ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ವಿಭಜನೆ ಬಳಿಕ ಕ್ಷೀಣವಾದ ಧ್ವನಿ

‘ಹೂ ಬಳ್ಳಿ’ಯ ಊರಿನಲ್ಲಿ ಅಕ್ಷರ ಜಾತ್ರೆಯ ಸಂಭ್ರಮ: ಸಮ್ಮೇಳನಾಧ್ಯಕ್ಷ ಬಸವರಾಜ ಸಾದರ ಬೇಸರ
Last Updated 28 ಜುಲೈ 2019, 12:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಒಂದು ಕಾಲಕ್ಕೆ ಅತ್ಯಂತ ದೊಡ್ಡ ಜಿಲ್ಲೆ ಎನಿಸಿದ್ದ ಧಾರವಾಡ, ವಿಭಜನೆಯ ಬಳಿಕ ತನ್ನ ಸಾಮರ್ಥ್ಯ ಮತ್ತು ವೈಶಾಲ್ಯ ಕಳೆದುಕೊಂಡಿದೆ. ಹಕ್ಕಿಗಾಗಿ ಹೋರಾಡುವ ಜನರ ಧ್ವನಿ ಕ್ಷೀಣವಾಗಿದೆ ಎಂದು ಧಾರವಾಡ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಬಸವರಾಜ ಸಾದರ ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷರ ಭಾಷಣ ಆರಂಭವಾದಾಗ ಹೊರಗಡೆ ಜಿಟಿಜಿಟಿ ಮಳೆ ಸುರಿಯುತ್ತಿತ್ತು. ಹೀಗಾಗಿ ವಾತಾವರಣ ತಂಪಾಗಿತ್ತು. ‌ಆದರೆ, ಸಭಾಂಗಣದ ಒಳಗೆ ಅವರ ಮೊನಚಾದ ಮಾತುಗಳು ಸರ್ಕಾರದ ನಿರ್ಲಕ್ಷ್ಕ್ಯಕ್ಕೆ ‘ಬಿಸಿ’ ಮುಟ್ಟಿಸುತ್ತಿದ್ದವು. ಅವರು ಮಾತಿನುದ್ದಕ್ಕೂ ಪ್ರಾದೇಶಿಕ ಅಸಮಾನತೆ, ಮಹದಾಯಿ ಹೋರಾಟ, ರೈತರ ಸಮಸ್ಯೆಗಳು, ಸಾಹಿತ್ಯ ಮತ್ತು ಸಾಹಿತಿಗಳ ಕ್ರಿಯಾಶಕ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್‌ ಹೇಗೆ ಸೆಳೆದಿಟ್ಟುಕೊಂಡಿದೆ ಎನ್ನುವುದರ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟರು.

‘ಧಾರವಾಡ ಜಿಲ್ಲೆಯಿಂದ ಹಾವೇರಿ ಮತ್ತು ಗದಗ ಪ್ರತ್ಯೇಕವಾದ ಮೇಲೂ, ಧಾರವಾಡ ಜೀವಂತಿಕೆ, ಸೃಜನಶೀಲತೆ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಗುಣಸಂಪನ್ನತೆಯನ್ನು ಮೂಲ ಅಸ್ಮಿತೆಯೊಂದಿಗೆ ಉಳಿಸಿಕೊಂಡಿದೆ. ಆದರೆ, ಈ ಭಾಗಕ್ಕೆ ದೊರಕಬೇಕಾದ ಪಾಲು ಪಡೆಯಲು ಹಿಂದೆ ನಡೆಯುತ್ತಿದ್ದ ಗಟ್ಟಿ ಹೋರಾಟಗಳ ಕಿಚ್ಚು ಈಗ ಮಂದವಾಗಿದೆ’ ಎಂದರು.

‘ಸ್ವಾತಂತ್ರ್ಯ ಹೋರಾಟ, ಏಕೀಕರಣ ಚಳವಳಿ, ಗೋಕಾಕ್‌ ಚಳವಳಿ, ನೈರುತ್ಯ ರೈಲ್ವೆ ವಲಯ, ಹೈಕೋರ್ಟ್‌ ಪೀಠಕ್ಕಾಗಿ ಉಗ್ರ ಹೋರಾಟಗಳನ್ನು ನಡೆಸಿದ ಜಿಲ್ಲೆಯ ಜನ ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಹಿಂದುಳಿದಿದ್ದಾರೆ. ಡಾ. ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನ, ಮಹದಾಯಿ ಯೋಜನೆ ಜಾರಿ, ಈ ಭಾಗದ ರೈತರ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳುವ ಹೋರಾಟ ನಿಧಾನಗತಿಯಲ್ಲಿವೆ. ಇದಕ್ಕೆ ಜನಪ್ರತಿನಿಧಿಗಳು, ರಾಜಕಾರಣಿಗಳು; ಇವರಲ್ಲಿ ಯಾರನ್ನು ದೂರಬೇಕು? ಬೆಂಗಳೂರಿನ ಹೊಟ್ಟೆ ತುಂಬಿಸಿದ ಬಳಿಕ ಯಾವಾಗಲಾದರೊಮ್ಮೆ ಅಷ್ಟಿಷ್ಟು ಕೊಡುವ ಪ್ರಸಾದ ಸ್ವೀಕರಿಸಿ ಮೌನವಾಗಿರಬೇಕೇ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಪ್ರಾದೇಶಿಕ ಅಸಮಾನತೆ ಎಂಬುದು ಆರ್ಥಿಕಾಭಿವೃದ್ಧಿಗಷ್ಟೇ ಸೀಮಿತವಾಗಿಲ್ಲ. ಸಾಂಸ್ಕೃತಿಕವಾಗಿಯೂ ಅಸಮಾನತೆ ಎದ್ದು ಕಾಣುತ್ತಿದೆ. ಎಲ್ಲ ಸಾಹಿತ್ಯಿಕ ಮತ್ತು ಕಲಾ ಚಟುವಟಿಕೆಗಳಿಗೆ ಒತ್ತಾಸೆಯಾಗಿರುವ ಧಾರವಾಡವನ್ನು ಕಡೆಗಣಿಸಲಾಗುತ್ತಿದೆ. ರಾಜ್ಯದಲ್ಲಿ ಸಾಕಷ್ಟು ಅಕಾಡೆಮಿಗಳು, ಪ್ರಾಧಿಕಾರಗಳು, ನಿಗಮ ಮಂಡಳಿಗಳಿವೆ. ಬಹುತೇಕವು ಬೆಂಗಳೂರಿಗೆ ಸೀಮಿತವಾಗಿವೆ. ಸಂಗೀತ ದಿಗ್ಗಜರ ತವರು ಧಾರವಾಡದಲ್ಲಿ ಹಿಂದೂಸ್ತಾನಿ ಸಂಗೀತ ಅಕಾಡೆಮಿಯನ್ನು, ಚಿತ್ರ ಹಾಗೂ ಶಿಲ್ಪಕಲೆಗಳ ತವರು ಕಲಬುರ್ಗಿಯಲ್ಲಿ ಶಿಲ್ಪಕಲಾ ಅಕಾಡೆಮಿಯನ್ನು ಏಕೆ ಆರಂಭಿಸಬಾರದು?; ಪಂಪ, ನಾರಾಯಣಪ್ಪ ಓಡಾಡಿದ ಗದಗಿನಲ್ಲಿ ಸಾಹಿತ್ಯ ಅಕಾಡೆಮಿ ಯಾಕೆ ಸ್ಥಾಪಿಸಬಾರದು’ ಎಂದು ಪ್ರಶ್ನೆ ಹಾಕಿದರು.

ಇಂಗ್ಲಿಷರಿಂದ ಕನ್ನಡ ಶಾಲೆ, ಕನ್ನಡಿಗರಿಂದ ಇಂಗ್ಲಿಷ್‌ ಶಾಲೆ!

ಧಾರವಾಡದಂತ ಸಂಪೂರ್ಣ ಕನ್ನಡ ಪ್ರದೇಶದಲ್ಲಿ ಮುಂಬೈ ಸರ್ಕಾರ ಮರಾಠಿ ಶಾಲೆ ಪ್ರಾರಂಭಿಸಿತ್ತು. ಇದನ್ನು ಬಲವಾಗಿ ವಿರೋಧಿಸಿದ್ದ ವಾಲ್ಟರ್‌ ಎಲಿಯಟ್‌ ಎಂಬ ಬ್ರಿಟಿಷ್‌ ಅಧಿಕಾರಿ ಧಾರವಾಡದಲ್ಲಿ ಮರಾಠಾ ಶಾಲೆ ಆರಂಭಿಸಿದ್ದು ತಪ್ಪು. ಇಲ್ಲಿನ ಜನರ ಭಾಷೆ ಕನ್ನಡ, ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕಿದ್ದು ನ್ಯಾಯಸಮ್ಮತ ಎಂದು ಪ್ರತಿಪಾದಿಸಿ, ಕನ್ನಡ ಶಾಲೆ ಆರಂಭಿಸಿದರು. 1831ರಿಂದ ಮೂರು ವರ್ಷ ಶಾಲೆಯ ಎಲ್ಲ ವೆಚ್ವವನ್ನು ತಾವೇ ಭರಿಸಿದ್ದರು. ಆದರೆ, ಈಗ ರಾಜ್ಯ ಸರ್ಕಾರವೇ ಇಂಗ್ಲಿಷ್‌ ಶಾಲೆಗಳನ್ನು ಆರಂಭಿಸಿದ್ದು ದುರ್ದೈವ ಎಂದು ಬಸವರಾಜ ಸಾದರ ಬೇಸರ ವ್ಯಕ್ತಪಡಿಸಿದರು.

‘ಬೆಂಗಳೂರಿನಲ್ಲಿ ಇತ್ತೀಚಿಗೆ 15 ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಬೋಧನೆ ರದ್ದಾಗಿದೆ. ಕೆಲ ವರ್ಷಗಳಲ್ಲಿ ರಾಜ್ಯದ ಎಲ್ಲ ಕಡೆ ಇದೇ ಪರಿಸ್ಥಿತಿ ಎದುರಾಗುತ್ತದೆ. ತಾಯ್ನಾಡಿನ ಭಾಷೆಯಲ್ಲಿ ಶಿಕ್ಷಣ ದೊರೆತರೆ ಆಗುವ ಅನುಕೂಲಗಳ ಬಗ್ಗೆ ಸರ್ಕಾರಕ್ಕೆ ಅರಿವಿಲ್ಲ. ರಾಜ್ಯ ಸರ್ಕಾರದ ನಡೆಯಿಂದ ಮಕ್ಕಳೇ ತಾಯಿಯನ್ನು ಕೊಲೆ ಮಾಡಿದಂತಾಗಿದೆ’ ಎಂದರು.

ಬದುಕಲು ಹೂವಿನ ವ್ಯಾಪಾರ, ಹೂ ಮಾರಾಟವಾಗಲು ಸಾವು!

ಭಾಷಣ ಆರಂಭದಲ್ಲಿ ಬಸವರಾಜ ಸಾದರ ತಮ್ಮ ಬದುಕಿನ ಅನುಭವ ಹೇಳಿದರು.

ಮನೆಯವರ ಆಗ್ರಹದ ಮೇರೆಗೆ ಅದೊಂದು ದಿನ ಹೂ ತರಲು ಮಾರುಕಟ್ಟೆಗೆ ಹೋದಾಗ ಹೂವಿನಂಗಡಿಯ ಅಜ್ಜಿ ಗುಲಾಬಿ ಹೂಗಳ ದೊಡ್ಡ ಮಾಲೆಗಳನ್ನು ಕಟ್ಟಿ ಇಟ್ಟಿದ್ದಳು. ಅಚ್ಚರಿಯಾಗಿ ಇಷ್ಟೊಂದು ದೊಡ್ಡ ಹಾರಗಳನ್ನು ಯಾರು ಖರೀದಿಸುತ್ತಾರೆ ಎಂದು ಪ್ರಶ್ನಿಸಿದೆ.

ಇದಕ್ಕುತ್ತರವಾಗಿ ಅಜ್ಜಿ, ಹೊಟ್ಟೆ ಪಾಡಿಗೆ ಏನಾದರೂ ಮಾಡಬೇಕಲ್ಲ; ಯಾರಾದ್ರಾ ಹೊಗಿ (ಮೃತಪಟ್ಟರೆ) ಹಾಕಿಸಿಕೊಂಡ್ರ ಮಾರಾಟ ಆಗ್ತಾವೆ. ಮೊನ್ನೆ ಯಾರೊ ದೊಡ್ಡ ಮನುಷ್ಯ ಹೊಗಿ ಹಾಕಿಸ್ಕೋಂಡನಂತ, ಅದಕ್ಕೆ ಒಂದೂ ಹಾರ ಉಳಿಲಿಲ್ಲ. ಇತ್ತೀಚಿಗೆ ಹೊಗಿ ಹಾಕಿಸ್ಕೋಳ್ಳೊರೊ ಕಡಿಮಿ ಆಗ್ಯಾರ. ಇದರಿಂದ ನಮ್ಮ ವ್ಯಾಪಾರಕ್ಕೆ ದೊಡ್ಡ ಹೊಡೆತ ಬೀಳಕತೈತಿ ಎಂದು ಅಜ್ಜಿ ಉತ್ತರಿಸಿದರು.

ಈ ಘಟನೆ ನನ್ನ ಮೇಲೆ ಗಾಢ ಪರಿಣಾಮ ಬೀರಿತು. ಬದುಕಲು ಹೂವಿನ ವ್ಯಾಪಾರ, ಹೂ ಮಾರಾಟವಾಗಲು ಸಾವು. ಸತ್ತವರ ಮನೆಯಲ್ಲಿ ನೋವು, ಹೂ ಮಾರಾಟವಾದರೆ ಮಾತ್ರ ಅಜ್ಜಿಗೆ ಅನ್ನ. ಬದುಕು ಎಷ್ಟೊಂದು ಸಂಕೀರ್ಣವಲ್ಲವೇ? ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT