ಮಂಗಳವಾರ, ಫೆಬ್ರವರಿ 7, 2023
27 °C
ವಿರೋಧ ಪಕ್ಷದವರ ವಿರೋಧದ ನಡುವೆಯೇ ಮೇಯರ್ ಅನುಮತಿ: ಟಿಪ್ಪು ಜಯಂತಿಗೆ ಸಿದ್ಧತೆ

ಸಾರ್ವಜನಿಕ ಕಾರ್ಯಕ್ರಮಕ್ಕೆ ಈದ್ಗಾ ಮೈದಾನ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಈದ್ಗಾ ಮೈದಾನವು ಇದೀಗ ಸಾರ್ವಜನಿಕರಿಗೆ ಮುಕ್ತವಾಗಿದೆ. ಮೈದಾನದಲ್ಲಿ ಟಿಪ್ಪು ಜಯಂತಿ ಸೇರಿದಂತೆ ವಿವಿಧ ಮಹಾ ಪುರುಷರ ಜಯಂತಿ ಆಚರಣೆಗೆ ಕೋರಿ ಬಂದಿದ್ದ ಅರ್ಜಿಗಳನ್ನು ಪಾಲಿಕೆ ಪುರಸ್ಕರಿಸಿದೆ.

ಈ ಕುರಿತು, ಬುಧವಾರ ಉಪ ಮೇಯರ್ ಉಮಾ ಮುಕುಂದ, ಪಾಲಿಕೆಯ ವಿರೋಧ ಪಕ್ಷದ ನಾಯಕ ದೊರೈರಾವ್ ಮಣಿಕುಂಟ್ಲ, ಸಭಾ ನಾಯಕ ತಿಪ್ಪಣ್ಣ ಮಜ್ಜಗಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಿವು ಮೆಣಸಿನಕಾಯಿ, ಸುರೇಶ ಬೇದರೆ, ವಿಜಯಾನಂದ ಶೆಟ್ಟಿ ಅವರೊಂದಿಗೆ ಸಭೆ ನಡೆಸಿದ ಮೇಯರ್ ಈರೇಶ ಅಂಚಟಗೇರಿ, ‘ಪಾಲಿಕೆಯ ಆಸ್ತಿಯಾದ ಮೈದಾನದಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ವಾಣಿಜ್ಯ ಚಟುವಟಿಕೆಗಳಿಗೂ ಅವಕಾಶವಿದೆ’ ಎಂದಿದ್ದಾರೆ.

ಸಮಿತಿ ಶಿಫಾರಸು ಮಾಡಿತ್ತು: ‘ಮೈದಾನದಲ್ಲಿ ಟಿಪ್ಪು, ಕನಕದಾಸ ಹಾಗೂ ಒನಕೆ ಓಬವ್ವ ಜಯಂತಿ ಹಾಗೂ ಕಾಮಣ್ಣ ಪ್ರತಿಷ್ಠಾಪನೆಗೆ ಅನುಮತಿ ಕೋರಿ ಅರ್ಜಿಗಳು ಬಂದಿದ್ದವು. ಈ ಕುರಿತು ನಡೆದ ಸಭೆಯಲ್ಲಿ ವಿರೋಧ ಪಕ್ಷದವರು ಅನುಮತಿಗೆ ವಿರೋಧ ವ್ಯಕ್ತಪಡಿಸಿದರು. ಆದರೆ, ಗಣೇಶೋತ್ಸವ ಸಂದರ್ಭದಲ್ಲಿ ರಚಿಸಿದ್ದ ಸದನ ಸಮಿತಿಯು, ಮೈದಾನವನ್ನು ಎಲ್ಲರಿಗೂ ಮುಕ್ತಗೊಳಿಸುವಂತೆ ಶಿಫಾರಸು ಮಾಡಿತ್ತು. ಅದರಂತೆ, ಅನುಮತಿ ನೀಡಲು ನಿರ್ಧರಿಸಲಾಗಿದೆ’ ಎಂದು ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮೇಯರ್ ತಿಳಿಸಿದರು.

‘ಟಿಪ್ಪು ಜಯಂತಿ ಆಚರಣೆ ಮನವಿಯ ಅರ್ಜಿಯನ್ನು ಹಿಂಪಡೆಯಲು ಅರ್ಜಿದಾರರಿಗೆ ಹೇಳುತ್ತೇವೆ ಎಂದು ವಿರೋಧ ಪಕ್ಷದವರು ಹೇಳಿದ್ದರು. ಆದರೆ, ಯಾರೂ ಅರ್ಜಿ ಹಿಂಪಡೆದಿಲ್ಲ. ಹಾಗಾಗಿ, ಹಿಂದಿನ ನಿರ್ಧಾರದಂತೆ ಅನುಮತಿ ಕೊಟ್ಟಿದ್ದೇವೆ. ಈಗಾಗಲೇ ವರ್ಷದಲ್ಲಿ ನಾಲ್ಕು ದಿನ ಧ್ವಜಾರೋಹಣ ಮತ್ತು ಮುಸ್ಲಿಮರ ಪ್ರಾರ್ಥನೆಗೆ ಮೀಸಲಾಗಿದ್ದ ಮೈದಾನವು ಈ ವರ್ಷ ಗಣೇಶೋತ್ಸವಕ್ಕೂ ಸಾಕ್ಷಿಯಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕಡ್ಡಾಯ ಷರತ್ತಿನೊಂದಿಗೆ ಅನುಮತಿಗೆ ಸೂಚನೆ: ಸಭೆ ಮುಗಿದ ಕೆಲವೇ ತಾಸಿನ ಬಳಿಕ ಮೇಯರ್ ಅವರು ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈಗಾಗಲೇ ಬಂದಿರುವ ಮನವಿಯಂತೆ ಟಿಪ್ಪು ಜಯಂತಿ ಮತ್ತು ಒನಕೆ ಓಬಬ್ಬ ಜಯಂತಿ ಆಚರಣೆಗೆ ₹10 ಸಾವಿರ ಶುಲ್ಕ ಪಾವತಿಸಿಕೊಂಡು, ಕಡ್ಡಾಯ ಷರತ್ತುಗಳೊಂದಿಗೆ ಅನುಮತಿ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಜಯಂತಿಗೆ 20 ಅಡಿ ಉದ್ದ, 30 ಅಡಿ ಅಗಲ ಮೀರದ ಪೆಂಡಾಲ್‌ ಮಾತ್ರ ಇರಬೇಕು. ಟಿಪ್ಪುವಿನ 3–5 ಅಡಿ ಅಳತೆಯ ಚಿತ್ರವನ್ನು ಮಾತ್ರ ಸ್ಥಳದಲ್ಲಿ ಹಾಕಬೇಕು. ಇತರ ಬಾವುಟ ಹಾಗೂ ವಿವಾದಾತ್ಮಕ ಚಿತ್ರಗಳು ಇರಬಾರದು. ಪ್ರತಿಭಟನೆಗೆ ಪ್ರಚೋದನೆ ನೀಡುವ ಕಾರ್ಯಕ್ರಮಗಳಿರಬಾರದು. ಶಾಂತಿ ಮತ್ತು ಸೌಹಾರ್ದದಿಂದ ಜಯಂತಿ ಆಚರಿಸಬೇಕು. ಒಂದು ವೇಳೆ ಗಲಾಟೆಯಾಗಿ ಆಸ್ತಿಪಾಸ್ತಿ ಹಾನಿಯಾದರೆ, ಆಯೋಜಕರೇ ಅದರ ಸಂಪೂರ್ಣ ಹೊಣೆ ಹೊತ್ತುಕೊಂಡು ನಷ್ಟವನ್ನು ಭರಿಸುವುದಾಗಿ ಘೋಷಿಸಿ ಪ್ರಮಾಣಪತ್ರ ನೀಡಬೇಕು. ಕಾರ್ಯಕ್ರಮದ ಬಳಿಕ ಸ್ಥಳವನ್ನು ಸ್ವಚ್ಛಗೊಳಿಸಿ, ಪಾಲಿಕೆಗೆ ವರದಿ ನೀಡಬೇಕು ಎಂದು ಪತ್ರದಲ್ಲಿ ಸೂಚನೆ ನೀಡಿದ್ದಾರೆ.

ಮಧ್ಯಾಹ್ನ 12ಕ್ಕೆ ಜಯಂತಿ: ಅನುಮತಿ ಬೆನ್ನಲ್ಲೇ, ಟಿಪ್ಪು ಜಯಂತಿಗೆ ಮನವಿ ಸಲ್ಲಿಸಿದ್ದ ಎಐಎಂಐಎಂ ಪಕ್ಷದ ಜಿಲ್ಲಾ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ಅವರು, ತಮ್ಮ ಪಕ್ಷದ ಅಧ್ಯಕ್ಷರ ವಿರೋಧ ಲೆಕ್ಕಿಸದೆ, ಗುರುವಾರ ಮಧ್ಯಾಹ್ನ 12 ಗಂಟೆಗೆ ಪಕ್ಷದ ವತಿಯಿಂದಲೇ ಜಯಂತಿ ಆಚರಿಸುವುದಾಗಿ ದೃಢವಾಗಿ ಹೇಳಿದ್ದಾರೆ.

ಎಐಎಂಐಎಂ ಅಧ್ಯಕ್ಷರಿಂದಲೇ ವಿರೋಧ

ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ಕೋರಿ ಮೊದಲಿಗೆ ಅರ್ಜಿ ಕೊಟ್ಟಿದ್ದು ಎಐಎಂಐಎಂ ಪಕ್ಷದವರು. ಆದರೆ, ಮೇಯರ್ ಸಭೆ ಬಳಿಕ ಅದೇ ಪಕ್ಷದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯರೂ ಆಗಿರುವ ನಜೀರ ಅಹ್ಮದ ಹೊನ್ಯಾಳ ಅವರು, ಅನುಮತಿ ಕೊಟ್ಟಿದ್ದಕ್ಕೆ ವಿರೋಧ ವ್ಯಕ್ತಪಡಿಸಿದರು.

‘ಟಿಪ್ಪು ಜಯಂತಿ ಆಚರಣೆಗೆ ನಮ್ಮ ವಿರೋಧವಿಲ್ಲ. ಆದರೆ, ಪವಿತ್ರ ನೆಲವಾದ ಈದ್ಗಾ ಮೈದಾನದಲ್ಲಿ ಜಯಂತಿ ಆಚರಿಸುವುದು ಬೇಡ ಎಂದು ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ. ಆ ಜಾಗ ಹೊರತುಪಡಿಸಿ ಬೇರೆ ಎಲ್ಲಿ ಬೇಕಾದರೂ ಆಚರಿಸಲಿ. ಜಯಂತಿಗೆ ಮನವಿ ಕೊಟ್ಟಿರುವ ಪಕ್ಷದ ಜಿಲ್ಲಾ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ಅವರಿಗೆ ಮನವಿ ಹಿಂಪಡೆಯಲು ಸೂಚಿಸಿದ್ದೇವೆ. ಅವರು ಏನು ಮಾಡುತ್ತಾರೋ ನೋಡೋಣ. ಹಿಂಪಡೆಯದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಮುಂದೆ ನಿರ್ಧರಿಸಲಾಗುವುದು’ ಎಂದು ಹೊನ್ಯಾಳ ಸುದ್ದಿಗಾರರಿಗೆ ತಿಳಿಸಿದರು.

ಒತ್ತಡಕ್ಕೆ ಮಣಿದಿರುವ ಅಧ್ಯಕ್ಷ: ಗುಂಟ್ರಾಳ

‘ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಮನವಿ ಸಲ್ಲಿಸುವಂತೆ ಪಕ್ಷದ ಅಧ್ಯಕ್ಷರೇ ಹೇಳಿದರು. ಈಗ, ಸ್ಥಳೀಯ ಶಾಸಕರು ಮತ್ತು ರಾಜಕೀಯ ಒತ್ತಡಕ್ಕೆ ಮಣಿದು, ಮನವಿ ವಾಪಸ್ ಪಡೆಯಲು ಹೇಳುತ್ತಿದ್ದಾರೆ. ಒಂದು ವಾರ ಸುಮ್ಮನಿದ್ದು, ಈಗ ಯಾಕೆ ಹೇಳುತ್ತಿದ್ದಾರೆ. ಆಚರಣೆಗೆ ಅನುಮತಿ ಸಿಕ್ಕಿರುವ ಕ್ರೆಡಿಟ್ ನನಗೊಬ್ಬನಿಗೇ ಸಿಗುತ್ತದೆ ಎಂದು ಹೀಗೆ ಮಾಡುತ್ತಿದ್ದಾರೆ’ ಎಂದು ಎಐಎಂಐಎಂ ಪಕ್ಷದ ಧಾರವಾಡ ಜಿಲ್ಲಾ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ಪ್ರತಿಕ್ರಿಯಿಸಿದರು.

‘ಪಕ್ಷದವರು ನನ್ನ ವಿರುದ್ಧ ಏನೇ ಕ್ರಮ ಕೈಗೊಂಡರೂ ಪಕ್ಷದ ವತಿಯಿಂದ ನಾನು ಟಿಪ್ಪು ಜಯಂತಿ ಆಚರಿಸುತ್ತೇನೆ. ಕ್ರಮ ಕೈಗೊಳ್ಳುವುದಾದರೆ ಕೈಗೊಳ್ಳಲಿ. ನನಗೂ ಕಾನೂನು ಗೊತ್ತಿದೆ. ನಾನೂ ಹೋರಾಡುತ್ತೇನೆ’ ಎಂದು ಸವಾಲು ಹಾಕಿದರು.

ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ: ಕಿತ್ತೂರ

‘ಮೈದಾನವನ್ನು ಧಾರ್ಮಿಕ ಸೇರಿದಂತೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೂ ಕೊಡುವಂತಿಲ್ಲ. ಮಹಾನಗರ ಪಾಲಿಕೆ ಆಯುಕ್ತರು ಈ ಬಗ್ಗೆ ಎಚ್ಚರ ವಹಿಸಬೇಕಿತ್ತು. ಆದರೆ, ಅವರು ಬಿಜೆಪಿಯವರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ’ ಎಂದು ಹುಬ್ಬಳ್ಳಿಯ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷ ಅಲ್ತಾಫ ಕಿತ್ತೂರ ಬೇಸರ ವ್ಯಕ್ತಪಡಿಸಿದರು.

‘ಹಿಂದೆ ಮೈದಾನದಲ್ಲಿ ಜಾತ್ರೆ ಸೇರಿದಂತೆ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಲವರು ಅನುಮತಿ ಕೋರಿದ್ದರು. ಆದರೆ, ಯಾರಿಗೂ ನೀಡಿರಲಿಲ್ಲ. ಕೇವಲ ಎರಡು ಸಲ ಪ್ರಾರ್ಥನೆ ಮತ್ತು ಎರಡು ಸಲ ಧ್ವಜಾರೋಹಣಕ್ಕೆ ಮಾತ್ರ ಕೋರ್ಟ್ ಅನುಮತಿ ಸಿಕ್ಕಿದೆ. ಇದನ್ನು ಮೀರಿ, ಈ ವರ್ಷ ಅಲ್ಲಿ ಗಣೇಶೋತ್ಸವಕ್ಕೆ ಅನುಮತಿ ಕೊಡಲಾಯಿತು. ಇದೀಗ, ಟಿಪ್ಪು ಜಯಂತಿ ಸೇರಿದಂತೆ ವಿವಿಧ ಜಯಂತಿಗಳಿಗೆ ಅನುಮತಿ ಕೊಟ್ಟಿರುವುದು ತಪ್ಪು. ಇವೆಲ್ಲವನ್ನು ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ’ ಎಂದು ಹೇಳಿದರು.

ಅನುಮತಿಗೆ ವಿಎಚ್‌ಪಿ ವಿರೋಧ

‘ಮೈದಾನದಲ್ಲಿ ಟಿಪ್ಪು ಜಯಂತಿಗೆ ಅನುಮತಿ ನೀಡಿರುವುದಕ್ಕೆ ನಮ್ಮ ವಿರೋಧವಿದೆ. ಪಾಲಿಕೆ ಷರತ್ತುಬದ್ಧ ಅನುಮತಿ ನೀಡುವುದಾಗಿ ಹೇಳಿದೆ. ಹಾಗಾಗಿ, ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಜಯಂತಿ ಆಚರಿಸಲು ಎಐಎಂಐಎಂ ಪಕ್ಷಕ್ಕೆ ಪೊಲೀಸ್ ಅನುಮತಿ ಸಿಗುವುದಿಲ್ಲ. ಹಾಗಾಗಿ, ಆಚರಣೆ ನಡೆಯುವುದು ಅನುಮಾನ’ ಎಂದು ಹುಬ್ಬಳ್ಳಿಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸಂಜು ಬಡಸ್ಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮತಾಂಧನಾದ ಟಿಪ್ಪು ಹಿಂದೂಗಳನ್ನು ಮತಾಂತರ ಮಾಡಿದ್ದಾನೆ. ಆತನಿಂದ ಯಾವುದೇ ಒಳ್ಳೆಯ ಕೆಲಸಗಳಾಗಿಲ್ಲ. ಕಾಂಗ್ರೆಸ್ ಹಾಗೂ ಎಐಎಂಐಎಂ ಪಕ್ಷಗಳು ಮತ ಬ್ಯಾಂಕ್‌ಗಾಗಿ ಟಿಪ್ಪು ಜಯಂತಿ ಆಚರಿಸಲು ಮುಂದಾಗಿವೆ. ಹಳೇ ಹುಬ್ಬಳ್ಳಿಯಲ್ಲಿ ನಡೆದ ಕೋಮು ಗಲಭೆಯಲ್ಲಿ ಎಐಎಂಐಎಂ ಪಕ್ಷದವರು ಭಾಗಿಯಾಗಿರುವ ಶಂಕೆ ಇದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.

ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಬಾರದು ಎಂದು ಪರಿಷತ್‌ ಪದಾಧಿಕಾರಿಗಳು ಬುಧವಾರ ಬೆಳಿಗ್ಗೆ ಮೇಯರ್ ಈರೇಶ ಅಂಚಟಗೇರಿ ಅವರಿಗೆ ಮನವಿ ಸಲ್ಲಿಸಿದರು.

‘ಅನುಮತಿ ಹಿಂದೆ ಚುನಾವಣೆ ಲೆಕ್ಕಾಚಾರ’

‘ವಿರೋಧದ ನಡುವೆಯೂ ಮೇಯರ್ ಅವರು, ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ಕೊಟ್ಟಿರುವುದರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಲೆಕ್ಕಾಚಾರವಿದೆ. ಧರ್ಮಗಳ ನಡುವೆ ಜಗಳ ತಂದು ಲಾಭ ಪಡೆದುಕೊಳ್ಳಲು ಇಂತಹ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ದೊರೈರಾವ್ ಮಣಿಕುಂಟ್ಲ ಅವರು ಮೇಯರ್ ಜೊತೆ ನಡೆದ ಸುದ್ದಿಗೋಷ್ಠಿಯಲ್ಲೇ ಅಸಮಾಧಾನ ವ್ಯಕ್ತಪಡಿಸಿದರು.

‘ಸಭೆಯ ಆರಂಭದಲ್ಲಿ ಬಿಜೆಪಿಯವರೂ ನಮ್ಮ ಮಾತಿಗೆ ದನಿಗೂಡಿಸಿದರು. ತಕ್ಷಣ ಮೇಯರ್ ತಮ್ಮ ಪಕ್ಷದ ನಾಯಕರಿಗೆ ಕರೆ ಮಾಡಿ, ಸಭೆಯಲ್ಲಿದ್ದ ತಮ್ಮ ಪಕ್ಷದವರಿಗೆ ಸೂಚನೆ ಕೊಡಿಸಿದರು. ಆಗ ಎಲ್ಲರೂ, ಮೇಯರ್ ನಿರ್ಧಾರಕ್ಕೆ ತಾವು ಬದ್ಧ ಎಂದರು. ಮೈದಾನದಲ್ಲಿ ಆಚರಿಸುವ ಬದಲು, ಪಾಲಿಕೆಯಲ್ಲೇ ಮಾಡೋಣ. ಬೇಕಿದ್ದರೆ ನಾನೇ ₹5 ಲಕ್ಷ ಕೊಡುವೆ’ ಎಂದರು.

ಆಯುಕ್ತರು ಏನಂತಾರೆ?

ಸಭೆಯ ನಿರ್ಧಾರ ಕುರಿತು, ಮೇಯರ್ ಅವರ ಪತ್ರ ಪರಿಶೀಲಿಸಿದ ಬಳಿಕ ಟಿಪ್ಪು ಜಯಂತಿ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.