ಧಾರವಾಡ: ಗ್ರಾಮ ಆಡಳಿತಾಧಿಕಾರಿಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು, ಮೊಬೈಲ್ ಆ್ಯಪ್ ಗಳಲ್ಲಿ ವಿವರ ಅಪ್ ಲೋಡ್ ಮಾಡುವಂತೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು ಎಂದು ಗ್ರಾಮ ಆಡಳಿತಾಧಿಕಾರಿಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತಿದ್ದಾರೆ. ಗುಣಮಟ್ಟದ ಮೊಬೈಲ್ ಫೋನ್, ಸಿಯುಜಿ ಸಿಮ್, ಡೇಟಾ ನೀಡಬೇಕು. ಮೇಜು, ಕುರ್ಚಿ, ಅಲ್ಮೆರಾ, ಗೂಗಲ್ ಕ್ರೋಮ್ ಬುಕ್, ಲ್ಯಾಪ್ ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಸಬಾ ಹೋಬಳಿ ವೃತ್ತಗಳನ್ನು 'ಗ್ರೇಡ್-1 ಗ್ರಾಮ ಆಡಳಿತಾಧಿಕಾರಿ' ಹುದ್ದೆಯಾಗಿ ಮೇಲ್ದರ್ಜೆಗೇರಿಸಬೇಕು. ಪ್ರಯಾಣ ಭತ್ಯೆಯನ್ನು ₹500 ರಿಂದ₹ 3000ಕ್ಕೆ ಏರಿಸಬೇಕು. ಅಂತರ ಜಿಲ್ಲಾ ವರ್ಗಾವಣೆ ಗಾಗಿ ಕಂದಾಯ ಇಲಾಖೆಯಲ್ಲಿ ಹೊಸ ಮಾರ್ಗಸೂಚಿ ರಚಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಖಜಾಂಚಿ ಮಂಜುನಾಥ ಬಾಗೋಡಿ, ಸುವರ್ಣಾ, ಮಹಾಂತೇಶ, ವೆಂಕಟೇಶ, ಜಕ್ಕನಗೌಡ ಪಾಟೀಲ ಪಾಲ್ಗೊಂಡಿದ್ದರು.