ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಶಕ್ತಿಯಿಂದ ದೇಶದ ಆರ್ಥಿಕ ಅಭಿವೃದ್ಧಿ

ಲೆಕ್ಕ ಪರಿಶೋಧಕ ವಿದ್ಯಾರ್ಥಿಗಳಿಗೆ ಎರಡು ದಿನಗಳ ಸಮಾವೇಶಕ್ಕೆ ಚಾಲನೆ
Last Updated 1 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 50ರಷ್ಟು ಜನ 32 ವರ್ಷ ವಯಸ್ಸಿನ ಒಳಗಿನವರು ಇದ್ದಾರೆ. ಅವರೆಲ್ಲರೂ ನಿಶ್ಚಿತ ಗುರಿ, ಪರಿಶ್ರಮ ಪಟ್ಟರೆ ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತದೆ ಎಂದು ಭಾರತ ಲೆಕ್ಕ ಪರಿಶೋಧಕರ ಸಂಘದ ವಿದ್ಯಾರ್ಥಿ ಘಟಕದ ದಕ್ಷಿಣ ವಲಯದ ಮುಖ್ಯಸ್ಥೆ ರೇವತಿ ಎಸ್‌. ರಘುನಾಥನ್‌ ಅಭಿಪ್ರಾಯಪಟ್ಟರು.

ಶ್ರೇಯ ಮಾರ್ಗ ಸಂಸ್ಥೆಯು ನವದೆಹಲಿಯ ಭಾರತ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ, ಹುಬ್ಬಳ್ಳಿ ಮತ್ತು ಬೆಳಗಾವಿ ಶಾಖೆಗಳ ಸಹಯೋಗದಲ್ಲಿ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಎರಡು ದಿನಗಳ ಲೆಕ್ಕ ಪರಿಶೋಧಕ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಅವರು ಮಾತನಾಡಿದರು.

’ಭವಿಷ್ಯದಲ್ಲಿ ಸಿ.ಎ. (ಲೆಕ್ಕ ಪರಿಶೋಧನೆ) ಆಗಲು ಬಯಸುವ ವಿದ್ಯಾರ್ಥಿಗಳು ಈಗಿನಿಂದಲೇ ಸಂವಹನ ಕೌಶಲ, ಜ್ಞಾನ ಹಂಚಿಕೊಳ್ಳುವ ವಿಧಾನ, ನಿರಂತರ ಓದು ರೂಢಿಸಿಕೊಳ್ಳಬೇಕು. ಬಹುತೇಕ ವಿದ್ಯಾರ್ಥಿಗಳಿಗೆ ತಮ್ಮ ಮುಂದಿರುವ ಪರೀಕ್ಷೆ ಪಾಸ್‌ ಮಾಡುವುದೇ ಜೀವನದ ದೊಡ್ಡ ಗುರಿಯಾಗಿದೆ. ಈ ಗುರಿಯ ಜೊತೆಗೆ ನಿರ್ಮಲಾ ಸೀತಾರಾಮನ್‌ ಅವರ ರೀತಿಯಲ್ಲಿ ಸಾಧನೆ ಮಾಡುವ ದೊಡ್ಡ ಗುರಿ ಇಟ್ಟುಕೊಳ್ಳಬೇಕು. ಸ್ವಾಮಿ ಚಿನ್ಮಯಾನಂದ ಅವರು ಜೀವನದಲ್ಲಿ ಕಠಿಣ ಗುರಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ. ಗುರಿ ಕಠಿಣವಾಗಿದ್ದಾಗ ದೊಡ್ಡ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ‘ ಎಂದರು.

’ಶಿಸ್ತು, ವೃತ್ತಿಪರತೆ, ನಿರಂತರ ಓದು, ಸ್ವಂತ ನಿರ್ಧಾರ ತೆಗೆದುಕೊಳ್ಳುವ ಛಾತಿ ಮತ್ತು ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದನ್ನು ಈಗಿನಿಂದಲೇ ರೂಢಿಸಿಕೊಳ್ಳಬೇಕು‘ ಎಂದು ಸಲಹೆ ನೀಡಿದರು.

ಉದ್ಘಾಟನೆ ಬಳಿಕ ನಡೆದ ಮೊದಲ ಗೋಷ್ಠಿಯಲ್ಲಿ ಮಾತನಾಡಿದ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ತಮ್ಮ ಮಾತಿನುದ್ದಕ್ಕೂ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.

’ಅಸಾಧ್ಯವಾಗಿದ್ದನ್ನು ಸಾಧ್ಯವಾಗಿಸುವುದು ವ್ಯಕ್ತಿಯಿಂದ ಮಾತ್ರ ಸಾಧ್ಯ. ಜೀವನದಲ್ಲಿ ಯಾರಿಗೂ ಕೆಟ್ಟದ್ದನ್ನು ಮಾಡುವುದಿಲ್ಲ ಎಂದು ಈಗಲೇ ನಿರ್ಧರಿಸಿ. ಅದರಂತೆ ನಡೆದುಕೊಳ್ಳಿ. ನಾವೆಲ್ಲರೂ ಬಹಿರಂಗ ಶುದ್ದಿ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ಅಂತರಂಗದ ಶುದ್ದಿ ಕಾಪಾಡಿಕೊಳ್ಳಲು ನೀಡಬೇಕು. ಭವಿಷ್ಯದ ಭಾರತವನ್ನು ನಿರ್ಧರಿಸುವ ಭಾವಿ ಲೆಕ್ಕ ಪರಿಶೋಧಕರು ಅಂತರಂಗದ ಶುದ್ಧಿಗೆ ಆದ್ಯತೆ ಕೊಡಬೇಕು. ಭಾರತದ ಘನತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಸಿ.ಎ.ಗಳು ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಜೆವರೆಗೂ ನಡೆದ ಸಮಾವೇಶದಲ್ಲಿ ತಾಂತ್ರಿಕ ವಿಷಯಗಳು ಮತ್ತು ಲೆಕ್ಕ ಪರಿಶೋಧಕರ ಸಮಸ್ಯೆ, ಸವಾಲುಗಳ ಬಗ್ಗೆ, ಹೊಸ ನೀತಿಗಳ ಬಗ್ಗೆ ವಿಷಯ ಪರಣಿತರು ಉಪನ್ಯಾಸ ನೀಡಿದರು.

ಭಾರತ ಲೆಕ್ಕ ಪರಿಶೋಧಕರ ಸಂಘದ ಹುಬ್ಬಳ್ಳಿ ಶಾಖೆಯ ಚೇರ್ಮನ್‌ ಕೆ.ವಿ. ದೇಶಪಾಂಡೆ, ಕಾರ್ಯದರ್ಶಿ ಎಚ್‌.ಎನ್‌. ಅಡಿನವರ, ವಿದ್ಯಾರ್ಥಿ ಘಟಕದ ಚೇರ್ಮನ್‌ ಮಲ್ಲಿಕಾರ್ಜುನ ಪಿಸೆ, ಸಮಾವೇಶದ ಸಂಚಾಲಕಿ ಸುನಿತ್‌ ಎಂ. ಲಕ್ಕುಂಡಿ, ಬೆಳಗಾವಿ ಶಾಖೆಯ ಚೇರ್ಮನ್‌ ಜಯಕುಮಾರ ಎನ್‌. ಪಾಟೀಲ, ಕಾರ್ಯದರ್ಶಿ ನಿತಿನ್‌ ನಿಂಬಾಳ್ಕರ, ಲೆಕ್ಕ ಪರಿಶೋಧಕರಾದ ಎ.ಬಿ. ಗೀತಾ, ಮಡಿವಾಳಪ್ಪ ಎಸ್‌. ತಗಾಡಿ, ಎಂ. ನಟರಾಜ, ಆಡಳಿತ ಮಂಡಳಿ ಸದಸ್ಯರಾದ ಸುಭಾಷ ಪಾಟೀಲ, ಅಮಿತ್‌ ಬಾಬಾಜಿ ಇದ್ದರು. ಸಮಾವೇಶದ ಸಹ ನಿರ್ದೇಶಕ ವಿರೂಪಾಕ್ಷಪ್ಪ ಪಿ. ಹಿಪ್ಪರಗಿ ವಂದನಾರ್ಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT