ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಡಿದು ವಾಹನ ಚಾಲನೆ: 3 ದಿನಗಳಲ್ಲಿ ₹9.60 ಲಕ್ಷ ದಂಡ ಸಂಗ್ರಹ!

Published 5 ಆಗಸ್ಟ್ 2024, 15:30 IST
Last Updated 5 ಆಗಸ್ಟ್ 2024, 15:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಮಹಾನಗರದಲ್ಲಿ ಕುಡಿದು ವಾಹನ ಚಲಾಯಿಸಿದವರ ವಿರುದ್ಧ ಸಂಚಾರ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಕಳೆದ ವಾರಾಂತ್ಯದ ಮೂರು ದಿನಗಳಲ್ಲಿ 96 ಪ್ರಕರಣಗಳನ್ನು ದಾಖಲಿಸಿಕೊಂಡು ₹9.60 ಲಕ್ಷ ದಂಡ ಸಂಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮೂರು ಮತ್ತು ಧಾರವಾಡದಲ್ಲಿ ಒಂದು ಸಂಚಾರ ಪೊಲೀಸ್‌ ಠಾಣೆಯಿದ್ದು, ಕಳೆದ ಶುಕ್ರವಾರ, ಶನಿವಾರ ಮತ್ತು ಭಾನುವಾರ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕುಡಿದು ವಾಹನ ಚಲಾಯಿಸುವವರ ಪತ್ತೆಗೆ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದರು. ಉತ್ತರ ಸಂಚಾರ ಠಾಣೆಯಲ್ಲಿ 22, ದಕ್ಷಿಣ ಸಂಚಾರ ಠಾಣೆಯಲ್ಲಿ 22, ಪೂರ್ವ ಸಂಚಾರ ಠಾಣೆಯಲ್ಲಿ 23 ಮತ್ತು ಧಾರವಾಡ ಸಂಚಾರ ಠಾಣೆಯಲ್ಲಿ 29 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಪಿಎಸ್‌ಐ, ಎಎಸ್‌ಐ ಹಾಗೂ ಇಬ್ಬರು ಸಿಬ್ಬಂದಿ ಒಳಗೊಂಡಿರುವ 20ಕ್ಕೂ ಹೆಚ್ಚು ತಂಡ ಕಾರ್ಯಾಚರಣೆ ನಡೆಸಿತ್ತು. ನಗರದ ಹೊರವಲಯದ ಗಬ್ಬೂರು ಬಳಿಯಿರುವ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಹುಬ್ಬಳ್ಳಿ–ಗದಗ ರಸ್ತೆ, ಹುಬ್ಬಳ್ಳಿ–ವಿಜಯಪುರ ರಸ್ತೆ, ಹುಬ್ಬಳ್ಳಿ–ಧಾರವಾಡ ಬೈಪಾಸ್‌ ರಸ್ತೆ ಸೇರಿದಂತೆ ನಗರದ ಕೊಪ್ಪಿಕರ ರಸ್ತೆ, ಕೇಶ್ವಾಪುರ, ಹಳೇಹುಬ್ಬಳ್ಳಿ ಆನಂದನಗರ, ವಿದ್ಯಾನಗರ, ಅಂಚಟಗೇರಿ ಹಾಗೂ ಧಾರವಾಡದ ವಿವಿಧೆಡೆ ಆಲ್ಕೋಮೀಟರ್‌ನಿಂದ ವಾಹನ ಚಾಲಕರ ಪರೀಕ್ಷೆ ನಡೆಸಿದ್ದರು.

‘ದಾಖಲಾದ ಪ್ರಕರಣದಲ್ಲಿ ಶೇ 70 ರಷ್ಟು ಬೈಕ್‌ ಸವಾರರದ್ದಾಗಿದೆ. ಉಳಿದಂತೆ ಲಾರಿ ಚಾಲಕರು, ಆಟೊ ಚಾಲಕರು, ಗೂಡ್ಸ್‌ ವಾಹನ ಚಾಲಕರು ಇದ್ದಾರೆ. ವಿಪರೀತ ಕುಡಿದು ವಾಹನ ಚಲಾಯಿಸಿದವರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿ ವಾರಾಂತ್ಯ ವಿಶೇಷ ಕಾರ್ಯಾಚರಣೆ ನಡೆಸಿ, ಎಚ್ಚರಿಕೆ ನೀಡಲಾಗುವುದು. ಅಗತ್ಯವಿದ್ದರೆ ಚಾಲಕರ ಡಿಎಲ್‌ ರದ್ದು ಮಾಡಲು ಸಾರಿಗೆ ಇಲಾಖೆಗೂ ತಿಳಿಸಲಾಗುವುದು’ ಎಂದು ಸಂಚಾರ ವಿಭಾಗದ ಎಸಿಪಿ ವಿನೋದ ಮುಕ್ತೇದಾರ ತಿಳಿಸಿದರು.

‘ಮದ್ಯ ಕುಡಿದು ವಾಹನ ಚಾಲನೆ ಮಾಡುವುದರಿಂದ ನಗರದ ಹಲವೆಡೆ ಅಪಘಾತಗಳು ಸಂಭವಿಸುತ್ತಿವೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಮೇಲಿಂದ ಮೇಲೆ ನಡೆಯುವ ಅಪಘಾತ ಪ್ರಕರಣಗಳಿಗೆ ಇದು ಸಹ ಒಂದು ಕಾರಣವಾಗಿದೆ. ಆಲ್ಕೋಮೀಟರ್‌ ಸಹಾಯದಿಂದ ಪರೀಕ್ಷೆ ನಡೆಸಿ, ದಾಖಲೆ ಸಮೇತ ಪ್ರಕರಣ ದಾಖಲಿಸಿಕೊಳ್ಳುತ್ತೇವೆ. ನ್ಯಾಯಾಲಯದಲ್ಲಿ ದಂಡ ಪಾವತಿ ಮಾಡಿದ ನಂತರ, ವಾಹನಗಳ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT