ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಿವಿಯಿಂದಲೇ ಕೆರೆಗೆ ಕಲ್ಲು: ಧಾರವಾಡ ಜನತೆಗೆ ನೀರು ಕೊಟ್ಟ ಕೆರೆಗಳು ಮಾಯ!

ಹುಬ್ಬಳ್ಳಿ–ಧಾರವಾಡ ಮೆಟ್ರೊ | ನಮ್‌ ಕೆರಿ ಕಥಿ –6
Last Updated 10 ಫೆಬ್ರುವರಿ 2020, 4:01 IST
ಅಕ್ಷರ ಗಾತ್ರ

ಧಾರವಾಡ ನಗರ ಹೃದಯಭಾಗದಲ್ಲಿ ಜನತೆಗೆ ಕುಡಿಯಲು ನೀರು ಕೊಟ್ಟ, ಈಜು ಕಲಿಯಲು ತಾಣವಾಗಿದ್ದ ಕೆರೆಗಳು ಈಗ ಹೇಳಹೆಸರಿಲ್ಲದಂತಾಗಿವೆ. ಎಮ್ಮಿಗೆರೆ, ಕೊಪ್ಪದ ಕೆರೆ, ಹಾಲಗೆರೆ, ಲಕ್ಷ್ಮಿಸಿಂಗನಕೆರೆ, ಕೆಂಪಕೆರೆ ಇವೆಲ್ಲದರ ಹೆಸರು ಹೇಳಿದರೆ ಅವೆಲ್ಲ ಇಲ್ಲೆಲ್ಲದ್ದವು ಎಂದು ಕೇಳುವವರೇ ಹೆಚ್ಚು. ಅಷ್ಟರಮಟ್ಟಿಗೆ ಕೆರೆಗಳನ್ನು ನಗರೀಕರಣ ಆಪೋಶನ ತೆಗೆದುಕೊಂಡಿದೆ. ಇದಕ್ಕಿಂತ ಶೋಚನೀಯವೆಂದರೆ, ಶತಮಾನಗಳ ಹಳೆಯ ಕೆರೆಯ ಮೇಲೆ ಕೃಷಿ ವಿಶ್ವವಿದ್ಯಾಲಯವೇ ಹಾಸ್ಟೆಲ್‌ ಕಟ್ಟಿದೆ.

ಧಾರವಾಡದ ಮಹಾತ್ಮ ಬಸವೇಶ್ವರ ನಗರ (ಕೊಪ‍್ಪದ ಕೆರೆ); ಜನತಾಬಜಾರ್‌ (ಹಾಲಗೆರೆ); ಮಾಳಮಡ್ಡಿ ಪ್ರದೇಶ(ಎಮ್ಮಿ ಕೆರೆ); ನಗರಕರ ಕಾಲೊನಿ, ರೆಡ್ಡಿ ಕಾಲೊನಿ (ಲಕ್ಷ್ಮಿಸಿಂಗನ ಕೆರೆ); ಲೈನ್‌ ಬಜಾರ ಹನುಮಂತನ ಗುಡಿ (ಕೆಂಪಕೆರೆ) ಪ್ರದೇಶಗಳೆಲ್ಲ ಕೆರೆಗಳದ್ದೇ. ಆದರೆ, ಇಂದಿನ ವಾಸ್ತವ ನೋಡಿದಾಗ ಇಲ್ಲೊಂದು ಕೆರೆಯಿತ್ತೇ? ಸಾಧ್ಯವೇ ಇಲ್ಲ ಎಂಬ ಮಾತು ಬಹುತೇಕರಿಂದ ಬರುತ್ತದೆ. ಅಷ್ಟಾದರೂ ಕಂದಾಯ ದಾಖಲೆಗಳು ಸುಳ್ಳು ಹೇಳುವುದಿಲ್ಲ. ಕೆರೆಗಳು ಇದ್ದದ್ದಂತೂ ದಿಟ.

ಧಾರವಾಡ ಕಸಬಾದಲ್ಲಿ ಮೂರು ಕೆರೆಗಳಿದ್ದವು. ಸಣ್ಣಪುಟ್ಟವಲ್ಲ, ಐದು ಎಕರೆಗೂ ಮಿಗಿಲಾದವು. ಕೆರೆ–1 ಮಾರುಕಟ್ಟೆ ಪ್ರದೇಶವಾಗಿ ಪರಿವರ್ತನೆಯಾಗಿದೆ.ಮೋತಿ ಮಸೀದಿ ರಸ್ತೆಯಲ್ಲಿರುವ ಶೆಡ್‌, ಮನೆಗಳು, ಮಳಿಗೆಗಳು ಹಾಗೂ ರಸ್ತೆಗಳ ಹಳೇ ಮಾರ್ಕೆಟ್‌ ಪ್ರದೇಶವಾಗಿದೆ. ಕೆರೆ–2 ಸಂಗಮ ಟ್ಯಾಕೀಸ್‌ ಸಮೀಪ ಹೊಸ ಯಲ್ಲಾಪುರದ ರಾಮನಗರದ ಬಳಿ ಬಡಾವಣೆಯಾಗಿ ಪರಿವರ್ತನೆಯಾಗಿದೆ. ಮರಾಠಾ ಕಾಲೊನಿ ಬಳಿ ಎಂ.ಬಿ.ನಗರದಲ್ಲಿ ಶಿವಾಲಯ ಹಾಗೂ ಬಡಾವಣೆಯಾಗಿದೆ ಕೆರೆ–3.

ಗುಲಗಂಜಿಕೊಪ್ಪದ ಕುಂಟೆ ಇನ್ನೂ ಜೀವಂತವಾಗಿ ಉಳಿದುಕೊಂಡಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಾಗಿದ್ದರೂ, ಮಳೆ ಬಂದಾಗ ತೆರೆದ ಪ್ರದೇಶದಲ್ಲಿ ನೀರು ನಿಂತು ಕೆರೆ ಇತ್ತೆಂಬುದಕ್ಕೆ ಸಾಕ್ಷಿ ಒದಗಿಸುತ್ತದೆ. ಕುಮಾರೇಶ್ವರನಗರದಲ್ಲಿದೆ ಈ ಕೆರೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಕಟ್ಟಡ ದುರಂತದಲ್ಲಿ 13 ಜನರನ್ನು ಬಲಿ ತೆಗೆದುಕೊಂಡ ಪ್ರದೇಶದ ಸಮೀಪವೇ ಈ ಕೆರೆಯ ವ್ಯಾಪ್ತಿ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎತ್ತಿನಗುಡ್ಡ ಕೆರೆ ಹಾಗೂ ಕುಂಟೆಯಲ್ಲಿ ಒಂದಕ್ಕೆ ವಿಶ್ವವಿದ್ಯಾಲಯವೇ ಕಲ್ಲು–ಮಣ್ಣು ಸುರಿದು ಲೇಡಿಸ್‌ ಹಾಸ್ಟೆಲ್‌ ಅನ್ನಾಗಿ ಪರಿವರ್ತಿಸಿದೆ. ಕೃಷಿನಗರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಪಕ್ಕದಲ್ಲಿ ಮುಕ್ಕಾಲು ಎಕರೆಯಲ್ಲಿದ್ದ ಎತ್ತಿನಗುಡ್ಡ ಕುಂಟೆಯನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಕೃಷಿ ವಿವಿ ಕೂಡ ಮಾಡದಿರುವುದು ದುರಂತವೇ ಸರಿ. ಇನ್ನು ಇದೇ ವಿವಿಯ ವ್ಯಾಪ್ತಿಯಲ್ಲೇ ಇರುವ, ಎತ್ತಿಗುಡ್ಡ ಮುಖ್ಯರಸ್ತೆಯಲ್ಲಿರುವ ಎತ್ತಿನಗುಡ್ಡ ಕೆರೆಗೂ ಅಭಿವೃದ್ಧಿ ಭಾಗ್ಯ ಬಂದಿಲ್ಲ. ಒತ್ತುವರಿಯಿಂದ ದೂರವಿದೆ ಎಂಬ ಸಮಾಧಾನ ಹೊರತುಪಡಿಸಿದರೆ, ತ್ಯಾಜ್ಯ, ಕೊಳಕು ಕೆರೆಯನ್ನು ತುಂಬಿಕೊಂಡಿದೆ. ಒಳಚರಂಡಿ ನೀರನ್ನೂ ಈ ಕೆರೆಗೆ ಬಿಡಲಾಗುತ್ತಿದೆ. ಜಲಕಲೆಯೂ ಆವರಿಸಿದೆ.

ನೀರಿನ ಗುಣಮಟ್ಟ

ಜೀವಂತವಿರುವ ಕೆರೆ–ಕುಂಟೆಗಳಲ್ಲಿ 16 ಜಲಮೂಲಗಳು ಸೌಂದರ್ಯ ಹೊಂದಿದ್ದರೂ, ಮಾಲಿನ್ಯದಿಂದ ಹೊರತಾಗಿಲ್ಲ. ಧಾರವಾಡದಲ್ಲಿರುವ 7 ಹಾಗೂ ಹುಬ್ಬಳ್ಳಿ ತಾಲ್ಲೂಕಿನ 7 ಕೆರೆಗಳಲ್ಲಿ ತೇಲುವ ಮಾಲಿನ್ಯವಿದೆ.

ಕೆಸರುಯುಕ್ತ

ಧಾರವಾಡದ ಮೂರು ಹಾಗೂ ಹುಬ್ಬಳ್ಳಿ 12 ಕೆರೆಗಳಲ್ಲಿ ಮಣ್ಣಿನ ಬಣ್ಣದ ನೀರಿದೆ. ಮಳೆ ನೀರಿನ ಹರಿವು, ಜಾನುವಾರುಗಳ ಓಡಾಡುವಿಕೆಯಿಂದ ಮಣ್ಣಿನ ಕಣ ಹರಿದಾಡುತ್ತಿರುತ್ತದೆ.

ಹಸಿರು ಬಣ್ಣ

ಹುಬ್ಬಳ್ಳಿ ತಾಲ್ಲೂಕಿನ ರಾಯನಾಳ ಹಾಗೂ ಅಮರಗೋಳ ಕುಂಟೆ–2ರಲ್ಲಿ ಹಸಿರು ಬಣ್ಣದ ನೀರಿದೆ. ಪಾಚಿ, ಬಾತುಕೋಳಿ ಸಸ್ಯದಂತಹ ಜೈವಿಕ ಕಲ್ಮಶಗಳಿಂದಾಗಿ ಹಸಿರು ಬಣ್ಣವಿದೆ

ಕಲುಷಿತ ನೀರು

ಮಾಲಿನ್ಯ ಹಾಗೂ ಕರಗದ ಮಾಲಿನ್ಯದ ಕಣಗಳಿಂದ ನೀರಿನ ಬಣ್ಣ ಬದಲಾಗುತ್ತಿದೆ. ಇದಕ್ಕೆ ಒಳಚರಂಡಿ ಪ್ರಮುಖ ಕಾರಣ. ಇದರಿಂದ ನೀರು ಕಂದು ಬಣ್ಣದಿಂದ ಕಪ್ಪು ಬಣ್ಣಕ್ಕೆ ಪರಿವರ್ತನೆಯಾಗಿ, ದುರ್ವಾಸನೆ ಬೀರುತ್ತದೆ. ಒಳಚರಂಡಿ ನೀರಿನಿಂದ ಸೃಷ್ಟಿಯಾಗುವ ಹಯಸಿಂತ್‌ (ಜಲಕಳೆ) ನೀರಿನ ಮಾಲಿನ್ಯಕ್ಕೆ ಹಿಡಿದ ಕನ್ನಡಿ. ಧಾರವಾಡದ 8 ಮತ್ತು ಹುಬ್ಬಳ್ಳಿ ತಾಲ್ಲೂಕಿನ 8 ಕೆರೆಗಳಲ್ಲಿ ಈ ಸಮಸ್ಯೆ ಕಾಣುತ್ತದೆ.

ಕೆರೆಗಳಿಗೆ ನೀರು ಹರಿಯುವ ಪ್ರದೇಶದಲ್ಲಿ ಅತಿಕ್ರಮಣ, ನೀರು ಹರಿಯಲು ಸಾಧ್ಯವಾಗದಂತೆ ಕಾಲುವೆಗಳನ್ನು ತ್ಯಾಜ್ಯ ಸೇರಿದಂತೆ ಇನ್ನಿತರ ಮಾಲಿನ್ಯಕಾರಕ ವಸ್ತುಗಳಿಂದ ತಡೆಯಾಗುವುದಿರಂದ ಬೇಸಿಗೆ ಕಾಲದಲ್ಲಿ ಧಾರವಾಡದ 10 ಕೆರೆಗಳು ಒಣಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT