ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಗೇ ಟಿಕೆಟ್‌ ಎನ್ನುವ ಭ್ರಮೆ ಬೇಡ: ನಳಿನ್‌ ಕುಮಾರ್‌ ಕಟೀಲ್‌ ಎಚ್ಚರಿಕೆ

ವಿಧಾನಸಭಾ ಚುನಾವಣೆಯ ಪ್ರಚಾರದ ಕಹಳೆ ಊದಿದ ಬಿಜೆಪಿ
Last Updated 26 ಏಪ್ರಿಲ್ 2022, 16:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಭಿವೃದ್ಧಿ ಕೆಲಸ ಮಾಡದಿದ್ದರೂ ನಮಗೇ ಟಿಕೆಟ್‌ ಸಿಗುತ್ತದೆ ಎನ್ನುವ ಭ್ರಮೆಯಲ್ಲಿ ಯಾರೂ ಇರಬಾರದು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸರ್ವೆ ಮಾಡಿಯೇ ಟಿಕೆಟ್‌ ನೀಡಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ನಡೆದ ಹಾವೇರಿ ಹಾಗೂ ಗದಗ ಜಿಲ್ಲೆಗಳ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಗೆಲ್ಲಬೇಕೆನ್ನುವ ಸಂಕಲ್ಪ ಮಾಡಿದ್ದೇವೆ. ಆದ್ದರಿಂದಚುನಾವಣೆಗೆ ವರ್ಷ ಬಾಕಿ ಇರುವಾಗಲೇ ತಯಾರಿ ಆರಂಭಿಸಿದ್ದೇವೆ.ಪೇಜ್‌ ಪ್ರಮುಖ ಹಾಗೂ ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು ಎಂದು ಹೇಳಿದರು’ ಎಂದು ಮೂಲಗಳು ತಿಳಿಸಿವೆ.

ಪಕ್ಷ ಸಂಘಟನೆ ವಿಷಯದಲ್ಲಿ ನಿಷ್ಕ್ರಿಯವಾಗಿರುವವರನ್ನು ಕೈ ಬಿಟ್ಟು ಹೊಸಬರನ್ನು ನೇಮಿಸಬೇಕು. ಹಾನಗಲ್‌ ಕ್ಷೇತ್ರದಲ್ಲಿ ಸಂಘಟನೆಗೆ ವಿಶೇಷ ಆದ್ಯತೆ ಕೊಡಬೇಕೆಂದು ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ಕ್ಲೀನ್‌ ಸ್ವೀಪ್‌ ಮಾಡಿ: ಸಂಜೆ ನಡೆದ ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಪ್ರಮುಖರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕಟೀಲ್‌ ‘ರಾಜ್ಯದಲ್ಲಿ ಬಿಜೆಪಿಗೆ ಗಟ್ಟಿನೆಲೆ ಒದಗಿಸಿದ ಹುಬ್ಬಳ್ಳಿಯ ನೆಲದಿಂದಲೇ ಪ್ರಚಾರಕ್ಕೆ ಚಾಲನೆ ನೀಡಬೇಕು’ ಎಂದರು.

‘ಮೂರೂ ಜಿಲ್ಲೆಗಳ 17 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ನಾಲ್ಕು ಜನ (ಹುಬ್ಬಳ್ಳಿ ಪೂರ್ವ, ಕುಂದಗೋಳ, ಗದಗ ಹಾಗೂ ಹಾನಗಲ್‌) ಕಾಂಗ್ರೆಸ್‌ ಶಾಸಕರಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆದ್ದು ಕ್ಲೀನ್‌ ಸ್ವೀಪ್‌ ಸಾಧಿಸಬೇಕು. ಕಾರ್ಯಕರ್ತರು ಹಾಗೂ ಬೂತ್‌ ಮಟ್ಟದ ಕಾರ್ಯಕರ್ತರ ಪ್ರಯತ್ನವಿದ್ದರೆಮಾತ್ರ ಇದು ಸಾಧ್ಯವಾಗುತ್ತದೆ.ಇದನ್ನು ಅರಿತು ಎಲ್ಲರೂ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು.

ವಸತಿ ಸಚಿವ ವಿ. ಸೋಮಣ್ಣ, ಶಾಸಕರಾದ ಜಗದೀಶ ಶೆಟ್ಟರ್‌, ಅರವಿಂದ ಬೆಲ್ಲದ, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌, ರಾಜ್ಯಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿದರು.

ಗದಗ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ಮೋಹನ ಮಾಳಶೆಟ್ಟಿ, ಸಚಿವ ಸಿ.ಸಿ.ಪಾಟೀಲ, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಎಸ್‌.ವಿ. ಸಂಕನೂರ, ಮುಖಂಡಅನಿಲ್ ಮೆಣಸಿನಕಾಯಿ, ಬಿಜೆಪಿಯ ಹಾವೇರಿಯ ಜಿಲ್ಲಾ ಘಟಕದ ಅಧ್ಯಕ್ಷಸಿದ್ದರಾಜ ಕಲಕೋಟಿ, ಸಚಿವಬಿ.ಸಿ. ಪಾಟೀಲ, ಸಂಸದ ಶಿವಕುಮಾರ್‌ ಉದಾಸಿ, ಶಾಸಕರಾದ ನೆಹರೂ ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಮಾಜಿ ಶಾಸಕ ಶಿವರಾಜ ಸಜ್ಜನರ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷಯು.ಬಿ. ಬಣಕಾರ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT