ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿ ಕಡಿತ; ಮಾಲೀಕರ ವಿರುದ್ಧ ಕ್ರಮಕ್ಕೆ ಆಗ್ರಹ

Last Updated 30 ನವೆಂಬರ್ 2022, 16:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತರಬೇತಿ ಕೇಂದ್ರದಿಂದ ಮನೆಗೆ ಬರುತ್ತಿದ್ದ ಮಗನಿಗೆ ನಾಯಿಯೊಂದು ಕಚ್ಚಿ ಗಾಯಗೊಳಿಸಿದ್ದು, ಆ ನಾಯಿ ಯಾರದ್ದು ಎಂದು ಪತ್ತೆಹಚ್ಚಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಾಳ್ವೇಕರ್‌ ಹಕ್ಕಲದ ಅನಿಲ ಡಿ. ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಗ ಅನಿಲ ತರಬೇತಿ ಮುಗಿಸಿ ಮನೆಗೆ ಬರುತ್ತಿದ್ದಾಗ ಪಾಟೀಲಗಲ್ಲಿ ಬಳಿ ನಾಯಿ ಹಲ್ಲೆ ನಡೆಸಿದೆ. ತಲೆ, ಮೈ, ಕೈ, ಕಾಲಿಗೆ ನಾಯಿ ಕಚ್ಚಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. ನಾಯಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಚಾಕು ಇರಿತ: ಕೌಲಪೇಟೆ ನಿವಾಸಿ ಮಹ್ಮದ್‌ಜಮೀರ್‌ ಹಣ ಮತ್ತು ಮೊಬೈಲ್‌ ನೀಡಿಲ್ಲವೆಂದು ಚಾಕುವಿನಿಂದ ಇರಿದು ಪರಾರಿಯಾದ ಅದೇ ಒಣಿಯ ಷಾಹೀದ್‌ ಎಂಬಾತನ ವಿರುದ್ಧ ಕಮರಿಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹ್ಮದ್‌ಜಮೀರ್‌ ಅವರು ಮಂಗಳವಾರ ರಾತ್ರಿ ಪಿಬಿ ರಸ್ತೆಯ ಖರಾದಿ ಓಣಿಯಲ್ಲಿದ್ದ ಎಟಿಎಂ ಯಂತ್ರದಿಂದ ಹಣ ತೆಗೆದು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ತೊರವಿಹಕ್ಕಲದ ದುರ್ಗಾದೇವಿ ದೇವಸ್ಥಾನದ ಬಳಿ ಷಾಹೀದ್‌ ಬೈಕ್‌ ಅಡ್ಡಗಟ್ಟಿ ಹಣ, ಮೊಬೈಲ್‌ ನೀಡುವಂತೆ ಒತ್ತಾಯಿಸಿದ್ದಾನೆ. ಮೊಬೈಲ್‌ ಕಿತ್ತುಕೊಳ್ಳಲು ಯತ್ನಿಸಿದಾಗ ಮಹ್ಮದ್‌ಜಮೀರ್‌ ಅವನಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದರು. ಆಗ ಆರೋಪಿ ಬಟನ್‌ ಚಾಕುವಿನಿಂದ ಅವರ ತಲೆಯ ಹಿಂಭಾಗಕ್ಕೆ ಇರಿದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿ ಬಂಧನ; ಚಿನ್ನಾಭರಣ ವಶ: ಒಂದೂವರೆ ತಿಂಗಳ ಹಿಂದೆ ನಗರದ ಎಪಿಎಂಸಿ ಆವರಣದಲ್ಲಿ ಮಹಿಳೆ ಧರಿಸಿದ್ದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ನವನಗರ ಠಾಣೆ ಪೊಲೀಸರು ಬಂಧಿಸಿ, ₹50 ಸಾವಿರ ಮೌಲ್ಯದ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ.

ಹಳೇಹುಬ್ಬಳ್ಳಿ ಅಂಚಟಗೇರಿ ಓಣಿಯ ನಾಗರಾಜ ವಾಲೇಕಾರ ಬಂಧಿತ ವ್ಯಕ್ತಿ. ಮಹಿಳೆ ಕಟ್ಟಿಗೆ ಆರಿಸುತ್ತಿದ್ದಾಗ ಅವರ ಕಣ್ಣಿಗೆ ಕಾರದ ಪುಡಿ ಎರಚಿ, ಮಾಂಗಲ್ಯ ಹಾಗೂ ಸರ ಕಿತ್ತು ಪರಾರಿಯಾಗಿದ್ದ. ಇನ್‌ಸ್ಪೆಕ್ಟರ್‌ ಬಿ.ಎಸ್‌. ಮಂಟೂರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

₹1.75 ಲಕ್ಷ ವಂಚನೆ: ಧಾರವಾಡದ ನಿವೃತ್ತ ಉದ್ಯೋಗಿ ಆನಂದಪ್ರಭು ಗದಗ ಅವರಿಗೆ ಭವಿಷ್ಯನಿಧಿ ಹಣ ಸಂದಾಯ ಮಾಡುವುದಾಗಿ ನಂಬಿಸಿದ ಮೂವರು, ಸೇವಾ ಶುಲ್ಕದ ನೆಪದಲ್ಲಿ ₹1.75 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಹುಬ್ಬಳ್ಳಿ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT