ಭಾನುವಾರ, ಸೆಪ್ಟೆಂಬರ್ 25, 2022
20 °C
‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟದಲ್ಲಿ ಹುತಾತ್ಮನಾಗಿದ್ದ ವಿದ್ಯಾರ್ಥಿ

ಬ್ರಿಟಿಷರ ಗುಂಡಿಗೆ ಎದೆಯೊಡ್ಡಿದ್ದ ನಾರಾಯಣ ಡೋಣಿ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಸ್ವಾತಂತ್ರ್ಯ’ವು ಅಸಂಖ್ಯ ಜನರ ಹೋರಾಟದ ಫಲ. ದೇಶದಾದ್ಯಂತ ಹೊತ್ತಿದ್ದ ಹೋರಾಟದ ಕಿಚ್ಚಿನಲ್ಲಿ ಲೆಕ್ಕವಿಲ್ಲದಷ್ಟು ಮಂದಿ ತಮ್ಮ ಜೀವವನ್ನು ತ್ಯಾಗ ಮಾಡಿದ್ದಾರೆ. ಆ ಪೈಕಿ, ನಗರದ ದುರ್ಗದ ಬೈಲ್‌ನ ಮರಾಠ ಗಲ್ಲಿಯ 14 ವರ್ಷದ ವಿದ್ಯಾರ್ಥಿ ನಾರಾಯಣ ಡೋಣಿ ಪ್ರಮುಖರು.

ಬ್ರಿಟಿಷರ ವಿರುದ್ಧ 1942ರಲ್ಲಿ ಹೋರಾಟ ಉತ್ತುಂಗಕ್ಕೇರಿತ್ತು. ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಗೆ ಗಾಂಧೀಜಿ ಕರೆ ನೀಡಿದ್ದರು. ಆ ಕರೆಗೆ ಓಗೊಟ್ಟು ಆ. 9ರಂದು ದುರ್ಗದ ಬೈಲ್‌ನಿಂದ ಹೋರಾಟಗಾರರು ಮೆರವಣಿಗೆ ಹೊರಟ್ಟಿದ್ದರು.

ಲ್ಯಾಮಿಂಗ್ಟನ್ ಶಾಲೆಯಲ್ಲಿ ಓದುತ್ತಿದ್ದ ಡೋಣಿ, ಮಧ್ಯಾಹ್ನ ಶಾಲೆ ಮುಗಿಸಿಕೊಂಡು ಬಂದವರೇ ತಮ್ಮ ಮನೆಯಿಂದ ಕೂಗಳತೆ ದೂರದಲ್ಲಿ ನಡೆಯುತ್ತಿದ್ದ ಹೋರಾಟದಲ್ಲಿ ಸೇರಿಕೊಂಡರು. ಕೈಯಲ್ಲಿ ತ್ರಿವರ್ಣ ಹಿಡಿದು, ಸ್ವಾತಂತ್ರ್ಯದ ಘೋಷಣೆಯೊಂದಿಗೆ ವಂದೇ ಮಾತರಂ ಹಾಡುತ್ತಾ ಮೆರವಣಿಗೆಯ ಮುಂಚೂಣಿಯಲ್ಲಿದ್ದರು.

ಎಚ್ಚರಿಕೆಗೆ ಕದಲಿಲ್ಲ: ‘ಹೋರಾಟದ ಕಾವು ಹೆಚ್ಚಾಗಿದ್ದನ್ನು ಗಮನಿಸಿದ ಬ್ರಿಟಿಷ್ ಪೊಲೀಸರು, ಸ್ಥಳದಿಂದ ತೆರಳುವಂತೆ ಹೋರಾಟಗಾರರಿಗೆ ಸೂಚನೆ ನೀಡಿದರು. ಆದರೆ, ಯಾರೂ ಕದಲಲಿಲ್ಲ. ಆಗ ಪೊಲೀಸರು, ಬ್ರಾಡ್‌ವೇ ಬಳಿಯ ಕಲಾದಗಿ ಓಣಿಯತ್ತ ಬಂದ ಮೆರವಣಿಗೆಯ ಮುಂಭಾಗದಲ್ಲಿ ಜೋರಾಗಿ ಘೋಷಣೆ ಕೂಗುತ್ತಿದ್ದ ಡೋಣಿ ಅವರತ್ತ ಗುಂಡು ಹಾರಿಸಿದರು’ ಎಂದು ಡೋಣಿ ಅವರ ತಮ್ಮನ ಮಗ  ಖಂಡೋಬಾ ಡೋಣಿ ಇತಿಹಾಸದ ದುರಂತವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ಗಂಭೀರವಾಗಿ ಗಾಯಗೊಂಡ ಅವರನ್ನು ಚಿಟಗುಪ್ಪಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಹುತಾತ್ಮರಾದರು. ಮಾರನೆಯ ದಿನ ಆ.10ರಂದು ಅವರ ಪಾರ್ಥಿವ ಶರೀರವನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಅಂತ್ಯಕ್ರಿಯೆ ಮಾಡಲಾಯಿತು’ ಎಂದುಹೇಳಿದರು.

ಘಟನೆಗೆ ಸಾಕ್ಷಿಯಾಗಿದ್ದ ಸಿ.ಎಂ ತಾಯಿ: ‘ಹೋರಾಟದಲ್ಲಿ ಡೋಣಿ ಅವರು ಬ್ರಿಟಿಷರ ಗುಂಡಿಗೆ ಬಲಿಯಾಗಿದ್ದ ಘಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಾಯಿ ಗಂಗಮ್ಮಾ ಬೊಮ್ಮಾಯಿ ಅವರು ಸಾಕ್ಷಿಯಾಗಿದ್ದರು’ ಎಂದು ಓಣಿಯ ಅಣ್ಣಪ್ಪ ನವಲೂರ ಮತ್ತು ವೀರೇಶ ಅರಕೇರಿ ತಿಳಿಸಿದರು.

‘ಡೋಣಿ ಅವರು ಹುತಾತ್ಮರಾದ ಸ್ಥಳದಲ್ಲಿ ಸ್ಮಾರಕ ಸ್ಥಾಪಿಸಲು ಪಾಲಿಕೆ ಮುಂದಾದಾಗ, ಕೈಯಲ್ಲಿ ಧ್ವಜ ಹಿಡಿದ ಡೋಣಿ ಅವರ ಮೂರ್ತಿಯನ್ನು ದಾನವಾಗಿ ನೀಡಿದ್ದ ಗಂಗಮ್ಮಾ, 2000ದಲ್ಲಿ ಸ್ಮಾರಕದ ಉದ್ಘಾಟನೆ ಸಹ ನೆರವೇರಿಸಿದ್ದರು. ಬಳಿಕ, ಆ ವೃತ್ತಕ್ಕೆ ನಾರಾಯಣ ಡೋಣಿ ಚೌಕ ಎಂದು ಹೆಸರಿಡಲಾಯಿತು’ ಎಂದು ಇಬ್ಬರೂ ಮೆಲುಕು ಹಾಕಿದರು.

ಸ್ಮಾರಕ ನಿರ್ವಹಣೆಗೆ ನಿರ್ಲಕ್ಷ್ಯ: ಡೋಣಿ ಅವರ ಸ್ಮರಣಾರ್ಥವಾಗಿ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಅದರಲ್ಲಿ ಒಂದು ಕಡೆ ಹುತಾತ್ಮರಾದ ಡೋಣಿ ಹೆಸರು ಮತ್ತು ಮತ್ತೊಂದು ಕಡೆ ಸಂವಿಧಾನದ ಪ್ರಸ್ತಾವನೆಯನ್ನು ಕೆತ್ತಲಾಗಿದೆ. ಅಶೋಕ ಚಕ್ರವನ್ನೊಳಗೊಂಡ ಸ್ಮಾರಕದ ನಿರ್ವಹಣೆಗೆ ಮಹಾನಗರ ಪಾಲಿಕೆ ನಿರ್ಲಕ್ಷ್ಯ ತೋರಿದೆ. ಅದರ ಸುತ್ತ ಹಾಕಿರುವ ಕಬ್ಬಿಣದ ಸರಳುಗಳು ಕಿತ್ತು ಹೋಗಿವೆ. ಬಣ್ಣ ಕಾಣದೆ ಇಡೀ ಸ್ಮಾರಕವು ಮಾಸಿದಂತೆ ಕಾಣುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.