ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಿಗ್ಗೆ ಓಡಾಟ; ನಂತರ ಭಣ ಭಣ

ಲಾಕ್‌ಡೌನ್‌: ವಾಣಿಜ್ಯ ನಗರಿಯ ಜನರಿಂದ ಮೊದಲ ದಿನ ಉತ್ತಮ ಸ್ಪಂದನೆ
Last Updated 28 ಏಪ್ರಿಲ್ 2021, 15:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಘೋಷಿಸಿರುವ 14 ದಿನಗಳ ಲಾಕ್‌ಡೌನ್‌ನ ಮೊದಲ ದಿನವಾದ ಬುಧವಾರ ವಾಣಿಜ್ಯ ನಗರಿಯಲ್ಲಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಬೆಳಿಗ್ಗೆ ಆರು ಗಂಟೆಯಿಂದ 10ರ ತನಕ ಅಗತ್ಯ ವಸ್ತುಗಳ ಖರೀದಿಗೆ ನಗರದ ಗಾಂಧಿ ಮಾರುಕಟ್ಟೆ, ಗಿರಣಿ ಚಾಳ, ಸರಾಫ್‌ ಗಟ್ಟಿ ಹೀಗೆ ಪ್ರಮುಖ ಪ್ರದೇಶಗಳಲ್ಲಿ ಜನ ತರಕಾರಿ ಖರೀದಿಸಲು ಮುಗಿಬಿದ್ದಿದ್ದರು. ಗಂಟೆ ಹತ್ತಾಗುತ್ತಿದ್ದಂತೆ ವ್ಯಾಪಾರ ಬಂದ್ ಮಾಡುವಂತೆ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ಸೂಚಿಸಿ ಜನರನ್ನು ವಾಪಸ್‌ ಕಳುಹಿಸಿದರು. ದುರ್ಗದ ಬೈಲ್‌ ಮತ್ತು ಜನತಾ ಬಜಾರ್‌ನಲ್ಲಿ ವ್ಯಾಪಾರಕ್ಕೆ ಅವಕಾಶವಿರಲಿಲ್ಲ.‌

ಮದ್ಯದಂಗಡಿ, ಕಟ್ಟಡ ನಿರ್ಮಾಣಕ್ಕೆ ಅಗತ್ಯ ಸಾಮಗ್ರಿಗಳನ್ನು ಮಾರಾಟ ಮಾಡಲು ಹತ್ತು ಗಂಟೆಯ ತನಕ ಕೆಲವೆಡೆ ಅಂಗಡಿಗಳನ್ನು ತೆರೆಯಲಾಗಿತ್ತು. ಹೋಟೆಲ್‌ಗಳು ಸಂಜೆವರೆಗೂ ತೆರೆದಿದ್ದರೂ ಗ್ರಾಹಕರ ಸಂಖ್ಯೆ ತೀರಾ ಕಡಿಮೆಯಿತ್ತು. ಬ್ಯಾಂಕ್‌ಗಳು ಕೂಡ ಬದಲಾದ ಸಮಯದಲ್ಲಿ ಕಾರ್ಯನಿರ್ವಹಿಸಿದವು. ಆದರೆ, ಬ್ಯಾಂಕ್‌ನೊಳಗೆ ಜನರೇ ಇರಲಿಲ್ಲ.

ಪೊಲೀಸ್‌ ಕಾವಲು: ಅಗತ್ಯ ಸೇವೆ ಹೊರತು ಪಡಿಸಿ ಬೇರೆ ಯಾರಿಗೂ ಪೊಲೀಸರು ಸಂಚಾರಕ್ಕೆ ಅವಕಾಶ ಮಾಡಿಕೊಡಲಿಲ್ಲ. ಇದಕ್ಕಾಗಿ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಕೋರ್ಟ್ ವೃತ್ತ, ಕೇಶ್ವಾಪುರ, ರೈಲು ನಿಲ್ದಾಣದ ಸಮೀಪ, ಗಬ್ಬೂರು ಕ್ರಾಸ್‌ ಹೀಗೆ ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಚನ್ನಮ್ಮ ವೃತ್ತದಲ್ಲಿ ಮೈಕ್‌ ಮೂಲಕ ನಿಯಮ ಪಾಲಿಸುವಂತೆ ಪೊಲೀಸರು ಮನವಿ ಮಾಡುತ್ತಿದ್ದರು.

ಸಹಾಯವಾಣಿ: ರೈಲು ಸಂಚಾರ ಮುಂದುವರೆದಿದೆ. ಆದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರಲಿಲ್ಲ.

ಮುಂಗಡ ಟಿಕೆಟ್‌ ಬುಕ್ಕಿಂಗ್ ಮಾಡಿಕೊಂಡವರಿಗಷ್ಟೇ ಪೊಲೀಸರು ಅವಕಾಶ ಮಾಡಿಕೊಟ್ಟರು. ಮುಂಗಡ ಟಿಕೆಟ್‌ ಇಲ್ಲದೆ ಬಂದಿದ್ದ ಹಲವಾರು ಜನರು ವಾಪಸ್‌ ಹೋದರು. ಪ್ರಯಾಣಿಕರಿಗೆ ಕೋವಿಡ್‌ ಮುನ್ನೆಚ್ಚರಿಕೆ ಕುರಿತು ಮಾಹಿತಿ ನೀಡಲು ರೈಲ್ವೆ ಪೊಲೀಸ್ ಪಡೆ (ಆರ್‌ಪಿಎಫ್‌) ನಿಲ್ದಾಣದ ಪ್ರವೇಶ ದ್ವಾರದಲ್ಲಿ ಸಹಾಯವಾಣಿ ಆರಂಭಿಸಿದೆ.

ಭದ್ರತಾ ಸಿಬ್ಬಂದಿ ಪ್ರಯಾಣಿಕರು ಹೋಗುವ ಸ್ಥಳ ಹಾಗೂ ಇನ್ನಿತರ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದರು. ಮಾಸ್ಕ್‌ ಧರಿಸಿದವರಿಗಷ್ಟೇ ನಿಲ್ದಾಣದೊಳಗೆ ಬಿಡುತ್ತಿದ್ದರು.

ಆಸ್ಪತ್ರೆಗೆ ಬಂದವರಿಗೆ ಸಿಗದ ವಾಹನ

ಆಟೊ ಸಂಚಾರ ತೀರಾ ವಿರಳವಾಗಿದ್ದರಿಂದ ಆಸ್ಪತ್ರೆಗಾಗಿ ಬಂದವರು ಪಡಿಪಾಟಲು ಪಡಬೇಕಾಯಿತು. ರೈಲಿನಲ್ಲಿ ಬಂದ ಕೆಲ ಪ್ರಯಾಣಿಕರು ತಮ್ಮವರಿಗೆ ಕರೆ ಮಾಡಿ ವಾಹನ ತರಿಸಿಕೊಂಡು ಮನೆ ಸೇರಿಕೊಂಡರು. ಜಿಲ್ಲೆಯ ಸುತ್ತಮುತ್ತಲಿನ ಊರುಗಳಿಂದ ರೈಲಿನ ಮೂಲಕ ಹುಬ್ಬಳ್ಳಿಯ ಆಸ್ಪತ್ರೆಗಳಿಗೆ ಬಂದವರು ಲ್ಯಾಬ್‌ಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಹೋಗಲು ವಾಹನ ವ್ಯವಸ್ಥೆ ಇಲ್ಲದೆ ಗಂಟೆಗಟ್ಟಲೆ ಕಾದರು.

‘ಪತ್ನಿಗೆ ಚಿಕಿತ್ಸೆ ಕೊಡಿಸಲು ದಾಜೀಬಾನ್‌ ಪೇಟೆಯಲ್ಲಿರುವ ಸಿಟಿ ಕ್ಲಿನಿಕ್‌ಗೆ ಬಂದಿದ್ದೆ. ಅಲ್ಲಿಂದ ಸ್ಕ್ಯಾನ್‌ ಮಾಡಿಸಲು ದೇಶಪಾಂಡೆ ನಗರಕ್ಕೆ ಹೋಗಲು ಎರಡು ತಾಸು ಕಾದರೂ ಆಟೊ ಸಿಕ್ಕಿಲ್ಲ. ಅಲ್ಲಲ್ಲಿ ನಿಂತಿರುವ ಆಟೊಗಳನ್ನು ಕೇಳಿದರೆ ಯಾರೂ ಬರುತ್ತಿಲ್ಲ. ಆಂಬುಲೆನ್ಸ್‌ಗಾಗಿ ಕರೆ ಮಾಡಿದರೂ ಸಂಪರ್ಕ ಸಿಗಲಿಲ್ಲ’ ಎಂದು ಕೋರ್ಟ್‌ ವೃತ್ತದಲ್ಲಿ ಆಟೊಕ್ಕಾಗಿ ಕಾಯುತ್ತಿದ್ದ ಗುಡಗೇರಿಯ ಬಸವರಾಜ ಎನ್ನುವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT