ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸಾಯನಿಕ ಪತ್ತೆಗೆ ಜಿಲ್ಲೆಗೊಂದು ಪ್ರಯೋಗಾಲಯ: ಶೋಭಾ ಕರಂದ್ಲಾಜೆ

ದಕ್ಷಿಣ ಭಾರತ ಕೃಷಿ ವಿಜ್ಞಾನ ಕೇಂದ್ರಗಳ ವಿಚಾರ ಕಮ್ಮಟದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ
Last Updated 19 ಜೂನ್ 2022, 11:00 IST
ಅಕ್ಷರ ಗಾತ್ರ

ಧಾರವಾಡ: ‘ಭಾರತದ ರೈತರ ಬೆಳೆಗಳು ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಬೇಕೆಂದರೆ ರಾಸಾಯನಿಕ ಶೇಷ ಕನಿಷ್ಠ ಮಟ್ಟದಲ್ಲಿರಬೇಕು. ಇದನ್ನು ಖಾತ್ರಿ ಪಡಿಸಿಕೊಳ್ಳಲು ಜಿಲ್ಲೆಗೊಂದು ಪ್ರಯೋಗಾಲಯ ಪ್ರಾರಂಭಿಸುವ ಚಿಂತನೆ ಇದೆ’ ಎಂದು ಕೇಂದ್ರ ರಾಜ್ಯ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದಸಾವಯವ ಮತ್ತು ನೈಸರ್ಗಿಕ ಕೃಷಿಯ ಸೂಕ್ತ ತಾಂತ್ರಿಕತೆಗಳ ಮೂಲಕ ಸಮಗ್ರ ಕೃಷಿ ಪದ್ಧತಿಯ ಸಶಕ್ತೀಕರಣ ವಿಷಯ ಕುರಿತು ದಕ್ಷಿಣ ಭಾರತದ ಕೃಷಿ ವಿಜ್ಞಾನ ಕೇಂದ್ರಗಳ ವಲಯ ಮಟ್ಟದ ವಿಚಾರ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ರೈತರ ಆದಾಯ ದ್ವಿಗುಣಗೊಳ್ಳಬೇಕಾದರೆ ದೇಶದ ಮಹಾನಗರಗಳ ಜನರ ಬೇಡಿಕೆ ಹಾಗೂ ಜಾಗತಿಕ ಬೇಡಿಕೆಗಳನ್ನು ಈಡೇರಿಸುವಂತಿರಬೇಕು. ಜಾಗತಿಕ ಮಟ್ಟದಲ್ಲಿ ರಾಸಾಯನಿಕ ಮುಕ್ತ ಆಹಾರಕ್ಕೆ ವ್ಯಾಪಕ ಬೇಡಿಕೆ ಇದೆ. ಆದರೆ ಶೇ 100ರಷ್ಟು ನೈಸರ್ಗಿಕ ಕೃಷಿಯನ್ನು ತಕ್ಷಣ ಅಳವಡಿಸಿಕೊಂಡರೆ ಶ್ರೀಲಂಕಾ ಸ್ಥಿತಿ ಇಲ್ಲಿಯೂ ಎದುರಾಗುವ ಅಪಾಯವಿದೆ. ಹೀಗಾಗಿ ಕಡಿಮೆ ರಾಸಾಯನಿಕ ಬಳಕೆ ಮತ್ತು ಬೆಳೆಗಳಲ್ಲಿ ಅವುಗಳ ಶೇಷ ಉಳಿದಯದಂತೆ ಬಳಸುವ ತಂತ್ರಗಳನ್ನು ರೈತರಿಗೆ ತಿಳಿಸುವ ಕೆಲಸವನ್ನು ಕೃಷಿ ವಿವಿ, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಮೂಲಕ ನಡೆಯಬೇಕಿದೆ’ ಎಂದರು.

‘ಜಾಗತಿಕ ಆಹಾರ ಬೇಡಿಕೆ ಈಡೇರಿಸುವ ಸಾಮರ್ಥ್ಯ ಭಾರತಕ್ಕಿದೆ ಆದರೆ ರಾಸಾಯನಿಕ ಬಳಕೆಯ ಸರಿಯಾದ ಜ್ಞಾನವನ್ನು ನೀಡಬೇಕಿದೆ. ಕೃಷಿ ಕುರಿತ ಕಾನೂನುಗಳು ದೇಶದಲ್ಲಿ ಪುಸ್ತಕದಲ್ಲಿವೆಯೇ ಹೊರತು, ಜಾರಿಗೆ ಬಾರದಿರುವುದು ನಮಗಿರುವ ಅವಕಾಶ ಕೈಗೆಟುಕದಂತಾಗಿದೆ. ಹೀಗಾಗಿ ಅಧಿಕಾರಿಗಳು ಕೇವಲ ಸಬ್ಸಿಡಿ ವಿತರಿಸಲು ಸೀಮಿತವಾಗದೆ, ರೈತರ ಆದಾಯ ದ್ವಿಗುಣಗೊಳಿಸುವ ಮಾರ್ಗೋಪಾಯಗಳನ್ನು ತಿಳಿಸಲು ಹೊಸ ತಾಂತ್ರಿಕತೆಯನ್ನು ಅವರಿಗೆ ಪರಿಚಯಿಸುವ ಕೆಲಸ ಆಗಬೇಕು’ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಕೃಷಿ ಸಂಶೋಧನಾ ಮತ್ತು ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಟಿ.ಮೋಹಪಾತ್ರ ಮಾತನಾಡಿ, ‘ಉತ್ತಮ ಕೃಷಿ ವಾತಾವರಣ, ಆಧುನಿಕ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳುವ ರೈತರು, ಭವಿಷ್ಯದ ದೃಷ್ಟಿಕೋನದಿಂದ ನೀತಿಗಳನ್ನು ರೂಪಿಸುತ್ತಾ ಮುನ್ನುಗ್ಗುತ್ತಿರುವ ಸರ್ಕಾರ ಕರ್ನಾಟಕದ್ದು. ಇಂಥ ಅವಕಾಶಗಳನ್ನು ಕೃಷಿ ಇಲಾಖೆ ಬಳಸಿಕೊಂಡು ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಹವಾಮಾನ ವೈಪರೀತ್ಯ ಎದುರಿಸುವ ಬೆಳೆಗಳನ್ನು ಹೆಚ್ಚು ಪರಿಚಯಿಸುವ ಅಗತ್ಯ ಇಂದು ಹೆಚ್ಚಿದೆ. ಜತೆಗೆ ವೈವಿದ್ಯಮಯ ಆಹಾರ ಪದಾರ್ಥಗಳನ್ನು ಬೆಳೆಯುವ ಕೌಶಲಗಳನ್ನೂ ನಮ್ಮ ರೈತರು ಅಳವಡಿಸಿಕೊಂಡಲ್ಲಿ ಆದಾಯ ಹೆಚ್ಚಳವಾಗುವಲ್ಲಿ ಸಂಶಯವಿಲ್ಲ’ ಎಂದರು.

ಕೃಷಿ ಸಚಿವ ಬಿ.ಸಿ.ಪಾಟೀಲ, ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಕೃಷಿ ವಿಸ್ತರಣೆಯ ಉಪ ಮಹಾನಿರ್ದೇಶಕ ಡಾ. ಎ.ಕೆ.ಸಿಂಗ್ ಮಾತನಾಡಿದರು. ವೆಂಕಟಸುಬ್ರಹ್ಮಣಿಯನ್, ಕೃಷಿ ವಿವಿ ಕುಲಪತಿ ಡಾ. ಎಂ.ಬಿ.ಚೆಟ್ಟಿ ಇದ್ದರು.

ಕಾರ್ಯಕ್ರಮದಲ್ಲಿ ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆ ಅವರಿಗೆ ಕೃಷಿ ಸಮೃದ್ಧಿ ಪ್ರಶಸ್ತಿ ಹಾಗೂ ಕೇರಳದ ಪಿ.ಟಿ. ಸುಶಮ್ಮ ಅವರಿಗೆ ಅತ್ಯುತ್ತಮ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ನಾಲ್ಕು ದಿನಗಳ ಕಮ್ಮಟದಲ್ಲಿ ಕರ್ನಾಟಕ, ಕೇರಳ ಹಾಗೂ ಲಕ್ಷದ್ವೀಪದ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು, ರೈತರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT