ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದ ಕಮಲಾಪುರದಲ್ಲಿ ಜೋಡಿ ಕೊಲೆ: ಆರು ಜನರ ಬಂಧನ

ರಿಯಲ್ ಎಸ್ಟೇಟ್ ಉದ್ಯಮಿ ಮೊಹ್ಮದ್ ಕುಡಚಿ ಹತ್ಯೆ ಪ್ರಕರಣ
Published 29 ಮೇ 2023, 6:11 IST
Last Updated 29 ಮೇ 2023, 6:11 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಕಮಲಾಪುರದ ಹೊರವಲಯದಲ್ಲಿ ಆಸ್ತಿ ಮತ್ತು ಹಣದ ವಿಚಾರದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಉಪನಗರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ.

ನವಲಗುಂದ ರಸ್ತೆಯಲ್ಲಿನ ಅಫನಾ ನಗರ ನಿವಾಸಿ ಅರ್ಬಾಜ್‌ ಹಂಚಿನಾಳ(24), ಮೂಲತಃ ಮುಂಡಗೋಡದವರಾಗಿದ್ದ ಮೋರೆ ಪ್ಲಾಟ್‌ನ ಅಲ್ಲಾವುದ್ದೀನ್ ಮಹದಜಾಫರ್ ರಜೇಬ್‌(26), ಅಜಯ್ ಉರುಫ್‌ ಅಜ್ಯಾ ಫಕ್ಕೀರಪ್ಪ ಮದ್ಲಿ(23), ಅಬೀದ್ ಉರುಫ್ ಅಬೀದ್ ಬೈ ನಾಸಿರ್‌ಅಹ್ಮದ ಚಟ್ಟರಕಿ(31), ಅಬೀದ್‌ಅಹ್ಮದ್‌ ಬಾಷಾಸಾಬ್ ಚಿಟ್ಟೆವಾಲೆ(27), ಸಾಹೀಲ್ ರಫೀಕ್ ನದಾಫ್ (26) ಬಂಧಿತರು. ಒಟ್ಟು ಏಳು ಜನರ ತಂಡದಲ್ಲಿ ಗಣೇಶ ಕಮ್ಮಾರ(23) ಎಂಬಾತ ಕೃತ್ಯ ನಡೆದ ದಿನವೇ ತಲ್ವಾರಿನ ಏಟು ಬಿದ್ದು ಮೃತಪಟ್ಟಿದ್ದಾರೆ.

ಕಮಲಾಪೂರದ ಹೊರ ವಲಯದಲ್ಲಿ ಇರುವ ಮನೆಯ ಎದುರು ಶುಕ್ರವಾರ ರಾತ್ರಿ 11.30 ಸುಮಾರಿಗೆ ರಿಯಲ್ ಎಸ್ಟೇಟ್ ಉದ್ಯಮಿ ಮೊಹ್ಮದ್ ಕುಡಚಿ ಕುಳಿತಿದ್ದರು. ಅಲ್ಲಿಗೆ ನುಗ್ಗಿದ ಫ್ರೂಟ್ ಇರ್ಫಾನ ಮಗ ಅರ್ಬಾಜ್ ಸಹಿತ ಏಳು ಜನರ ತಂಡ, ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು ಹಾರಿಸಿ ಕೊಲೆ ಮಾಡಿದ್ದರು. ಕೊಲೆ ಮಾಡಲು ಬಂದಿದ್ದ ಗಣೇಶ ಕಮ್ಮಾರ ಎಂಬಾತ ತಲವಾರು ಏಟು ಬಿದ್ದು ಮೃತಪಟ್ಟಿದ್ದರು. ಮೃತ ಗಣೇಶನನ್ನು ಆರೋಪಿಗಳು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.

ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ರಮಣ ಗುಪ್ತ, ಆರೋಪಿಗಳ ಬಂಧನಕ್ಕೆ ನಾಲ್ಕು ಪೊಲೀಸ್‌ ತಂಡಗಳನ್ನು ರಚಿಸಿ, ತನಿಖೆ ಆರಂಭಿಸಿದ್ದರು. ಆರೋಪಿಗಳ ಜಾಡು ಹಿಡಿದು ಹೊರಟ ಪೊಲೀಸರು, ಹಳಿಯಾಳ, ದಾಂಡೇಲಿ, ಮುಂಡಗೋಡ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದ್ದರು.

ಶಹರ ಉಪವಿಭಾಗದ ಎಸಿಪಿ ವಿಜಯಕುಮಾರ ಟಿ. ಹುಬ್ಬಳ್ಳಿ–ಧಾರವಾಡ ಸಂಚಾರ ಉಪವಿಭಾಗದ ಎಸಿಪಿ ವಿನೋದ ಮುಕ್ತೇದಾರ ನೇತೃತ್ವದ ತಂಡ ಕ್ಷೀಪ್ರ ಕಾರ್ಯಾಚರಣೆ ನಡೆಸಿ, ಘಟನೆ ನಡೆದ 36 ಗಂಟೆಯೊಳಗಾಗಿ ಹುಬ್ಬಳ್ಳಿ ಗಬ್ಬೂರ ಕ್ರಾಸ್ ಬಳಿ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆ ನಡೆದ ದಿನದ ಸಂಜೆಯೇ ಆರೋಪಿಗಳ ಬಂಧನ ಮಾಡಿದ್ದ ಸುದ್ದಿಯಾಗಿತ್ತು. ಆದರೆ, ಪೊಲೀಸ್‌ ಆಯುಕ್ತರು ಅದನ್ನು ನಿರಾಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT