ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಪಡೆಯಲು ಭಯ ಬೇಡ: ಡಾ. ಎಸ್‌. ಎಂ. ಕಗ್ಗಲಗೌಡರ ಸಲಹೆ

ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ಸಂದರ್ಶಕ ಫಿಜಿಸಿಯನ್‌ ಡಾ.ಎಸ್‌.ಎಂ.ಕಗ್ಗಲಗೌಡರ ಸಲಹೆ
Last Updated 14 ಫೆಬ್ರುವರಿ 2021, 9:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕೊರೊನಾ ಸೋಂಕಿನಿಂದ ಸಮುದಾಯವನ್ನು ರಕ್ಷಿಸಲು, ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಲಸಿಕೆ ಪಡೆಯುವುದು ಅಗತ್ಯ. ದೇಶದಲ್ಲಿರುವ ಕೋವಿಡ್‌ ಲಸಿಕೆಗಳು ಸುರಕ್ಷಿತವಾಗಿವೆ. ಲಸಿಕೆ ಪಡೆಯಲು ಭಯಬೇಡ’ ಎಂದು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ಸಂದರ್ಶಕ ಫಿಜಿಸಿಯನ್‌ ಡಾ.ಎಸ್‌.ಎಂ.ಕಗ್ಗಲಗೌಡರ ನುಡಿದರು.

ನಗರದ ಸಂಜೀವಿನಿ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಸಭಾಂಗಣದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಜತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ‘ಶ್ವಾಸಕೋಶ ಸಂಬಂಧಿತ ರೋಗಗಳ ಆಯುರ್ವೇದ ಚಿಕಿತ್ಸಾ ಕ್ರಮಗಳು’ ಕುರಿತ ಕಾರ್ಯಾಗಾರದಲ್ಲಿ ಕೋವಿಡ್‌ ಲಸಿಕೆಗಳ ಕುರಿತು ಅವರು ಮಾತನಾಡಿದರು.

‘ಯಾವುದೇ ಲಸಿಕೆ ಸಿದ್ಧಗೊಳ್ಳಲು ಎರಡು ವರ್ಷ ಬೇಕು. ಅದಕ್ಕೆ ನಾಲ್ಕು ಹಂತಗಳು ಇರುತ್ತವೆ. ಕೋವಿಡ್‌ಗೆ ಒಂದು ವರ್ಷದಲ್ಲೇ ಲಸಿಕೆ ಕಂಡು ಹಿಡಿಯಲಾಗಿದೆ. ಈ ಕುರಿತು ಜನರಲ್ಲಿ ಅನುಮಾನಗಳಿವೆ. ಮೊದಲ ಹಾಗೂ ಎರಡನೇ ಹಂತವನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಪ್ರಕಾರವೇ ಲಸಿಕೆಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ, ಮೂರು ಹಾಗೂ ನಾಲ್ಕನೇ ಹಂತದ ಪ್ರಕ್ರಿಯೆಗೆ ವೇಗ ನೀಡಲು ಲಸಿಕಾ ತಯಾರಕ ಕಂಪನಿಗಳು ಹಾಗೂ ಪರೀಕ್ಷಾರ್ಥ ಲಸಿಕೆ ಪಡೆಯುವ ವ್ಯಕ್ತಿಗಳ ನಡುವೆ ಒಪ್ಪಂದ ಮಾಡಿಕೊಂಡು ಲಸಿಕೆಯ ಪ್ರಯೋಗ ಮಾಡಲಾಯಿತು. ಇದರಿಂದ ಲಸಿಕೆ ತ್ವರಿತವಾಗಿ ಸಿದ್ಧಗೊಂಡಿತು’ ಎಂದು ವಿವರಿಸಿದರು.

‘ಭಾರತವು ಕೋವಿಡ್ ಲಸಿಕಾ ತಯಾರಿಕೆಯ ಶಕ್ತಿ ಕೇಂದ್ರವಾಗಿದೆ. ಭಾರತ್ ಬಯೊಟೆಕ್‌ ಹಾಗೂ ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ ಕಂಪನಿಗಳು ಸದ್ಯ ಕೋವಿಡ್‌ ಲಸಿಕೆ ಸಿದ್ಧಪಡಿಸುತ್ತಿವೆ. ಭಾರತ್‌ ಬಯೊಟೆಕ್‌ ಕಂಪನಿಯು ಕೋವ್ಯಾಕ್ಸಿನ್‌ ಲಸಿಕೆ ತಯಾರಿಸಿದರೆ, ಸೆರೆಂ ಇನ್‌ಸ್ಟಿಟೂಟ್‌ ಕೋವಿಶೀಲ್ಡ್‌ ಲಸಿಕೆ ಸಿದ್ಧಪಡಿಸುತ್ತಿದೆ. ಸೆರೆಂ ಪ್ರತಿ ತಿಂಗಳಿಗೆ 50 ಸಾವಿರ ಯೂನಿಟ್‌ಗಳಷ್ಟು ಲಸಿಕೆ ತಯಾರಿಸುತ್ತಿದೆ. ಭಾರತದಲ್ಲಿ ಸಿದ್ಧಪಡಿಸಿರುವ ಲಸಿಕೆಗಳ ಸಾಗಣೆಗೆ ಸುಲಭ. ಮೈನಸ್‌ 2ರಿಂದ ಮೈನಸ್‌ 8 ಡಿಗ್ರಿ ತಾಪಮಾನದಲ್ಲಿ ಸಾಗಿಸಬಹುದು. ಹೀಗಾಗಿ ಇದಕ್ಕೆ ಬೇಡಿಕೆ ಹೆಚ್ಚಿದ್ದು, ವಿವಿಧ 92 ದೇಶಗಳಿಗೆ ಕೋವಿಶೀಲ್ಡ್‌ ಲಸಿಕೆ ರಫ್ತಾಗುತ್ತಿದೆ’ ಎಂದು ವಿವರಿಸಿದರು.

‘ಎರಡೂ ಲಸಿಕೆಗಳು ದೇಹದಲ್ಲಿ ಸಾಕಷ್ಟು ಪ್ರತಿರೋಧ ಕಣಗಳನ್ನು ಉತ್ಪಾದಿಸಲು ಸಮರ್ಥವಾಗಿವೆ. ಮೊದಲ ಡೋಸ್‌ ಪಡೆದರೆ ಶೇ 65ರಿಂದ 70ರಷ್ಟು, ಎರಡನೇ ಡೋಸ್‌ ಬಳಿಕ ಶೇ90ರಿಂ 95ರಷ್ಟು ಪ್ರತಿರೋಧ ಕಣಗಳನ್ನು ಉತ್ಪಾದಿಸಬಲ್ಲವು. ಲಸಿಕೆಯ ಅಡ್ಡಪರಿಣಾಮಗಳು ‌0.1ಕ್ಕಿಂತಲೂ ಕಡಿಮೆ ಇವೆ. ಒಂದು ವರ್ಷದ ಕಾಲ ಇವು ರಕ್ಷಣೆ ಒದಗಿಸಬಲ್ಲವು’ ಎಂದು ವಿವರಿಸಿದರು.

‘ದೇಶದಲ್ಲಿ ಲಸಿಕೆ ಪಡೆದ ಐದಾರು ಜನರು ಮೃತಪಟ್ಟಿರುವುದು ನಿಜ. ಆದರೆ, ಅದು ಲಸಿಕೆಯಿಂದಾಗಿ ಅಲ್ಲ ಎಂಬುದು ದೃಢಪಟ್ಟಿದೆ’ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಸೋಮಶೇಖರಯ್ಯ ಕಲ್ಮಠ ಮಾತನಾಡಿ, ‘ವಿಶ್ವವಿದ್ಯಾಲಯದಿಂದ ಸಂಶೋಧನಾ ಚಟುವಟಿಕೆಗಳಿಗಾಗಿ ₹100 ಕೋಟಿ ಮೀಸಲಿರಿಸಲಾಗಿದೆ. ಅಲ್ಲದೇ, ವಿಶ್ವವಿದ್ಯಾಲಯದಿಂದ ಸಂಶೋಧನಾ ಶಿಷ್ಯವೇತನ ಯೋಜನೆ ಆರಂಭಿಸಲಾಗಿದ್ದು, ಇನ್ನೊಂದು ವಾರದಲ್ಲಿ ಈ ಕುರಿತು ಘೋಷಣೆ ಆಗಲಿದೆ’ ಎಂದರು.

‘ಹುಬ್ಬಳ್ಳಿ ಸೇರಿದಂತೆ ರಾಜ್ಯದಲ್ಲಿ ವಿಶ್ವವಿದ್ಯಾಲಯದ ಐದು ಪ‍್ರಾದೇಶಿಕ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಮಂಗಳೂರಿನಲ್ಲಿ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಇತ್ತೀಚೆಗೆ ಭೂಮಿಪೂಜೆ ಮಾಡಲಾಗಿದೆ. ದಾವಣಗೆರೆಯಲ್ಲಿ ಎರಡು ಎಕರೆ ಉಚಿತ ಜಮೀನು ದೊರೆತಿದೆ. ಕಲಬುರ್ಗಿಯಲ್ಲಿ ಪ್ರಾದೇಶಿಕ ಕೇಂದ್ರ ಸ್ಥಾಪನೆ ಕುರಿತು ಮುಂದಿನ ವಾರದಲ್ಲಿ ಸಭೆ ನಿಗದಿಯಾಗಿದೆ. ಬೆಳಗಾವಿಯಲ್ಲಿ ಇನ್ನಷ್ಟೇ ಜಮೀನು ಹುಡುಕಬೇಕಿದೆ’ ಎಂದರು.

ಧಾರವಾಡ, ಗದಗ, ಹಾವೇರಿ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ 15 ಹೆಚ್ಚು ಕಾಲೇಜುಗಳ ಪ್ರಾಂಶುಪಾಲರು ಸೇರಿದಂತೆ 200ಕ್ಕೂ ಹೆಚ್ಚು ವೃತ್ತಿ ನಿರತ ಆಯುರ್ವೇದ ಚಿಕಿತ್ಸಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಆರ್‌ಜಿಯುಎಚ್‌ಎಸ್ ವಿ.ವಿಯ ಡೀನ್‌ ಫ್ಯಾಕಲ್ಟಿ ಡಾ.ಶ್ರೀನಿವಾಸ ಬನ್ನಿಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚಳ್ಳಕೆರೆಯ ಬಿಎಎಂಸಿ ಪ್ರಾಂಶುಪಾಲ ಡಾ.ಸಿ.ಟಿ.ಬಸವರಾಜಪ್ಪ, ಡಾ.ಅಬ್ದುಲ್‌ಖಾದರ್‌, ಡಾ.ಚರಂತಯ್ಯ ಹಿರೇಮಠ, ಡಾ.ರವೀಂದ್ರಕುಮಾರ್ ಅರಹುಣಸಿ ವೇದಿಕೆ ಮೇಲಿದ್ದರು.

ಪುಣೆಯ ಭಾರತಿ ವಿದ್ಯಾಪೀಠದ ಡಾ.ಪ್ರಸಾದ ಪಂಡಕರ ಅವರು, ‘ಕೋವಿಡ್‌19– ಆಯುರ್ವೇದ ದೃಷ್ಟಿಕೋನ’ ಕುರಿತು ಉಪನ್ಯಾಸ ನೀಡಿದರು.

ಹುಬ್ಬಳ್ಳಿಯಲ್ಲೂ ಪ್ರಾದೇಶಿಕ ಕೇಂದ್ರ ತೆರೆಯಲು ಚಿಂತನೆ ನಡೆಸಿದ್ದು, ಒಂಬತ್ತು ಎಕರೆ ಜಮೀನು ನೀಡುವಂತೆ ಕೋರಲಾಗಿದೆ. ಈ ಸಂಬಂಧ ಸಚಿವರಾದ ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್ ಅವರೊಂದಿಗೆ ಚರ್ಚಿಸಲಾಗಿದೆ.
ಸೋಮಶೇಖರಯ್ಯ ಕಲ್ಮಠ, ಸೆನೆಟ್ ಸದಸ್ಯ, ಆರ್‌ಜಿಯುಎಚ್‌ಎಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT