ಭಾನುವಾರ, ಸೆಪ್ಟೆಂಬರ್ 22, 2019
23 °C
ಇತಿಹಾಸ ತಜ್ಞರ ಕಾರ್ಯಾಗಾರ

ಪ್ರಾಚೀನ ಇತಿಹಾಸ ವಿಶ್ಲೇಷಣೆಗೆ ಡಿಎನ್‌ಎ ವಿಧಾನ ಸಹಕಾರಿ: ಪ್ರೊ. ಪ್ರಮೋದ ಗಾಯಿ

Published:
Updated:
Prajavani

ಧಾರವಾಡ: ‘ಪ್ರಾಚೀನ ಇತಿಹಾಸವನ್ನು ವಿಶ್ಲೇಷಣೆ ಮಾಡುವಲ್ಲಿ ಆನುವಂಶಿಕ ವೈಜ್ಞಾನಿಕ ಡಿಎನ್‌ಎ ವಿಧಾನ ಬಹಳ ಸಹಾಯಕಾರಿಯಾಗಿದೆ’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಪ್ರಮೋದ ಗಾಯಿ ಅಭಿಪ್ರಾಯಪಟ್ಟರು.

ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯವಿಜ್ಞಾನ ವಿಭಾಗದ ವತಿಯಿಂದ ಪ್ರೊ. ಐ.ಕೆ. ಪತ್ತಾರ ಅವರ ಅಭಿನಂದನಾ ಸಮಾರಂಭ, ಇತಿಹಾಸ ತಜ್ಞರ ಕಾರ್ಯಾಗಾರ ಮತ್ತು ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯ ಅಧ್ಯಯನಗಳು ಎಂಬ ವಿಷಯ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

‘ಪ್ರಸ್ತುತ ಪ್ರಾಚೀನ ಇತಿಹಾಸದ ಸಂಶೋಧನೆಯಲ್ಲಿ ಶಿಲೆಗಳು, ಮಾನವನ ಮೂಳೆಗಳು ಮತ್ತು ಲೊಹದ ಪಳಿಯುಳಿಕೆಗಳಿಂದ ಗತಕಾಲದ ಮಾನವನ ಇತಿಹಾಸವನ್ನು ತಿಳಿಯಲು ಸಹಾಯಕವಾಗಿದೆ. ಇದರಿಂದ ಆಧುನಿಕ ಮತ್ತು ವೈಜ್ಞಾನಿಕವಾಗಿ ಡಿಎನ್‌ಎ ಆನುವಂಶಿಕ ವಿಧಾನವನ್ನು ಸಂಶೋಧನೆಯಲ್ಲಿ ಅನುಸರಿಸುತ್ತಿದ್ದು, ಮುಖ್ಯವಾಗಿ ಮಾನವ ಉಗಮ ಮತ್ತು ಬೆಳವಣಿಗೆ ಕುರಿತು ಐತಿಹಾಸಿಕವಾಗಿ ವಿಶ್ಲೇಷಣೆ ಮಾಡುವಲ್ಲಿ ಈ ಪದ್ಧತಿಯ ಅಗತ್ಯವಿದೆ’ ಎಂದರು.

‘ಭಾರತೀಯ ಜನಸಂಖ್ಯೆ ಹಂಚಿಕೆಯು ವಿಭಿನ್ನವಾಗಿದ್ದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿನ ಆದಿವಾಸಿಗಳ ಗತಕಾಲದ ಇತಿಹಾಸವನ್ನು ಅರಿಯಲು ಇಂತಹ ವೈಜ್ಞಾನಿಕ ವಿಧಾನ ಮತ್ತು ಸಂಶೋಧನಾ ವಿಧಾನದ ಮೂಲಕ ವಿಶ್ಲೇಷಸಲಾಗುತ್ತಿದೆ’ ಎಂದು ಡಾ. ಗಾಯಿ ಹೇಳಿದರು.

ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಐ.ಕೆ.ಪತ್ತಾರ ಅವರು ನಿವೃತ್ತಿ ಹೊಂದುತ್ತಿರುವ ಹಿನ್ನಲೆಯಲ್ಲಿ ಪ್ರೊ. ಶಿವರುದ್ರ ಕಲ್ಲೋಳಕರ ಅವರು ಅಭಿನಂದನಾ ಪೂರ್ವಕವಾಗಿ ಮಾತನಾಡಿ, ‘ಪ್ರೊ. ಪತ್ತಾರ ಅವರು ಇತಿಹಾಸ ವಿಭಾಗಕ್ಕೆ ತಮ್ಮ ಕೃತಿ ಮತ್ತು ಸಂಶೋಧನೆಗಳ ಮೂಲಕ ತಮ್ಮದೇ ಆದ ಕೂಡುಗೆಯನ್ನು ನೀಡಿದ್ದಾರೆ. ಅವರ ಮೌನೇಶ್ವರ ಅವರ ವಚನಗಳ ಕುರಿತ ಪುಸ್ತಕ ಸಾಕಷ್ಟು ಜನಮನ್ನಣೆ ಗಳಿಸಿತ್ತು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಭಾಗದ ಮುಖ್ಯಸ್ಥ ಡಾ. ಶಿಲಾಧರ ಮುಗಳಿ ವಹಿಸಿದ್ದರು. ಪ್ರೊ. ಆರ್‌.ಎಂ. ಷಡಕ್ಷರಯ್ಯ ಅವರು ಮಾತನಾಡಿದರು. ಅಭಿನಂದನೆ ಸ್ವೀಕರಿಸಿ ಪ್ರೊ. ಪತ್ತಾರ ಮಾತನಾಡಿ, ‘ಶಿಕ್ಷಕ ವೃತ್ತಿಯಲ್ಲಿ ವಿದ್ಯಾರ್ಥಿಗಳೇ ಶಿಕ್ಷಕರಿಗೆ ಆಸ್ತಿ ಎನ್ನುವುದನ್ನು ಮರೆಯಬಾರದು. ನನ್ನ ಅಧ್ಯಯನ ಮತ್ತು ಸಂಶೋಧನೆ ಮೂಲಕವೇ ನನ್ನನ್ನು ಗುರುತಿಸಲಾಗುತ್ತಿದೆ’ ಎಂದರು.

ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಂಪನ್ಮೂಲ ವ್ಯಕ್ತಿಗಳು ಪ್ರಬಂಧಗಳನ್ನು ಮಂಡಿಸಿದರು.

Post Comments (+)