ಮಂಗಳವಾರ, ಸೆಪ್ಟೆಂಬರ್ 17, 2019
24 °C

ಐದು ದಿನಗಳಿಗೊಮ್ಮೆ ಕುಡಿಯುವ ನೀರು: ಸಚಿವ ಶೆಟ್ಟರ್‌

Published:
Updated:
Prajavani

ಹುಬ್ಬಳ್ಳಿ: ‘ಅವಳಿ ನಗರಕ್ಕೆ ಕನಿಷ್ಠ ಐದು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ನಾಲ್ಕು ವರ್ಷಗಳ ನಂತರ ಭರ್ತಿಯಾಗಿರುವ ಕಲಘಟಗಿ ತಾಲ್ಲೂಕಿನ ನೀರಸಾಗರ ಜಲಾಶಯಕ್ಕೆ ಸೋಮವಾರ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಅವಳಿ ನಗರಗಳಿಗೆ ಪ್ರತಿದಿನ 200ಎಂಎಲ್‌ಡಿ ನೀರು ಅಗತ್ಯವಿದೆ. ಇದರಲ್ಲಿ 40 ಎಂಎಲ್‌ಡಿ ನೀರು ನೀರಸಾಗರದಿಂದ ಹಾಗೂ 160 ಎಂಎಲ್ಎಂ‌ಡಿ ನೀರು ಮಲಪ್ರಭಾ ಜಲಾಶಯದಿಂದ ಪಡೆಯಲಾಗುತ್ತಿದೆ. ಮಲಪ್ರಭಾದಿಂದ ಹೆಚ್ಚುವರಿಯಾಗಿ 40 ಎಂಎಲ್‌ಡಿ ನೀರು ಸರಬರಾಜು ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಡಿಸೆಂಬರ್ ಅಂತ್ಯದೊಳಗೆ ಇದು ಲಭ್ಯವಾದರೆ, ಅವಳಿ ನಗರದ ಎಲ್ಲ ಬಡಾವಣೆಗಳಿಗೆ ಕನಿಷ್ಠ ಮೂರು ದಿನಗಳಿಗೊಮ್ಮೆ ನೀರು ಪೂರೈಸಲಾಗುವುದು’ ಎಂದರು.

‘ಅವಳಿ ನಗರ, ಸುತ್ತಲಿನ 31 ಗ್ರಾಮಗಳು ಹಾಗೂ ಕುಂದಗೋಳ ಪಟ್ಟಣ ಸೇರಿ 2025ನೇ ಇಸ್ವಿ ವೇಳೆಗೆ ಜನಸಂಖ್ಯೆ 13.45 ಲಕ್ಷಕ್ಕೆ ಏರಲಿದೆ. ಆಗ ನಿತ್ಯ 234 ಎಂಎಲ್‌ಡಿ ನೀರು ಬೇಕಾಗುತ್ತದೆ. 2055ರ ವರೆಗೆ ಎಷ್ಟು ನೀರು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ’ ಎಂದು ಹೇಳಿದರು.

‘ಮಲಪ್ರಭಾ ಜಲಾಶಯದಲ್ಲಿ ನೂತನ ಕಾಮಗಾರಿ, ಸವದತ್ತಿಯಿಂದ ಅಮ್ಮಿನಬಾವಿಯವರೆಗೆ ಏರುಕೊಳವೆ ಮಾರ್ಗ, 100 ಎಂಎಲ್ಎಂ‌ಡಿ ಸಾಮರ್ಥ್ಯದ ಜಲಶುದ್ಧೀಕರಣ ಘಟಕ, ರಾಯಾಪುರದಲ್ಲಿ ಜಲಸಂಗ್ರಹಗಾರ, ಧಾರವಾಡದ ಮದಾರ ಮಡ್ಡಿ ಮತ್ತು ಹುಬ್ಬಳ್ಳಿ ಸಾಯಿನಗರದವರೆಗೆ ಏರುಕೊಳವೆ ಮಾರ್ಗ ಮತ್ತು ಮಾಸ್ಟರ್ ಬ್ಯಾಲೆನ್ಸಿಂಗ್ ಜಲ ಸಂಗ್ರಹಾಗಾರ ನಿರ್ಮಾಣ ಸೇರಿ ಒಟ್ಟು ₹ 334 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ಎಲ್ಲಾ 380 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ₹1,100 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಶೀಘ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು.

ಶಾಸಕರಾದ ಪ್ರಸಾದ ಅಬ್ಬಯ್ಯ, ಸಿ.ಎಂ. ನಿಂಬಣ್ಣವರ, ಅಮೃತ್ ದೇಸಾಯಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಜಲಮಂಡಳಿ ಮುಖ್ಯ ಎಂಜಿನಿಯರ್ ಡಿ. ರಾಜು, ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್. ರಾಜಗೋಪಾಲ್ ಇದ್ದರು.

Post Comments (+)