ಧಾರವಾಡ: ಸಾಲ ಪಾವತಿಸುವಂತೆ ಬ್ಯಾಂಕ್‌ನವರು ರೈತರಿಗೆ ನೋಟಿಸ್ ನೀಡಬಾರದು ಎಂದು ಸರ್ಕಾರ ಮತ್ತು ಬ್ಯಾಂಕರ್ಸ್‌ಗಳ ಸಮಿತಿಯ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಸೂಚನೆ ಪಾಲಿಸದ ಬ್ಯಾಂಕ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಬುಧವಾರ ನಡೆದ ಬ್ಯಾಂಕರ್ಸ್‌ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ ಮತ್ತು ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಸರ್ಕಾರವು ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿದೆ. ರೈತರ ಬೆಳೆಸಾಲವನ್ನು ಕಾಲಮಿತಿಯಲ್ಲಿ ಪುನರ್ ರಚಿಸಬೇಕು. ಕೆಲವು ಬ್ಯಾಂಕ್‌ಗಳ ವ್ಯವಸ್ಥಾಪಕರು ಸಾಲ ಪಾವತಿಸುವಂತೆ ರೈತರಿಗೆ ನೋಟಿಸ್ ನೀಡುತ್ತಿರುವುದು ಕಂಡು ಬಂದಿದೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಇಲಾಖೆಯ ಶಿಫಾರಸು ಬಂದ ತಕ್ಷಣ ಸಾಲ ಮಂಜೂರು ಮಾಡಬೇಕು. ಸರ್ಕಾರದ ಸಾಲ ಸೌಲಭ್ಯ, ಸಹಾಯಧನ ಫಲಾನುಭವಿಗಳಿಗೆ ಸಕಾಲದಲ್ಲಿ ಸಿಗುವಂತೆ ಮಾಡುವುದು ಬ್ಯಾಂಕ್‌ನ ವ್ಯಸ್ಥಾಪಕರ ಜವಾಬ್ದಾರಿ ಎಂದರು.
ಜಿಲ್ಲೆಯಲ್ಲಿ ಕೆವಿಜಿಬಿ ಬ್ಯಾಂಕ್ ಶಾಖೆಗಳು ಹೆಚ್ಚಾಗಿವೆ. ಸಿಡಿ ಅನುಪಾತ ಪ್ರಮಾಣ ಶೇ 44 ರಷ್ಟಿದೆ. ಇದು ಅತ್ಯಂತ ಕಡಿಮೆ ಇದ್ದು, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಕೆವಿಜಿಬಿ ಬ್ಯಾಂಕ್ ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಿ, ಈ ಕುರಿತು ಪ್ರಗತಿಗೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭೂದೇವ್ ಎನ್.ಜಿ. ಅವರು ಮಾತನಾಡಿ, ಸಬ್ಸಿಡಿ ಹಣವನ್ನು ಸಂಬಂಧಿಸಿದ ಫಲಾನುಭವಿಗಳ ಖಾತೆಗೆ ಬಿಡುಗಡೆಯಾದ ತಕ್ಷಣ ಜಮೆ ಮಾಡಬೇಕೆಂದು ಹೇಳಿದರು.
ರಿಸರ್ವ್ ಬ್ಯಾಂಕ್ ಪ್ರತಿನಿಧಿ ಈಲ್ಲಾ ಸಾಹೂ ಮಾತನಾಡಿ, ರೈತರ ಬೆಳೆ ಸಾಲವನ್ನು ಆದಷ್ಟು ಬೇಗ ಪುನರ್ ರಚನೆ ಮಾಡಬೇಕು ಎಂದರು.
ನಬಾರ್ಡ್ ಡಿಡಿಎಂ ಮಯೂರ ಕಾಂಬಳೆ , ಬ್ಯಾಂಕ್ ಆಫ್‌ಪ್ ಬರೋಡಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಶ್ರೀಹರಿ ಇದ್ದರು.