ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಾಹಿತಿ ಸಿದ್ಧಣ್ಣ ಲಂಗೋಟಿಗೆ ಡಾ. ಮೂಜಗಂ ಪ್ರಶಸ್ತಿ ಪ್ರದಾನ

‘ಜಾತಿನೋಡಿ ಮಣೆ; ಜಾತಿಗೊಂದು ಮಠ’– ಬಸವರಾಜ ಹೊರಟ್ಟಿ
Published 26 ಮೇ 2023, 10:31 IST
Last Updated 26 ಮೇ 2023, 10:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪ್ರಸ್ತುತ ದಿನಗಳಲ್ಲಿ ಜಾತಿಯೇ ಎಲ್ಲಕ್ಕಿಂತ ಮುಖ್ಯವಾಗಿದ್ದು, ಬಸವಣ್ಙನವರನ್ನು ಸಹ ಒಂದು ಸಮಾಜಕ್ಕೆ ಸೀಮಿತ ಮಾಡಲಾಗಿದೆ’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಮೂರುಸಾವಿರಮಠದ ಪ್ರೌಢಶಾಲೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ ಅವರ 20ನೇ ಪುಣ್ಯಸ್ಮರಣೋತ್ಸವ ಹಾಗೂ ಡಾ. ಮೂಜಗಂ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈಗ ಪ್ರತಿಯೊಂದರಲ್ಲೂ ಜಾತಿ ನೋಡಿ ಮಣೆ ಹಾಕಲಾಗುತ್ತದೆ. ಅವರವರ ಜಾತಿಯ ವ್ಯಕ್ತಿಗಳನ್ನು ಬೆಳೆಸುವ ಪರಿಪಾಠ ಆರಂಭವಾಗಿದೆ. ಸ್ವಾಮೀಜಿಗಳು ಸಹ ಜಾಣರಾಗಿದ್ದು, ತಮ್ಮ ಜಾತಿಗೊಂದು ಮಠ ಕಟ್ಟಿಕೊಂಡು ಅಧಿಕಾರ ಚಲಾಯಿಸುತ್ತಿದ್ದಾರೆ. ರಾಜಕೀಯದಲ್ಲೂ ಜಾತಿ ನೋಡಿ‌ ಟಿಕೆಟ್ ನೀಡಲಾಗುತ್ತಿದೆ. ಬಸವಣ್ಣ ಇವೆಲ್ಲವನ್ನೂ ವಿರೋಧಿಸಿ, ವಚನಗಳ ಮೂಲಕ ಸಮಾಜದ ಸುಧಾರಣೆಗೆ ಮುಂದಾಗಿದ್ದರು. ಅವರ ತತ್ವ ಸಿದ್ಧಾಂತಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ’ ಎಂದ ಅಭಿಪ್ರಾಯಪಟ್ಟರು.

‘ಮಠ–ಮಂದಿರಗಳ ಮುಖಾಂತರ ಜಗತ್ತಿಗೆ ಬಸತತ್ವ ಸಾರುವ ಕೆಲಸ ಆಗಬೇಕಿದೆ. ಇತ್ತೀಚೆಗೆ ಯಾವ ಮಠಗಳು ಸಹ ಬಸವತತ್ವ ಸಂದೇಶ ಸಾರುವ ದೊಡ್ಡ ಕಾರ್ಯಮಗಳು ಮಾಡಿರುವ ನಿದರ್ಶನಗಳಿಲ್ಲ. ಮಠಾಧೀಶರು ತಪ್ಪು ತಿಳಿದರೂ ನನಗೇನೂ ಬೇಜಾರಿಲ್ಲ’ ಎಂದರು.

‘ಕೆಲವರು ಬದುಕಿಯೂ ಸತ್ತ ಹಾಗೆ ಇರುತ್ತಾರೆ. ಮತ್ತೆ ಕೆಲವರು ಮಣ್ಣಾದರೂ ನಮ್ಮ ಮಧ್ಯೆಯೇ ಇದ್ದಾರೆ ಎನ್ನುವಂತೆ ಬದುಕಿ ಹೋಗಿರುತ್ತಾರೆ. ಮೂಜಗಂ ಅವರು ನಮ್ಮ ನಡುವೆ ಇಲ್ಲದಿದ್ದರೂ, ಅವರು ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ ರೀತಿ ಇನ್ನೂ ಕಣ್ಮುಂದೆಯೇ ಇದೆ. ಅವರ ಹೆಸರಲ್ಲಿ ಸಾಹಿತಿ ಸಿದ್ದಣ್ಣ ಲಂಗೋಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿರುವುದು ಸಂತಸದ ಸಂಗತಿ’ ಎಂದರು.

ಪ್ರಶಸ್ತಿ‌ ಸ್ವೀಕರಿಸಿ ಮಾತನಾಡಿದ ಸಿದ್ದಣ್ಣ ಲಂಗೋಟಿ, ‘ಭಾರತದ 30 ಭಾಷೆಗಳಿಗೆ ವಚನಗಳು ಅನುವಾದವಾಗಿದ್ದು, ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ, ಚರ್ಚೆಗಳು ನಡೆಯುತ್ತಿವೆ. ವಚನಗಳ ಅನುವಾದ ಯೋಜನೆ, ವಿಚಾರ ಸಂಕಿರಣ, ಕಾರ್ಯಾಗಾರಗಳು ಸಹ ನಡೆಯುತ್ತಿವೆ. ಜಗತ್ತಿನ 50 ದೇಶಗಳ ವಿದ್ವಾಂಸರು ತಮ್ಮ ಭಾಷೆಗಳಲ್ಲಿ ಅನುವಾದ ಕಾರ್ಯ ಆರಂಭಿಸಿದ್ದು, 2025ರ ಒಳಗೆ ಪೂರ್ಣಗೊಳ್ಳಲಿದೆ’ ಎಂದರು.

‘132 ದೇಶಗಳಲ್ಲಿ ಬಸವ ಜಯಂತಿ ‌ಆಚರಣೆ ನಡೆಯುತ್ತಿದ್ದು, ಜಗತ್ತಿನ ಅರ್ಧದಷ್ಟು ದೇಶಗಳಲ್ಲಿ ಬಸವಣ್ಣನ ವಚನಸಾರ ವ್ಯಾಪಿಸಿದೆ. ಆದರೆ, ದೀಪದ ಕೆಳಗೆ ಕತ್ತಲು ಎನ್ನುವಂತೆ, ಬಸವಣ್ಣನ ನಾಡಿನವರಾದ ನಾವೇ ಸರಿಯಾಗಿ ಅವರನ್ನು ಅರ್ಥ ಮಾಡಿಕೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಮಹೇಶಣ್ಣ ಟೆಂಗಿನಕಾಯಿ, ‘ಮಠದ ಅಭಿವೃದ್ಧಿ ಕುರಿತು ಸಭೆ ನಡೆಸುತ್ತೇವೆ, ಹೋಗುತ್ತೇವೆ. ನಂತರ ಆ ಕುರಿತು ಯಾರೊಬ್ಬರೂ ಚರ್ಚೆ ನಡೆಸುವುದಿಲ್ಲ. ಪರಿಣಾಮ ಮೂರುಸಾವಿರಮಠ ಪ್ರಗತಿ ಕಾಣುತ್ತಿಲ್ಲ. ಅಭಿವೃದ್ಧಿಗೆ‌ ಎಲ್ಲರೂ ಕೈಜೋಡಿಸಿ, ತಂಡವಾಗಿ‌ ಕೆಲಸ ಮಾಡಬೇಕಿದೆ. ಹಿಂದಿನ ಗತವೈಭವದತ್ತ‌ ಕೊಂಡೊಯ್ಯಲು ಪಣತೊಟ್ಟು, ಮುಂದಿನ ವರ್ಷ ಬಸವ ಜಯಂತಿಯನ್ನು ವಿಶೇಷವಾಗಿ ಆಚರಿಸೋಣ’ ಎಂದರು.

ಸಾಹಿತಿ ಸಿದ್ದಣ್ಣ ಲಂಗೋಟಿ ದಂಪತಿಗೆ ‘ಮೂಜಗಂ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ನವಲಗುಂದ ಬಸವಲಿಂಗ ಸ್ವಾಮೀಜಿ ಮತ್ತು ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೀರಣ್ಣ ಮತ್ತಿಕಟ್ಟಿ, ಅರವಿಂದ ಕುಬಸದ, ಮೋಹನ ಲಿಂಬಿಕಾಯಿ, ಶಶಿಧರ ಸಾಲಿ, ಧಾರವಾಡ ಶೆಟ್ಟರ್‌ ಇದ್ದರು.

‘ಸಭೆ ಕರೆಯಿರಿ; ಹೋಗುವವರು ಹೋಗಲಿ’

ಹುಬ್ಬಳ್ಳಿ: ‘ಮೂರುಸಾವಿರ ಮಠದ ಅಭಿವೃದ್ಧಿಗೆ ಉನ್ನತ ಸಮಿತಿ ರಚನೆ ಮಾಡಲಾಗಿದ್ದು, ಮೂರು–ನಾಲ್ಕು ಬಾರಿ ಸಭೆ ಸಹ ನಡೆಸಲಾಗಿದೆ. ಆದರೆ, ಅಭಿವೃದ್ಧಿ ಕಾರ್ಯ ಮಾತ್ರ ನಡೆದಿಲ್ಲ. ತಕ್ಷಣ ಸಭೆ ಕರೆದು ಕಾರ್ಯಯೋಜನೆ ಸಿದ್ಧಪಡಿಸಬೇಕು’ ಎಂದು ಸಮಿತಿಯ ಸದಸ್ಯರೂ ಆಗಿರುವ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದರು.

‘ಹಿಂದಿನ ವೈಭವ ಮರುಕಳಿಸುವಂತೆ ಮಠದ ಅಭಿವೃದ್ಧಿಗೆ ಯಾವೆಲ್ಲ ಯೋಜನೆಗಳನ್ನು ಹಾಕಿಕೊಳ್ಳಬಹುದು ಎಂದು ಸಭೆಯಲ್ಲಿ ಚರ್ಚಿಸೋಣ. ಪಟ್ಟಿ ಸಿದ್ಧಪಡಿಸಿ ಕಾರ್ಯರೂಪಕ್ಕೆ ತರೋಣ. ಸ್ಥಳೀಯ ರಾಜಕಾರಣಿಗಳೇ ಸಮಿತಿಯಲ್ಲಿರುವುದರಿಂದ ಯೋಜನೆ ಶೀಘ್ರವಾಗಿ ಅನುಷ್ಠಾನಗೊಳ್ಳಲಿದೆ. ಮೂಜಗಂ ಅವರು ಮಾಡಿರುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋದಾಗ ಮಾತ್ರ, ಮಠದಿಂದ ನಡೆಯುವ ಕಾರ್ಯಕ್ರಮಗಳು ಅರ್ಥ ಪಡೆಯುತ್ತವೆ. ಮಠಾಧೀಶರಿಗೆ ಇರುವಷ್ಟೇ ಭಕ್ತರಿಗೂ ಶ್ರೀಮಠದ ಜವಾಬ್ದಾರಿಯಿದೆ’ ಎಂದರು.

‘ಶ್ರೀಮಠಕ್ಕೆ, ಶಾಲೆಗೆ ಹಣದ ಕೊರತೆಯಿದೆ ಎಂದರೆ ಮೂರ್ಖತನವಾಗುತ್ತದೆ. ಉನ್ನತ ಸಮಿತಿ ಸಭೆಯಲ್ಲಿ ಎಲ್ಲವನ್ನೂ ಚರ್ಚಿಸಿ, ಅದರಂತೆ ನಡೆಯೋಣ. ಇರುವವರು ಇರಲಿ, ಹೋಗುವವರು ಹೋಗಲಿ. ಶರಣರ ಪುಸ್ತಕಗಳು ಓದುಗರಿಗೆ ದೊರೆಯಲು ಮಠದಲ್ಲಿ ಪ್ರತ್ಯೇಕ ಗ್ರಂಥಾಲಯ ಸ್ಥಾಪಿಸಲು ₹10 ಲಕ್ಷ ಅನುದಾನ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT