕರು ಇಂತಹ ಜನರಿಂದ ಮೋಸ ಹೋಗುವುದು ಬೇಡ. ಎಚ್ಚರ ವಹಿಸಬೇಕು’ ಎಂದು ಡಾ. ಯಶವಂತ ಸಲಹೆ ನೀಡಿದರು.

‘ನಕಲಿ ವೈದ್ಯರ ಬಗ್ಗೆ ನಾಗರಿಕರಿಗೆ ಮಾಹಿತಿ ಇದ್ದರೆ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು. ನಕಲಿ ವೈದ್ಯರನ್ನು ನಿಯಂತ್ರಿಸುವುದು ಹಾಗೂ ಅವರ ಮೇಲೆ ಕ್ರಮ ಕೈಗೊಳ್ಳಲು ಇಲಾಖೆ ಸಾಕಷ್ಟು ಪ್ರಯತ್ನ ನಡೆಸಿದೆ’ ಎಂದರು.

ದೂರು ಕೊಡಿ
‘ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಇಲ್ಲ, ಚಿಕಿತ್ಸೆ ನೀಡುವುದಿಲ್ಲ ಅಥವಾ ಹೆಚ್ಚಿನ ಹಣ ಕೇಳುತ್ತಿದ್ದಾರೆ ಎಂಬ ಬಗ್ಗೆ ನಾಗರಿಕರಿಗೆ ಮಾಹಿತಿ ಇದ್ದರೆ ಆ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಬಹುದು. ಪ್ರತಿ ಆರೋಗ್ಯ ಕೇಂದ್ರದಲ್ಲಿ ಸಲಹಾ ಪೆಟ್ಟಿಗೆ ಇರುತ್ತದೆ. ಅದರಲ್ಲಿ ಹಾಕಬಹುದು. ಪರಿಶೀಲಿಸಿ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಡಾ. ಯಶವಂತ ಹೇಳಿದರು

100 ತಂಡಗಳ ರಚನೆ
ಮಳೆಗಾಲದಲ್ಲಿ ಡೆಂಗಿ ಹಾಗೂ ಚಿಕೂನ್‌ಗುನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ 100 ತಂಡ ರಚಿಸಲಾಗಿದೆ. ಪ್ರತಿ ತಂಡದಲ್ಲಿ ಇಬ್ಬರಿದ್ದಾರೆ. ಪ್ರತಿ ದಿನ 75 ಮನೆಗಳಿಗೆ ಒಂದು ತಂಡ ಭೇಟಿ ಮಾಡಿ ಪರಿಶೀಲಿಸಲಿದೆ. ಇದರ ಜೊತೆಗೆ ಜಾಗೃತಿಯನ್ನೂ ಮೂಡಿಸುತ್ತದೆ. 15 ದಿನಕ್ಕೊಮ್ಮೆಯಂತೆ ಮೂರು ಬಾರಿ ಈ ತಂಡಗಳು ಸರ್ವೆ ಮಾಡಲಿವೆ.

ತಪಾಸಣೆ ಹೇಗೆ?
ಜಿಲ್ಲೆಯಲ್ಲಿ ಐವರು ಮಲೇರಿಯಾ, 38 ಮಂದಿ ಡೆಂಗಿ, 31 ಮಂದಿ ಚಿಕೂನ್‌ಗುನ್ಯದಿಂದ ಬಳಲುತ್ತಿದ್ದಾರೆ. ಜ್ವರ ಬಂದಿರುವ 100 ಜನರಲ್ಲಿ ಐವರಿಗೆ ಡೆಂಗಿ, ಚಿಕೂನ್‌ ಗುನ್ಯದ ತಪಾಸಣೆ ಮಾಡಲಾಗುತ್ತದೆ. ಯಾವುದೇ ಪ್ರದೇಶದಲ್ಲಿ ಒಬ್ಬರಿಗೆ ಡೆಂಗಿ ಅಥವಾ ಚಿಕೂನ್‌ಗುನ್ಯ ಇದೆ ಎಂದು ಗೊತ್ತಾದರೆ, ಕೂಡಲೇ ಆ ಪ್ರದೇಶದಲ್ಲಿ ಸರ್ವೆ ಮಾಡಲಾಗುತ್ತದೆ. ಲಾರ್ವಾಗಳನ್ನು ನಾಶ ಪಡಿಸುತ್ತೇವೆ. ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ಮಾಡಿಸಲಾಗುತ್ತದೆ. ಫಾಗಿಂಗ್‌ ಮಾಡಲಾಗುತ್ತಿದೆ. ಸ್ತ್ರೀ ಶಕ್ತಿ ಸಂಘಗಳಿಗೂ ತಿಳಿವಳಿಕೆ ನೀಡಲಾಗುತ್ತದೆ.

ವೈದ್ಯರ ಕೊರತೆ ನೀಗಿಸಲು ಕ್ರಮ
ಧಾರವಾಡ ಜಿಲ್ಲೆಯಲ್ಲಿ 32 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 8 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರಿಲ್ಲ. ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಕಾಯಂ ವೈದ್ಯರಿಗಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಕ್ರಮಕೈಗೊಳ್ಳಲಾಗಿದೆ. ಹದಿನೈದು ತಿಂಗಳಲ್ಲಿ ಹೊಸ ವೈದ್ಯರ ನೇಮಕವಾಗಲಿದೆ. ಮೂರು ವರ್ಷಗಳ ಕಾಲ ಸತತವಾಗಿ ಸೇವೆ ಸಲ್ಲಿಸಿದರೆ, ಅವರನ್ನು ಕಾಯಂ ಮಾಡಲು ಅವಕಾಶ ಇದೆ.

ಸ್ವಚ್ಛತೆಗೆ ಆದ್ಯತೆ
ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನೆಲ, ಗೋಡೆ, ಚಾವಣಿ ಸ್ವಚ್ಛವಾಗಿರಬೇಕು. ರೋಗಿಗಳ ತಿರುಗಾಡುವಿಕೆಯಿಂದ ನೆಲ ಸ್ವಲ್ಪ ಸ್ವಚ್ಛವಾಗಿಲ್ಲದಿರಬಹುದು. ಆದರೆ, ಗೋಡೆ, ಚಾವಣಿ ಸ್ವಚ್ಛವಾಗಿರಬೇಕು. ಅದರ ಆಧರದ ಮೇಲೆಯೇ ಸ್ವಚ್ಛತೆಯನ್ನು ಅಳೆಯಲಾಗುತ್ತದೆ.

ಫೋನ್‌ ಇನ್‌ ಪ್ರಶ್ನೋತ್ತರ:
ಮಹೇಶ್ ಮುಂಡರಗಿ, ಅಣ್ಣಿಗೇರಿ:
ಅಣ್ಣಿಗೇರಿಯಲ್ಲಿ ಪುರಸಭೆಯವರು ಮೊದಲು ನೀರನ್ನು ಶುದ್ಧೀಕರಿಸಿ ಪೂರೈಕೆ ಮಾಡುತ್ತಿದ್ದರು. ಈಗ ಜಲಮಂಡಳಿಯಿಂದ ಕೆಮಿಕಲ್ಸ್‌ ಪೂರೈಕೆ ಇಲ್ಲ ಎಂಬ ನೆಪ ಹೇಳಿ, ಕಲುಷಿತ ನೀರು ಪೂರೈಸುತ್ತಿದ್ದಾರೆ. ಇದರಿಂದ ಜನರು ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಈ ಸಮಸ್ಯೆ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ನಿಮ್ಮ ಸಾಮಾಜಿಕ ಕಳಕಳಿಗೆ ಧನ್ಯವಾದ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ಶುದ್ಧ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು.

ವಿಶ್ವನಾಥ ಸಾಂಗ್ರಾಳಕರ, ಧಾರವಾಡ: ಶಾಲೆಗಳಲ್ಲಿ ಮಕ್ಕಳಿಗೆ ಜಂತು ಮಾತ್ರೆ ನೀಡುತ್ತಿದ್ದಾರೆ. ಮತ್ತೆ ನಾವು ಹೊರಗಡೆ ಮಾತ್ರೆ ಕೊಡಿಸುವ ಅವಶ್ಯ ಇದೆಯೇ?

ಪ್ರತಿ 6 ತಿಂಗಳಿಗೊಮ್ಮೆ ಮಕ್ಕಳಿಗೆ ಜಂತು ಮಾತ್ರೆ ಕೊಡುವುದರಿಂದ, ಹೊಟ್ಟೆಯೊಳಗೆ ಜಂತು ಹುಳು ಇದ್ದರೆ ಹೊರಗಡೆ ಬರುತ್ತವೆ. ಎರಡು ವರ್ಷದೊಳಗಿನ ಮಕ್ಕಳಿಗೆ 200 ಎಂ.ಜಿ. ಮಾತ್ರೆ, ಎರಡು ವರ್ಷ ಮೇಲ್ಪಟ್ಟವರಿಗೆ 400 ಎಂ.ಜಿ. ಮಾತ್ರೆ ಕೊಡಲಾಗುವುದು. 3 ತಿಂಗಳಿಗೊಮ್ಮೆ ಮಾತ್ರೆ ತೆಗೆದುಕೊಂಡರೂ ತಪ್ಪಿಲ್ಲ. ಹೊರಗಡೆ ಮಾತ್ರೆ ಕೊಡಿಸುವ ಅವಶ್ಯ ಇಲ್ಲ.

ರಾಜು ಪಾಟೀಲ, ಕಮರಿಪೇಟೆ: ಖಾಸಗಿ ಆಸ್ಪತ್ರೆಗಳಲ್ಲಿ ‘ಹೆಲ್ತ್‌ ಪ್ಯಾಕೇಜ್‌’ ಸೌಲಭ್ಯವಿದೆ. ಇದೇ ರೀತಿ ಕಿಮ್ಸ್‌ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯವಿದೆಯೇ?

ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಉತ್ತಮ ಸೌಲಭ್ಯವಿದೆ. ನಿಮಗೆ ಬೇಕಾದ ತಪಾಸಣೆಯನ್ನು ಮಾಡಿಸಿಕೊಳ್ಳಬಹುದು. ಬಿಪಿಎಲ್‌ ಪಡಿತರದಾರರಿಗೆ ಸಂಪೂರ್ಣ ಉಚಿತವಿರುತ್ತದೆ. ಎಪಿಎಲ್‌ ಪಡಿತದಾರರಿಗೆ ಕನಿಷ್ಠ ಶುಲ್ಕವಿರುತ್ತದೆ. ನೀವು ‘ಆಯುಷ್ಮಾನ್‌ ಕಾರ್ಡ್‌’ ಮಾಡಿಸಿಕೊಳ್ಳಿ. ಆಸ್ಪತ್ರೆಗೆ ದಾಖಲಾದರೆ, ₹ 5 ಲಕ್ಷದವರೆಗಿನ ಖರ್ಚನ್ನು ಈ ಕಾರ್ಡ್‌ ಮೂಲಕ ಭರಿಸಬಹುದು.

ದೇವೇಂದ್ರಪ್ಪ, ಯರಗುಪ್ಪಿ: ಗ್ರಾಮದಲ್ಲಿ ಡೆಂಗಿ ಜ್ವರ ಜಾಸ್ತಿಯಾಗಿದೆ, ಸೊಳ್ಳೆ ಕಾಟ ಜಾಸ್ತಿ ಏನು ಮಾಡಬೇಕು?

ಮಳೆಗಾಲದಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ಡೆಂಗಿ, ಚಿಕೂನ್‌ ಗುನ್ಯ ರೋಗಗಳನ್ನು ಹರಡುವ ಸೊಳ್ಳೆಗಳು ನಮ್ಮ ಮನೆಯ ಆವರಣದಲ್ಲಿರುವ ನೀರಿನಲ್ಲಿ ತತ್ತಿ ಇಡುತ್ತವೆ. ಈಡೀಸ್‌ ಈಜಿಪ್ಟಿ ಸೊಳ್ಳೆ ಹಗಲಿನಲ್ಲೇ ಕಚ್ಚಿ ರೋಗ ಹರಡುತ್ತದೆ. ಹಾಗಾಗಿ ಮನೆಯ ನೀರನ್ನು ಎರಡು ಮೂರು ದಿನಗಳಿಗೊಮ್ಮೆ ಬದಲಿಸಿ. ಜಾನುವಾರುಗಳಿಗೆ ಬಾನಿಗಳಲ್ಲಿ ಇಡುವ ನೀರನ್ನೂ ಕೂಡ ವಾರಕ್ಕೆರಡು ಬಾರಿ ಬದಲಿಸಿ. ನಿಮ್ಮ ಊರಿಗೆ ಬಂದು ಶೀಘ್ರದಲ್ಲೇ ಬಂದು ಜಾಗೃತಿ ಆಂದೋಲನ ಮಾಡುತ್ತೇವೆ.

ಲವ ಚನ್ನಬಸಪ್ಪ, ಇಂಗಳಗಿ: ನಮ್ಮ ಊರಿನಿಂದ ಆರೋಗ್ಯ ಕೇಂದ್ರ ದೂರದಲ್ಲಿದೆ. ರಾತ್ರಿ ವೇಳೆ ವೈದ್ಯರು ಇರುವುದಿಲ್ಲ. ಹಾಗಾಗಿ ಸಮಸ್ಯೆ ಆಗಿದೆ.

ನೀವು ಊರಿನ ಹೊರಭಾಗದಲ್ಲಿ ಜಾಗ ಕೊಟ್ಟಿರುವುದರಿಂದ ಅಲ್ಲಿ ಆರೋಗ್ಯ ಕೇಂದ್ರ ನಿರ್ಮಿಸಿದ್ದೇವೆ. ಆಸ್ಪತ್ರೆಯ ಪರಿಸರ ಚೆನ್ನಾಗಿದೆ. ಕಾಂಪೌಂಡ್‌ ಹಾಳಾಗಿದೆ ಎಂಬ ದೂರು ಬಂದಿದೆ. ಊರಿನ ಮುಖಂಡರು ಆಸ್ಪತ್ರೆ ರಕ್ಷಣೆ ಮತ್ತು ನಿರ್ವಹಣೆಯ ಬಗ್ಗೆ ಕಾಳಜಿ ವಹಿಸಿ. ಈಗ ಇರುವ ವೈದ್ಯರು ಬೆಳಿಗ್ಗೆಯಿಂದ ಸಂಜೆವರೆಗೆ ಲಭ್ಯವಿರುತ್ತಾರೆ. ರಾತ್ರಿ ವೇಳೆ ಆರೋಗ್ಯ ಸಮಸ್ಯೆ ಕಾಣಿಸಿದರೆ, 108 ಸಂಖ್ಯೆಗೆ ಕರೆ ಮಾಡಿ, ಆಂಬುಲೆನ್ಸ್‌ ಮೂಲಕ ಕುಂದಗೋಳ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಿರಿ.

ಹನುಮಂತಪ್ಪ ಕಂಬಳಿ, ಸನಾ ನವಲಗುಂದ, ಅಣ್ಣಿಗೇರಿ: ಅಣ್ಣಿಗೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್‌ ವೈದ್ಯರು ಇಲ್ಲ. ಚಿಕಿತ್ಸೆಗೆ ಬೇಕಾದ ಸೌಕರ್ಯಗಳು ಇಲ್ಲ.

ಜಿಲ್ಲೆಯ ಬಹಳಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್‌ ವೈದ್ಯರ ಕೊರತೆ ಇದೆ. ಇದನ್ನು ಬಿಎಎಂಸ್‌ ಪದವೀಧರರು ತುಂಬುತ್ತಿದ್ದಾರೆ. ಅಣ್ಣಿಗೇರಿ ಆರೋಗ್ಯ ಕೇಂದ್ರಕ್ಕೆ ಎಂಬಿಬಿಎಸ್‌ ವೈದ್ಯರ ಸೇವೆ ನೀಡಲು ಪ್ರಯತ್ನಿಸಲಾಗುವುದು. ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಸರ್ಕಾರದಿಂದ ಬಂದ ಅನುದಾನ ಬಳಸಿ ಚಿಕಿತ್ಸಾ ಪರಿಕರಗಳನ್ನು ನೀಡಲಾಗುವುದು.

ಮಂಜುನಾಥ್, ಹಳೇಹುಬ್ಬಳ್ಳಿ: ಚಿಕೂನ್ ಗುನ್ಯ ತಡೆಗಟ್ಟುವುದು ಹೇಗೆ?

ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಮನೆಯೊಳಗೆ ಶುಚಿತ್ವ ಕಾಪಾಡಿಕೊಳ್ಳಿ.

ರವೀಶ ಬೆಳಕಟ್ಟಿ, ಗರಗ: ಮಳೆಗಾಲ ಆರಂಭದಲ್ಲಿ ಫಾಗಿಂಗ್‌ ಮಾಡ್ಸೋದು ಕಡ್ಡಾಯವೇ?

ಫಾಗಿಂಗ್‌ ಮಾಡಲೇಬೇಕೆಂಬುದು ಕಡ್ಡಾಯವೇನು ಇಲ್ಲ. ಹೊರಗೆ ಫಾಗಿಂಗ್‌ ಮಾಡಿದಾಗ ಸೊಳ್ಳೆಗಳು ಮನೆಯೊಳಗೆ ಸೇರಿಕೊಳ್ಳಲಿವೆ. ಅಲ್ಲದೆ ಫಾಗಿಂಗ್‌ನಿಂದ ಸೊಳ್ಳೆಗಳು ಸಾಯಬಹುದು. ಆದರೆ ಸೊಳ್ಳೆ ಮರಿಗಳನ್ನು ಫಾಗಿಂಗ್‌ನಿಂದ ನಾಶಪಡಿಸಲು ಆಗದು. ಯಾವ ಪ್ರದೇಶದಲ್ಲಿ ಡೆಂಗಿ, ಚಿಕೂನ್‌ಗುನ್ಯ ಇದೆ ಎಂಬುದು ನಮ್ಮ ಗಮನಕ್ಕೆ ಬರುತ್ತಲೇ, ಆರೋಗ್ಯ ಸಿಬ್ಬಂದಿ ತಂಡ ಅಲ್ಲಿನ ಲಾರ್ವಾ ತಪಾಸಣೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವರು. ಜನರಲ್ಲಿ ತಿಳಿವಳಿಕೆ ಹೇಳಿ ಜಾಗೃತಿ ಮೂಡಿಸುವರು. ನಾಲ್ಕೈದು ದಿನಗಳು ನಿರಂತರ ನೀರು ಸಂಗ್ರಹವಿದ್ದಲ್ಲಿ ಅಲ್ಲಿ ಸೊಳ್ಳೆಗಳು ಮೊಟ್ಟೆ ಇಟ್ಟು ಸೊಳ್ಳೆ ಉತ್ಪತ್ತಿಗೆ ದಾರಿಯಾಗಲಿದೆ. ಆದ್ದರಿಂದ ಮನೆ ಹಾಗೂ ಸುತ್ತಲ ಪರಿಸರದಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು. ಯಾರಿಗಾದರು ಜ್ವರ ನಿಯಂತ್ರಣಕ್ಕೆ ಬರದಿದ್ದ ಸಂದರ್ಭದಲ್ಲಿ ಕಿಮ್ಸ್‌ನಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡು, ದೃಢಪಟ್ಟಲ್ಲಿ, ಅಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬಹುದು. ಡೆಂಗಿ, ಚಿಕೂನ್‌ಗುನ್ಯ ತಡೆಗೆ ಮುಂಜಾಗ್ರತೆಯೇ ಮುಖ್ಯವೆನಿಸಲಿದೆ.

ಅಬ್ದುಲ್ ಮುನಾಫ್‌, ಧಾರವಾಡ: ಆರೋಗ್ಯ ಕಾರ್ಡ್‌ ಮಾಡಲು ನಿಯಮಗಳೇನು? ಪ್ರತಿ ಕಾರ್ಡ್‌ಗೆ ₹200 ಶುಲ್ಕ ನೀಡಬೇಕೆ?

ಆರೋಗ್ಯ ಅಥವಾ ಆಯುಷ್‌ ಕಾರ್ಡ್‌ಅನ್ನು ಸಿವಿಲ್‌ ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳಬಹುದು. ಮನೆಯ ಪ್ರತಿ ಸದಸ್ಯರ ಹೆಸರಲ್ಲೂ ಪಡೆದುಕೊಳ್ಳಬೇಕು. ಖಾಸಗಿಯವರಿಗೂ ವಹಿಸಲಾಗಿದೆ. ಆದರೆ ಅದಕ್ಕೆ ಎಲ್ಲಿಯೂ ₹200 ಶುಲ್ಕ ಕೊಡಬೇಕಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ₹10 ನೀಡಿದರೆ, ಖಾಸಗಿ ಏಜೆನ್ಸಿಯಲ್ಲಿ ₹ 30 ಪಾವತಿಸಬೇಕಿದೆ. ಆರೋಗ್ಯ ಕಾರ್ಡ್‌ ಹೆಸರಿನಲ್ಲಿ ಹಣ ವಸೂಲಿ ಮಾಡಿದರೆ ನನ್ನ ಗಮನಕ್ಕೆ ತನ್ನಿ.

ಶಿವಾನಂದ ದಳವಾಯಿ, ಕಾಲವಾಡ: ಕಾಲವಾಡದಲ್ಲಿ ಆಸ್ಪತ್ರೆಯಿದೆ. ಆದರೆ ವೈದ್ಯರೇ ಇಲ್ಲ. ಹೀಗಾದರೆ ಹೇಗೆ?

ಕಾಲವಾಡದಲ್ಲಿ ಇರೋದು ಆರೋಗ್ಯ ಉಪಕೇಂದ್ರ. ಅಲ್ಲಿ ವೈದ್ಯರು ಇರುವುದಿಲ್ಲ. ಬದಲಿಗೆ ಕಿರಿಯ ಆರೋಗ್ಯ ಸಹಾಯಕರು ಇರುತ್ತಾರೆ. ಆರೋಗ್ಯ ಸಮಸ್ಯೆ ಕಾಡಿದಾಗ ಅವರನ್ನು ಸಂಪರ್ಕಿಸಿ, ಸಲಹೆ ಪಡೆದುಕೊಳ್ಳಬೇಕು.

ಡೆಂಗಿ ಲಕ್ಷಣಗಳು

* ಇದ್ದಕ್ಕಿಂದ್ದಂತೆ ತೀವ್ರ ಜ್ವರ

* ಮೈ–ಕೈ ನೋವು ಮತ್ತು ಕೀಲು ನೋವು

* ತೀವ್ರ ತಲೆನೋವು, ಹಣೆ ಹಾಗೂ ಕಣ್ಣಿನ ಹಿಂಭಾಗದಲ್ಲಿ ನೋವು

* ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವವಾದಂತೆ ಕೆಂಬಣ್ಣದ ಬೊಕ್ಕೆ ಹೋಲುವ ಗುರುತು

* ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ

* ವಾಕರಿಕೆ ಮತ್ತು ವಾಂತಿ

ಡೆಂಗಿ ಬಾರದಂತೆ ಮುನ್ನೆಚ್ಚರಿಕೆ ಕ್ರಮ

* ಕಡ್ಡಾಯವಾಗಿ ವಿಶ್ರಾಂತಿ ಪಡೆಯುವುದು

* ಹೆಚ್ಚು ನೀರಿನ ಅಂಶವುಳ್ಳ ಪದಾರ್ಥ ಹಾಗೂ ಪೌಷ್ಟಿಕ ಆಹಾರ ಸೇವನೆ

* ಮನೆಯ ಸುತ್ತ ಬಿದ್ದಿರುವ ಒಡೆದ ಟೈರ್‌ಗಳು, ತೆಂಗಿನ ಚಿಪ್ಪು, ಮತ್ತಿತರ ನೀರು ನಿಲ್ಲುವ ನಿರುಪಯುಕ್ತ ವಸ್ತುಗಳನ್ನು ತೆರವುಗೊಳಿಸಬೇಕು

* ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು

* ಮನೆ ಹಾಗೂ ಸುತ್ತಮುತ್ತಲಿನ ಸಿಮೆಂಟ್‌ ತೊಟ್ಟಿ, ತೆರೆದ ಪ್ಲಾಸ್ಟಿಕ್‌ ತೊಟ್ಟಿ, ನೀರಿನ ತೊಟ್ಟಿ, ಏರ್‌ಕೂಲರ್‌, ಹೂವಿನಕುಂಡ ಇತ್ಯಾದಿ ಶುದ್ಧ ನೀರಿನ ತಾಣಗಳಲ್ಲಿ ಸೊಳ್ಳೆ ನಿರೋಧಕ ಔಷಧ ಸಿಂಪಡಣೆ, ಫಾಗಿಂಗ್‌ ಮಾಡಬೇಕು. ಪ್ರತಿವಾರ ಇವುಗಳಲ್ಲಿನ ನೀರು ತೆರವುಗೊಳಿಸಿ, ಸ್ವಚ್ಛ ಮಾಡಿದ ಬಳಿಕ ಹೊಸ ನೀರು ತುಂಬಿಸಬೇಕು

* ಮಲಗುವಾಗ ಕಡ್ಡಾಯವಾಗಿ ಸೊಳ್ಳೆಪರದೆ ಅಥವಾ ಸೊಳ್ಳೆ ನಿರೋಧಕಗಳನ್ನು ಬಳಸಬೇಕು

* ಮನೆಯಲ್ಲಿ ದೈನಂದಿನ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಶೇಖರಣೆ ಮಾಡಬಾರದು. ನೀರಿನ ತೊಟ್ಟಿ, ಬ್ಯಾರಲ್, ಟ್ಯಾಂಕ್‌ಗಳನ್ನು ಭದ್ರವಾಗಿ ಮುಚ್ಚಬೇಕು

* ಸೊಳ್ಳೆಗಳ ಲಾರ್ವ ತಿನ್ನುವ ಗ್ಯಾಂಬೂಸಿಯಾ, ಗಪ್ಪಿ ಜಾತಿಯ ಮೀನುಮರಿಗಳನ್ನು ಕೆರೆ, ಬಾವಿಗಳಲ್ಲಿ ಬಿಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT