ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ-ಸೈತಾನರ ಗುರುತಿಸುವ ಕೆಲಸವಾಗಲಿ: ಸಾಹಿತಿ ಸತೀಶ ಕುಲಕರ್ಣಿ

Last Updated 15 ಏಪ್ರಿಲ್ 2022, 8:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಪತ್ರಕರ್ತರು ಸಮಾಜದಲ್ಲಿನ ಮಾನವೀಯ ಮುಖಗಳನ್ನು ಪರಿಚಯಿಸುವತ್ತ ಹೆಚ್ಚು ಗಮನ ಹರಿಸಬೇಕು. ಹಾಗೆಯೇ, ಸಮಾಜದಲ್ಲಿ ಸಂತ ಮತ್ತು ಸೈತಾನರನ್ನು ಗುರುತಿಸಬೇಕು' ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಕರ್ತ ಡಾ. ಶಿವರಾಮ ಅಸುಂಡಿ ಅವರ 'ಕೋಣನ ಮುಂದೆ ಕಿನ್ನರಿ ಮತ್ತೆರಡು ನಾಟಕ' ಮತ್ತು 'ಚಿತ್ರಂ ಭಳಾರೆ ವಿಚಿತ್ರಂ' ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

'ಸಮಾಜದ ಜವಾಬ್ದಾರಿ ಸ್ಥಾನದಲ್ಲಿರುವ ಪತ್ರಕರ್ತರಿಗೆ ಸೃಜನಶೀಲತೆ ಅತಿಮುಖ್ಯ. ಪ್ರಸ್ತುತ ದಿನಗಳಲ್ಲಿ ಮಾತೇ ಜಗತ್ತನ್ನು ಆಳುತ್ತಿದೆ. ಸುಳ್ಳು ಮೆರೆದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸತ್ಯ ಶೋಧಿಸಿ ಜನರಿಗೆ ತಿಳಿಸುವ ಕಾರ್ಯ ಪತ್ರಕರ್ತರಿಂದ ನಡೆಯಬೇಕಿದೆ' ಎಂದರು.

'ಪತ್ರಕರ್ತರಿಗೆ ವೃತ್ತಿ ಮತ್ತು ಪ್ರವೃತ್ತಿಗಳನ್ನು ಸಮತೋಲನದಿಂದ ಮುಂದುವರಿಸಿಕೊಂಡು ಹೋಗುವುದು ಸವಾಲಿನ ಕೆಲಸ. ಧಾವಂತದ ಇಂದಿನ ದಿನಗಳಲ್ಲಿ ಅವರಲ್ಲಿ ಸೃಜನಶೀಲತೆ‌ ಕಾಣುವುದು ಕಷ್ಟ. ಆದರೆ, ಅಕ್ಷರದ ಬಗ್ಗೆ ಪ್ರೀತಿಯಿದ್ದರೆ ಎಲ್ಲವೂ ಸಾಧ್ಯ. ವೃತ್ತಿ ಒತ್ತಡದ ನಡುವೆಯೇ ಕೆಲವರು ಸಮಯ ನಿಗದಿಪಡಿಸಿಕೊಂಡು ಸೃಜನಶೀಲತೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅಂಥವರಿಂದ ಶಿಸ್ತು ಬದ್ಧ ಕೆಲಸ ಹೊರಹೊಮ್ಮಲು ಸಾಧ್ಯ' ಎಂದು ಅಭಿಪ್ರಾಯಪಟ್ಟರು.

'ಇಂದಿನ ಸಮಾಜಕ್ಕೆ ಬೀದಿ ನಾಟಕಗಳ ಅಗತ್ಯತೆಯು ಸಹ ಸಾಕಷ್ಟು ಇದೆ. ಅವು ಜನರ ಮನಸ್ಸನ್ನು ನೇರವಾಗಿ ನಾಟುವುದರಿಂದ, ಅವುಗಳ ರಚನೆ ಹೆಚ್ಚಬೇಕು' ಎಂದ ಸಾಹಿತಿ ಸತೀಶ, 'ಭಾಷಣಕ್ಕಾಗಲಿ, ಕೃತಿಗಾಗಲಿ‌ ಭಾಷೆಯೇ ಅತಿಮುಖ್ಯ. ಆ ಭಾಷೆಯನ್ನು ಹೇಗೆ ಬಳಸುತ್ತೇವೆ ಎನ್ನುವುದೇ ಸೃಜನಶೀಲನತೆಯ ಗುಟ್ಟು' ಎಂದರು.

ಸಾಹಿತಿ ಮಹಾಂತಪ್ಪ ನಂದೂರು ಮತ್ತು ಪತ್ರಕರ್ತೆ ಎಸ್. ರಶ್ಮಿ ಕೃತಿ ಪರಿಚಯ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ಗಣಪತಿ ಗಂಗೊಳ್ಳಿ, ಕೃತಿಕಾರ ಡಾ. ಶಿವರಾಮ ಅಸುಂಡಿ, ಪುಸ್ತಕ ಪ್ರಕಾಶಕ ಎಂ. ಭೈರೇಗೌಡ ಇದ್ದರು. ಪತ್ರಕರ್ತರಾದ ಸುಶಿಲೇಂದ್ರ ಕುಂದರಗಿ ನಿರೂಪಣೆ, ವಿಜಯಕುಮಾರ ಬೆಳ್ಳೇರಿಮಠ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT