ಮಂಗಳವಾರ, ಡಿಸೆಂಬರ್ 10, 2019
19 °C
ಕಾಂಗ್ರೆಸಿಗರಿಂದ ಕ್ರೇನ್‌ ಮೂಲಕ ಹೂವು, ಹಣ್ಣಿನ ಬೃಹತ್‌ ಮಾಲೆ ಅರ್ಪಣೆ

ಡಿ.ಕೆ.ರೋಡ್‌ಷೋ ಹವಾ; ಅಭೂತಪೂರ್ವ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ(ಇಡಿ) ಬಂಧಿತರಾಗಿ ತಿಹಾರ್‌ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಶಾಸಕ ಡಿ.ಕೆ.ಶಿವಕುಮಾರ್‌ ನಗರದಲ್ಲಿ ಗುರುವಾರ ಬೃಹತ್‌ ರೋಡ್‌ ಷೋ ಮತ್ತು ಸಮಾವೇಶವನ್ನು ನಡೆಸುವ ಮೂಲಕ ಹವಾ ಎಬ್ಬಿಸಿದರು.

ಇಲ್ಲಿನ ವಿಮಾನ ನಿಲ್ದಾಣದ ಮುಂಭಾಗದಿಂದ ಸಮಾವೇಶ ಆಯೋಜನೆಗೊಂಡಿದ್ದ ಗೋಕುಲ ಗಾರ್ಡನ್‌ ವರೆಗೆ ಸುಮಾರು ಒಂದೂವರೆ ತಾಸು ಬೃಹತ್‌ ರೋಡ್‌ ಶೋ ನಡೆಸಿದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕಾಂಗ್ರೆಸ್‌ ಕಾರ್ಯಕರ್ತರು, ಕ್ರೇನ್‌ ಮೂಲಕ ಸೇವಂತಿಗೆ ಮತ್ತು ಗುಲಾಬಿ ಹೂವಿನ ಬೃಹತ್‌ ಮಾಲೆಯನ್ನು ಹಾಕುವ ಮೂಲಕ ಅಭಿನಂದಿಸಿದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ದೀಪಾ ನಾಗರಾಜ ಗೌರಿ ದಂಪತಿ 200 ಕೆ.ಜಿ.ತೂಕದ 25 ಅಡಿ ಉದ್ದನೆಯ ಸೇಬಿನ ಹಣ್ಣಿನ ಹಾರವನ್ನು ಕ್ರೇನ್‌ ಮೂಲಕ ಹಾಕಿ ಅಭಿನಂದಿಸಿದರು. ಹಾರದಿಂದ ಒಂದು ಹಣ್ಣನ್ನು ತೆಗೆದು ತಿಂದು; ಮೂರ್ನಾಲ್ಕು ಹಣ್ಣುಗಳನ್ನು ಕಿತ್ತು ಅಭಿಮಾನಿಗಳತ್ತ ಎಸೆದರು.

ಮಹಿಳೆಯರು ಹಣೆಗೆ ತಿಲಕವಿಟ್ಟು ಆರತಿ ಬೆಳಗಿದರು. ‘ಮುಂದಿನ ಮುಖ್ಯಮಂತ್ರಿ ಡಿ.ಕೆ’, ‘ಹುಬ್ಬಳ್ಳಿಗೆ ಬಂದ ಹುಲಿ’, ‘ಹುಬ್ಬಳ್ಳಿಗೆ ಬಂದ ಕನಕಪುರ ಬಂಡೆ’ ಎಂಬ ಘೋಷಣೆಗಳು, ‘ಬಂದಬಂದ ನಮ್ಮ ಡಿಕೆ ಸಾಹೇಬ’ ಹಾಡಿನ ಅಬ್ಬರ ಮುಗಿಲು ಮುಟ್ಟಿತ್ತು. ದಾರಿಯುದ್ದಕ್ಕೂ ನೆರೆದಿದ್ದ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರು ಪುಷ್ಪವೃಷ್ಟಿಗೈದರು. ವಾದ್ಯ, ಮೇಳಗಳ ಅಬ್ಬರ, ಜಾನಪದ ನೃತ್ಯ ವೈಭವ ಜೋರಾಗಿತ್ತು. ನೆಚ್ಚಿನ ನಾಯಕನಿಗೆ ಸ್ವಾಗತ ಕೋರುವ ಫ್ಲೆಕ್ಸ್‌, ಬ್ಯಾನರ್‌ಗಳು ಹಾಗೂ ಫಲಕಗಳು ಗೋಕುಲ ರೋಡ್‌ನಲ್ಲಿ ರಾರಾಜಿಸಿದವು.

ಸಂಚಾರಕ್ಕೆ ಅಡಚಣೆ: ಶಿವಕುಮಾರ್‌ ರೋಡ್‌ ಷೋದಿಂದಾಗಿ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಗೋಕುಲ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.

ನೀರು ಕುಡಿಸುತ್ತೇನೆ: ಶಿವಕುಮಾರ್‌ ಎಚ್ಚರಿಕೆ

‘ನಾನು ಜೈಲಿಗೆ ಹೋದಾಗ ಕೆಲವರು ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ನಾನು ನೀರು ಕುಡಿದಿದ್ದೇನೆ; ಸಮಯ ಬಂದಾಗ ನಿಮಗೂ ನೀರು ಕುಡಿಸುತ್ತೇನೆ’ ಎಂದು ಡಿ.ಕೆ. ಶಿವಕುಮಾರ್ ತಮ್ಮ ವಿರೋಧಿಗಳಿಗೆ ಎಚ್ಚರಿಕೆ ರವಾನಿಸಿದರು.

ಇಲ್ಲಿನ ಗೋಕುಲ ಗಾರ್ಡನ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಾನು ಯಾರಿಗೂ ಕೆಟ್ಟದ್ದು ಬಯಸಿಲ್ಲ; ಯಾರಿಗೂ ತೊಂದರೆ ಕೊಟ್ಟಿರಲಿಲ್ಲ. ಹೀಗಾಗಿ ತಿಹಾರ್‌ ಜೈಲಿಗೆ ಹೋದಾಗ ಧೈರ್ಯಗುಂದಲಿಲ್ಲ. ಇದೊಂದು ಅಗ್ನಿ ಪರೀಕ್ಷೆ ಎಂದು ತಿಳಿದುಕೊಂಡಿದ್ದೆ. ಗೆದ್ದು ಬರುವ ವಿಶ್ವಾಸವಿದೆ’ ಎಂದು ಹೇಳಿದರು.

‘ನನ್ನ ಬಂಧನವಾದ ಸಂದರ್ಭದಲ್ಲಿ ಅನೇಕರು ಅನೇಕ ಬಗೆಯ ಹೇಳಿಕೆ ನೀಡಿದರು. ಕೆಲವರು ಅವರ ಪಕ್ಷದ ಒತ್ತಡದಿಂದ, ಕೆಲವರು ಸಂತೋಷದಿಂದ, ಇನ್ನು ಕೆಲವರು ದುಃಖದಿಂದ ನನ್ನ ಪರ, ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ. ಅವುಗಳಿಗೆ ಉತ್ತರ ಕೊಡದೇ ನಿರ್ಲಕ್ಷಿಸಲು ಸಾಧ್ಯವಿಲ್ಲ. ಸಮಯ ಬಂದಾಗ ದಾಖಲೆಯಾಗುವಂತ ಉತ್ತರ ನೀಡುತ್ತೇನೆ’ ಎಂದರು.

‘ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ; ಅಧಿಕಾರಕ್ಕೆ ಶಾಶ್ವತವಾಗಿ ಗೂಟ ಹೊಡೆದುಕೊಂಡು ಇರಲು ಸಾಧ್ಯವಿಲ್ಲ. ಕತ್ತಲಾದ ಬಳಿಕ ನಮ್ಮ ನೆರಳೆ ನಮ್ಮ ಜೊತೆ ಇರುವುದಿಲ್ಲ. ಇನ್ನು ಅಧಿಕಾರ ಇರುತ್ತದಾ’ ಎಂದು ಮಾರ್ಮಿಕವಾಗಿ ಹೇಳಿದರು.

‘ದೇಶದಲ್ಲಿ ರೈತರಿಗೆ, ಯುವಜನರಿಗೆ, ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದರೂ ಪರಿಹಾರ ಕಂಡುಕೊಳ್ಳದೇ ಸರ್ಕಾರ ನಡೆಸಿಕೊಂಡು ಹೋಗುತ್ತಿದ್ದಾರೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. 

‘ಕೇಂದ್ರ, ರಾಜ್ಯದಲ್ಲಿ ನಮ್ಮ ಸರ್ಕಾರವಿಲ್ಲ ಎಂದು ಧೈರ್ಯ ಕಳೆದುಕೊಳ್ಳಬೇಡಿ, ಕಾಂಗ್ರೆಸ್‌ ಪಕ್ಷಕ್ಕೆ ತನ್ನದೇ ಆದ ಇತಿಹಾಸ ಇದೆ’ ಎಂದರು.

‘ನನಗೆ ನೋವು ಕೊಟ್ಟವರೇ ನನ್ನ ಮಾರ್ಗದರ್ಶಕರು, ನಂಬಿಸಿ ಮೋಸ ಮಾಡಿದವರೇ ನನಗೆ ಗುರುಗಳು, ಕಷ್ಟ ಕೊಟ್ಟವರೇ ನನ್ನ ಹಿತೈಷಿಗಳು, ಕಾಲು ಎಳೆದವರೇ ಶಕ್ತಿದಾತರು, ತಿರಸ್ಕರಿಸಿದವರೇ ನನ್ನನ್ನು ಪುರಷ್ಕರಿಸಿದವರು, ದೂರ ತಳ್ಳಿದವರೇ ನನ್ನ ಬಂಧುಗಳು ಎಂದು ತಿಳಿದುಕೊಂಡಿದ್ದೇನೆ’ ಎಂದು ಹೇಳಿದರು.

ಆಕಾಂಕ್ಷಿಯಲ್ಲ:

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್‌ ಗುಂಡೂರಾವ್‌, ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಇದ್ದಾರೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ’ ಎಂದು ಶಿವಕುಮಾರ್‌ ಹೇಳಿದರು.

ಶಾಸಕರಾದ ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಸದಸ್ಯೆ ವಿಜಯಲಕ್ಷ್ಮಿ ಪಾಟೀಲ, ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಗ್ರಾಮೀಣ ಘಟಕದ ಅಧ್ಯಕ್ಷ ಅನಿಲ್‌ಕುಮಾರ್‌ ಪಾಟೀಲ, ಮುಖಂಡರಾದ ಎ.ಎಂ.ಹಿಂಡಸಗೇರಿ, ವೀರಣ್ಣ ಮತ್ತಿಕಟ್ಟಿ, ನಾಗರಾಜ ಛಬ್ಬಿ, ಸ್ವಾತಿ ಮಳಗಿ, ಸತೀಶ ಮೆಹರವಾಡೆ, ಜಕ್ಕಪ್ಪನವರ, ಶಾಂತಮ್ಮ ಗುಜ್ಜಳ, ಸದಾನಂದ ಡಂಗನವರ, ಮಂಜುನಾಥ ಗೌಡರ, ಇಸ್ಮಾಯಿಲ್‌ ತಮಟಗಾರ, ವಿನೋದ ಅಸೂಟಿ, ಅಲ್ತಾಫ್‌ ಕಿತ್ತೂರ, ಮುತ್ತಣ್ಣ ಶಿವಳ್ಳಿ, ನವೀದ್‌ ಮುಲ್ಲಾ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)