ಶನಿವಾರ, ಜುಲೈ 24, 2021
21 °C
ಕೋವಿಡ್‌ನಿಂದ ಗುಣಮುಖರಾಗಿ ಬಂದ ಕಾನ್‌ಸ್ಟೆಬಲ್ ರವಿ ಹೊಸಮನಿ ಕಿವಿಮಾತು

ಧಾರವಾಡ: ವದಂತಿ ನಂಬಬೇಡಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಕೊರೊನಾ ಕುರಿತು ಸುಳ್ಳು ವದಂತಿಗಳನ್ನು ನಂಬದೆ, ವಾಸ್ತವವನ್ನು ಅರಿತುಕೊಳ್ಳಬೇಕು. ಎಂದಿಗೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಕೋವಿಡ್‌ ವಿರುದ್ಧದ ಸೆಣಸಾಟಕ್ಕೆ ನಮ್ಮಲ್ಲಿರಬೇಕಾದ ಮುಖ್ಯವಾದ ಆಯುಧಗಳಿವು...’

– ಕೋವಿಡ್‌ನಿಂದ ಗುಣಮುಖರಾದ ಹುಬ್ಬಳ್ಳಿಯ ಉಪನಗರ ಠಾಣೆ ಕಾನ್‌ಸ್ಟೆಬಲ್ ರವಿ ಆರ್. ಹೊಸಮನಿ, ಸೋಂಕಿತರು ಹಾಗೂ ವದಂತಿಗಳನ್ನು ನಂಬಿ ಆತಂಕಪಡುವವರಿಗೆ ನೀಡುವ ಸಲಹೆಗಳಿವು.

ಕಳವು ಪ್ರಕರಣದ ಸೋಂಕಿತ ಆರೋಪಿಯ ಬಂಧನದ ವೇಳೆ, ಆತನ ಪ್ರಾಥಮಿಕ ಸಂಪರ್ಕಕ್ಕೆ ಹೊಸಮನಿ ಬಂದಿದ್ದರು. ಸೋಂಕಿನ ಲಕ್ಷಣಗಳು ಇಲ್ಲದಿದ್ದರೂ, ಜುಲೈ 6ರಂದು ಅವರಿಗೆ ಕೋವಿಡ್ ದೃಢಪಟ್ಟಿತ್ತು. ಧಾರವಾಡದ ಬಿ.ಡಿ. ಜತ್ತಿ ಆಸ್ಪತ್ರೆಯಲ್ಲಿ ಒಂದು ವಾರ ಚಿಕಿತ್ಸೆ ಪಡೆದು ಗುರುವಾರ ಮನೆಗೆ ಬಂದಿರುವ ಅವರು, ಆಸ್ಪತ್ರೆಯ ಅನುಭವಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ಪ್ರತ್ಯೇಕವಾಗಿಡುವುದೇ ವಿಶೇಷ

‘ಆಸ್ಪತ್ರೆಯಲ್ಲಿ ಮನೆಯಲ್ಲಿರುವಂತೆ ಸ್ವಾಭಾವಿಕವಾಗಿದ್ದೆ. ಹಾಗಾಗಿ, ಯಾವುದೇ ಆತಂಕವಿರಲಿಲ್ಲ. ನಿಗದಿತ ಸಮಯಕ್ಕೆ ಊಟ, ತಿಂಡಿ ಜತೆಗೆ, ಜ್ವರದ ಗುಳಿಗೆ ಕೊಡುತ್ತಿದ್ದರು. ಉಳಿದಂತೆ, ಯಾವ ಚಿಕಿತ್ಸೆಯೂ ಅಲ್ಲಿರಲಿಲ್ಲ. ನಮ್ಮನ್ನು ಪ್ರತ್ಯೇಕವಾಗಿಟ್ಟು ನೋಡಿಕೊಳ್ಳುವುದೇ ಕೋವಿಡ್ ಚಿಕಿತ್ಸೆಯ ವಿಶೇಷ’ ಎಂದು ಹೊಸಮನಿ ಹೇಳಿದರು.

‘ಕೇವಲ ಕುಡಿಯಲು, ತೊಳೆಯಲು, ಸ್ನಾನಕ್ಕಷ್ಟೇ ಅಲ್ಲದೆ ಶೌಚಾಲಯಕ್ಕೂ ಬಿಸಿ ನೀರನ್ನೇ ಬಳಸುತ್ತಿದ್ದೆ. ಬೆಳಿಗ್ಗೆ 6 ಗಂಟೆಗೆ ಎದ್ದು ವ್ಯಾಯಾಮ, ಪ್ರಾಣಾಯಾಮ ಮಾಡುತ್ತಿದ್ದೆ. ಆಹಾರ ಸೇವಿಸಿದ ಬಳಿಕ, ಸ್ಥಳದಲ್ಲೇ ಕೆಲ ಹೊತ್ತು ವಾಕಿಂಗ್ ಮಾಡುತ್ತಿದ್ದೆ. ನಿತ್ಯ ಕರೆ ಮಾಡುತ್ತಿದ್ದ ಕುಟುಂಬದವರು ಮತ್ತು ಸ್ನೇಹಿತರಿಗೆ, ಆತಂಕಪಡಬೇಡಿ ಎಂದು ನಾನೇ ಧೈರ್ಯ ತುಂಬುತ್ತಿದ್ದೆ. ನಮ್ಮ ಠಾಣೆಯ ಇನ್‌ಸ್ಪೆಕ್ಟರ್ ಸೇರಿದಂತೆ, ಮೇಲಧಿಕಾರಿಗಳು ಹಾಗೂ ಸಹೋದ್ಯೋಗಿಗಳು ನಿತ್ಯ ಕ್ಷೇಮ ವಿಚಾರಿಸುತ್ತಿದ್ದರು. ಇದು ನನ್ನ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿತು’ ಎಂದರು.

‘ಆಸ್ಪತ್ರೆಯ ಚಿಕಿತ್ಸಾ ವಿಧಾನವನ್ನು ನೋಡಿ, ಮನೆಯಲ್ಲೇ ನಮ್ಮನ್ನು ಇರಲು ಹೇಳಿ ಸಲಹೆಗಳನ್ನು ನೀಡಿದ್ದರೆ ಸಾಕಿತ್ತಲ್ಲವೇ ಎಂದು ಅನ್ನಿಸಿತ್ತು. ಮುಂಜಾಗ್ರತೆ ಜತೆಗೆ, ಜೀವನ ಶೈಲಿಯಲ್ಲಿ ಕೆಲ ಮಾರ್ಪಾಡು ಮಾಡಿಕೊಂಡರೆ ಕೋವಿಡ್‌ನಿಂದ ನಿರಾಂತಕವಾಗಿರಬಹುದು. ನನಗೆ ಕರೆ ಮಾಡಿದವರಿಗೆಲ್ಲ ಇದನ್ನೇ ಹೇಳಿ, ಅವರಲ್ಲಿರುವ ಆತಂಕ ದೂರ ಮಾಡುತ್ತಿದ್ದೇನೆ’ ಎಂದು ಮಾತು ಮುಗಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು