ಭಾನುವಾರ, ಡಿಸೆಂಬರ್ 6, 2020
22 °C
ಪುಸ್ತಕ ಓದಿ ಕೋವಿಡ್‌ ಸಮಯ ಕಳೆದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿವಿಮಾತು

ಪರೀಕ್ಷೆಗೆ ಹಿಂಜರಿಯಬೇಡಿ, ಆತ್ಮಸ್ಥೈರ್ಯ ಕುಗ್ಗಿಸಬೇಡಿ: ಸಚಿವ ಪ್ರಲ್ಹಾದ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ನಿಮ್ಮಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದರೆ ಯಾವ ಹಿಂಜರಿಕೆಯೂ ಇಲ್ಲದೆ ಪರೀಕ್ಷೆ ಮಾಡಿಸಿಕೊಳ್ಳಿ. ಮುಂಜಾಗ್ರತೆ ವಹಿಸಿದರೆ ಯಾವ ಅಪಾಯವೂ ಆಗುವುದಿಲ್ಲ. ಕೋವಿಡ್‌ ಬಂದವರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಯಾವತ್ತೂ ಮಾಡಬೇಡಿ...’

–ಕೋವಿಡ್‌ 19ನಿಂದ ಇತ್ತೀಚೆಗೆ ಗುಣಮುಖರಾದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮಾತುಗಳು ಇವು. ಮಂಗಳವಾರ ಹುಬ್ಬಳ್ಳಿ ತಾಲ್ಲೂಕಿನ ಶೆರೇವಾಡದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಲಕ್ಷಣಗಳು ಕಂಡ ಬಂದ ಮೇಲೆ ಪರೀಕ್ಷೆ ಮಾಡಿಸಿಕೊಳ್ಳುವುದು ವಿಳಂಬ ಮಾಡಿದಷ್ಟೂ ಅಪಾಯ ಹೆಚ್ಚು. ಈ ಸೋಂಕಿಗೆ ನಿಖರವಾಗಿ ಔಷಧಿ ಇಲ್ಲವಾದರೂ, ಸೋಂಕು ಶ್ವಾಸಕೋಶ ಪ್ರವೇಶಿಸಿ ಮಾಡುವ ತೊಂದರೆಗಳನ್ನು ತಡೆಗಟ್ಟಲು ಸಾಧ್ಯವಿದೆ. ಆದ್ದರಿಂದ ಪರೀಕ್ಷೆ ಮಾಡಿಸಿಕೊಳ್ಳಲು ಆದ್ಯತೆ ಕೊಡಬೇಕು’ ಎಂದರು.

‘ಸೋಂಕು ದೃಢವಾದರೆ ಮೊದಲಿನ ಹಾಗೆ ಈಗ ಮನೆಯನ್ನು ಹಾಗೂ ಓಣಿಯನ್ನು ಸೀಲ್‌ಡೌನ್‌ ಮಾಡುವುದಿಲ್ಲ. ಪರೀಕ್ಷೆಗೆ ಒಳಪಡಲು ಗಂಟೆಗಟ್ಟಲೆ ಕಾಯುವುದೂ ಬೇಕಿಲ್ಲ. ವರದಿ ಕೂಡ ತ್ವರಿತವಾಗಿ ಬರುತ್ತದೆ. ಪರೀಕ್ಷೆ ಮಾಡಿಕೊಳ್ಳುವ ವಿಚಾರದಲ್ಲಿ ಮುಕ್ತವಾಗಿದ್ದಷ್ಟು ಈ ಸೋಂಕಿನಿಂದ ದೂರವಿರಬಹುದು’ ಎಂದು ಒತ್ತಿ ಹೇಳಿದರು.

‘ನನಗೆ ಮೊದಲಿನಿಂದಲೂ ಪುಸ್ತಕ ಓದುವುದರಲ್ಲಿ ಆಸಕ್ತಿಯಿದೆ. ನಿತ್ಯದ ರಾಜಕೀಯ ಚಟುವಟಿಕೆಗಳಿಂದ ಓದಲು ಆಗಿರಲಿಲ್ಲ. ಕೋವಿಡ್‌ ಸಮಯ ಬಳಸಿಕೊಂಡು ತೇಜೋ ತುಂಗಭದ್ರಾ, ಶಿವಾಜಿ ಮಹಾರಾಜರ 22 ನಾಯಕತ್ವದ ಗುಣಗಳು ಮತ್ತು ಆವರಣ ಸೇರಿದಂತೆ ಐದಾರು ಪುಸ್ತಕಗಳನ್ನು ಓದಿದೆ. ಸೋಂಕು ದೃಢಪಟ್ಟ ಆರಂಭದ ಒಂದೆರೆಡು ದಿನಗಳಲ್ಲಿ ಆರೋಗ್ಯದಲ್ಲಿ ಸ್ವಲ್ಪ ತೊಂದರೆಯಿತ್ತು. ನಂತರ ಏನೂ ತೊಂದರೆಯಾಗಲಿಲ್ಲ’ ಎಂದು ಅನುಭವ ಹಂಚಿಕೊಂಡರು.

ಭಯಪಡಿಸಬೇಡಿ: ಜೋಶಿ ಮನವಿ

ನನಗೆ ಕೋವಿಡ್‌ ಖಚಿತವಾದ ಮೊದಲ ದಿನ ಸ್ನೇಹಿತರೊಬ್ಬರು ದೂರವಾಣಿ ಕರೆ ಮಾಡಿ ಅಶೋಕ ಗಸ್ತಿ, ಸುರೇಶ ಅಂಗಡಿ ಕೋವಿಡ್‌ ಬಂದು ಮೃತಪಟ್ಟರು. ಈಗ ನಿಮಗೆ ಬಂದಿದೆ ಎಂದರು. ಅವರು ಕಾಳಜಿಪೂರ್ವಕವಾಗಿ ಈ ಮಾತುಗಳನ್ನು ಆಡಿದ್ದರೂ, ಸೋಂಕಿತರ ಆಗಿನ ಮನಸ್ಥಿತಿಗೆ ನಕಾರಾತ್ಮಕವಾಗಿಯೇ ಅನಿಸುತ್ತವೆ. ಈ ವಿಷಯವನ್ನು ವೈದ್ಯರ ಜೊತೆ ಹಂಚಿಕೊಂಡಾಗ ಅವರು ಕೆಲ ದಿನಗಳ ಕಾಲ ಯಾರ ಫೋನ್‌ಗಳನ್ನೂ ಸ್ವೀಕರಿಸಬೇಡಿ. ಬೇಗನೆ ಗುಣಮುಖರಾಗುತ್ತೀರಿ ಎಂದು ಸಲಹೆ ನೀಡಿದ್ದರು ಎಂದು ಜೋಶಿ ಹೇಳಿದರು. ಆದ್ದರಿಂದ ಯಾರನ್ನೂ ಭಯಪಡಿಸಬೇಡಿ ಎಂದರು.

ಮೊದಲು ವಾರಿಯರ್ಸ್‌ಗೆ ಲಸಿಕೆ

’ಎರಡು ತಿಂಗಳುಗಳಲ್ಲಿ ಕೊರೊನಾ ಸೋಂಕಿಗೆ ಲಸಿಕೆ ಬರುವ ಸಾಧ್ಯತೆ ದಟ್ಟವಾಗಿದ್ದು, ರಾಜ್ಯದಲ್ಲಿಯೂ ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವ ಸುಧಾಕರ ತಿಳಿಸಿದ್ದಾರೆ. ಮೊದಲು ವಾರಿಯರ್‌ಗಳಿಗೆ ಲಸಿಕೆ ನೀಡಲಾಗುವುದು’ ಎಂದು ಜೋಶಿ ತಿಳಿಸಿದರು.

‘ಲಸಿಕೆ ಬಂದರೂ, ಎಲ್ಲರಿಗೆ ತಲುಪಲು ಒಂದಷ್ಟು ಸಮಯ ಬೇಕಾಗುತ್ತದೆ. ಆದ್ದರಿಂದ ಜನ ಅನಗತ್ಯವಾಗಿ ಹೊರಗಡೆ ಓಡಾಡುವುದನ್ನು ನಿಲ್ಲಿಸಬೇಕು, ಮಾಸ್ಕ್‌ ಧರಿಸಿ, ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು