ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಮೇಲೆ ಚರಂಡಿ ನೀರಿನ ಅಬ್ಬರ!

ಆವಾಂತರ ಸೃಷ್ಟಿಸಿದ ಮಳೆ, ಮನೆ ಕುಸಿತ, ಪರದಾಡಿದ ಜನ
Last Updated 9 ಜನವರಿ 2021, 3:20 IST
ಅಕ್ಷರ ಗಾತ್ರ

‌ಹುಬ್ಬಳ್ಳಿ: ನಗರದಲ್ಲಿ ಶುಕ್ರವಾರ ಸಂಜೆ ಮೂರು ಗಂಟೆಗೂ ಹೆಚ್ಚು ಕಾಲ ಸುರಿದ ಅಬ್ಬರದ ಮಳೆ ಭಾರಿ ಆವಾಂತರ ಸೃಷ್ಟಿಸಿತು. ವಿವಿಧ ಬಡಾವಣೆಗಳಲ್ಲಿ ಚರಂಡಿ ನೀರು ಮನೆಯ ಅಂಗಳ ಮತ್ತು ರಸ್ತೆಯ ಮೇಲೆ ಹರಿದಾಡಿದ ಕಾರಣ ಜನ ಪರದಾಡುವಂತಾಯಿತು.

ಸಂಜೆ 4.30ರ ಸುಮಾರಿಗೆ ಗುಡುಗು ಹಾಗೂ ಸಿಡಿಲಿನೊಂದಿಗೆ ಶುರುವಾದ ಮಳೆ ರಾತ್ರಿ 10 ಗಂಟೆಯಾದರೂ ಸುರಿಯುತ್ತಲೇ ಇತ್ತು. ಕಮರಿಪೇಟೆಯಲ್ಲಿ ಮನೆ ಕುಸಿದಿದ್ದು, ಶಿರೂರು ಪಾರ್ಕ್‌ನಲ್ಲಿ ಮರ ನೆಲಕ್ಕುರುಳಿತು. ಟೆಂಡರ್‌ ಶ್ಯೂರ್‌ ರಸ್ತೆಯ ಪಕ್ಕದಲ್ಲಿ ದೊಡ್ಡದಾಗಿ ಅಗೆದಿರುವ ಗುಂಡಿ ತುಂಬಿ ನೀರು ರಸ್ತೆಯ ಮೇಲೆಲ್ಲ ಹರಿದಾಡಿತು.

ಕಾಟನ್‌ ಮಾರ್ಕೆಟ್, ಕೃಷ್ಣಾ ನಗರ, ಬಂಕಾಪುರ, ಚೌಕ್‌, ಅರವಿಂದ ನಗರ, ಉಣಕಲ್‌ ಸಮೀಪದ ಪಿಂಜಾರ ಓಣಿ, ಪಿ.ಬಿ. ರೋಡ್‌ ಸೇರಿದಂತೆ ವಿವಿಧೆಡೆ ಚರಂಡಿ ನೀರು ರಸ್ತೆ ಮೇಲೆ ಹರಿಯಿತು. ಬಹುತೇಕ ಚರಂಡಿಗಳಲ್ಲಿ ಕಸ ತುಂಬಿಕೊಂಡಿದ್ದರಿಂದ ಕಸವೆಲ್ಲ ರಸ್ತೆ ಮೇಲೆ ರಾಶಿಯಾಗಿದ್ದ ಚಿತ್ರಣ ಕಂಡು ಬಂತು. ಪ್ರೆಸಿಡೆಂಟ್‌ ಹೋಟೆಲ್‌ ಮುಂದಿನ ರಸ್ತೆಯಲ್ಲಿ ಮೊಣಕಾಲ ಆಳಕ್ಕೆ ನೀರು ನಿಂತುಕೊಂಡಿತ್ತು.

ಹೊಸೂರು ವೃತ್ತದಿಂದ ವಿಮಾನ ನಿಲ್ದಾಣದ ತನಕ ಸಮತಟ್ಟಾದ ಕಾಂಕ್ರೀಟ್‌ ರಸ್ತೆಯಿದ್ದರೂ, ಅಕ್ಕ–ಪಕ್ಕದ ಚರಂಡಿಗಳಿಂದ ನೀರು ನುಗ್ಗಿ ಬಂದಿದ್ದರಿಂದ ಸವಾರರು ರಸ್ತೆ ಯಾವುದು ಎನ್ನುವುದನ್ನು ಗುರುತಿಸಲು ಪ್ರಯಾಸ ಪಟ್ಟರು. ಗೋಕುಲ ರಸ್ತೆಯ ಎಂ.ಟಿ. ಸಾಗರ ಕೈಗಾರಿಕಾ ಪ್ರದೇಶದಲ್ಲಿ ಮುಖ್ಯ ಒಳಚರಂಡಿ ನೀರು ಕಾರಂಜಿಯಂತೆ ಉಕ್ಕಿದ್ದರಿಂದ ಹೊಲಸು ನೀರೆಲ್ಲ ಸುತ್ತಮುತ್ತಲಿನ ಪ್ರದೇಶಕ್ಕೆ ಹರಿಯಿತು. ಪ್ರಭುದೇವ ಎಂಜಿನಿಯರಿಂಗ್‌ ಅವರ ಫ್ಯಾಕ್ಟರಿ ಆವರಣಕ್ಕೂ ನೀರು ನುಗ್ಗಿತು.

‘ಮಳೆ ಬಂದಾಗಲೆಲ್ಲ ಪ್ರತಿಬಾರಿಯೂ ಇದೇ ಸಮಸ್ಯೆಯಾಗುತ್ತದೆ. ಇದನ್ನು ಸರಿಪಡಿಸಿಕೊಡಿ ಎಂದು ಹಲವು ಬಾರಿ ಪಾಲಿಕೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಪ್ರಭುದೇವ ಎಂಜಿನಿಯರಿಂಗ್‌ ಮಾಲೀಕ ರಾಜು ಪಡದಾಳ ಬೇಸರ ವ್ಯಕ್ತಪಡಿಸಿದರು.

ಮಳೆ ಆರಂಭವಾದ ಕೆಲ ಹೊತ್ತಿನಲ್ಲಿಯೇ ನೀರು ಮನೆಯ ಅಂಗಳಕ್ಕೆ ನುಗ್ಗಿದ್ದರಿಂದ ಆತಂಕಗೊಂಡ ಬಹಳಷ್ಟು ಜನ ಪಾಲಿಕೆಯ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ಸಹಾಯವಾಣಿಯ ಸಿಬ್ಬಂದಿಗೆ ಒಂದು ಗಂಟೆ ನಿರಂತರವಾಗಿ ಕರೆ ಸ್ವೀಕರಿಸುವುದಲ್ಲಿ ನಿರತರಾಗಿದ್ದರು. ಈ ಅವಧಿಯಲ್ಲಿ 50ಕ್ಕಿಂತಲೂ ಹೆಚ್ಚು ದೂರುಗಳು ಬಂದವು. 40ಕ್ಕಿಂತ ಹೆಚ್ಚು ಕರೆಗಳು ಚರಂಡಿ ನೀರಿನ ಸಮಸ್ಯೆಯದ್ದೇ ಇದ್ದವು ಎಂದು ಸಹಾಯವಾಣಿ ಸಿಬ್ಬಂದಿ ತಿಳಿಸಿದರು.

ಕೆರೆ ಪಾಲಾದ ಮತ್ತಷ್ಟು ಚರಂಡಿ ನೀರು

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನವೀಕರಣಗೊಳ್ಳುತ್ತಿರುವ ತೋಳನಕೆರೆಗೆ ಮೊದಲಿನಿಂದಲೂ ಚರಂಡಿ ನೀರು ಹರಿಯುತ್ತಿದೆ. ಇದರಿಂದ ಕೆರೆಯ ಸೌಂದರ್ಯ ಹಾಳಾಗುತ್ತಿದೆ ಎಂದು ಸ್ಥಳೀಯರು ಅನೇಕ ಬಾರಿ ದೂರಿದ್ದರು. ಗುರುವಾರ ನಗರಕ್ಕೆ ಭೇಟಿ ನೀಡಿದ್ದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರಿಗೂ ಈ ಕುರಿತು ದೂರುಗಳು ಬಂದಿದ್ದವು.

ಅತ್ಯಂತ ತುರ್ತಾಗಿ ಚರಂಡಿ ನೀರು ಕೆರೆಗೆ ಹೋಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಮಾರ್ಟ್‌ ಸಿಟಿ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದರು. ಬಳಿಕ ಗುರುವಾರ ಮಧ್ಯಾಹ್ನ ಶಾಸಕ ಅರವಿಂದ ಪಾಟೀಲ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್‌ ಅಹ್ಮದ್ ಕೆರೆಗೆ ಭೇಟಿ ನೀಡಿದ್ದರು. ಆದರೆ, ಜೋರಾಗಿ ಸುರಿದ ಮಳೆಯಿಂದ ವಿಮಾನ ನಿಲ್ದಾಣ ಹಿಂಭಾಗದಿಂದ ನುಗ್ಗಿ ಬಂದ ಚರಂಡಿ ನೀರು ಕೆರೆಯ ಪಾಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT