ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಭಾರತೀಕರಣಗೊಳ್ಳಬೇಕಿದೆ : ಶಂಕರಾನಂದ ಅಭಿಪ್ರಾಯ

ಭಾರತೀಯ ಶಿಕ್ಷಣ ಮಂಡಲ
Last Updated 25 ಸೆಪ್ಟೆಂಬರ್ 2019, 13:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ದೇಶದ ಶಿಕ್ಷಣ ವ್ಯವಸ್ಥೆಯು ಭಾರತೀಕರಣಗೊಳ್ಳಬೇಕಿದೆ. ತಪ್ಪು ದಾರಿಯಲ್ಲಿ ಬಹಳ ದೂರ ಸಾಗಿರುವ ನಾವು, ಪಥ ಬದಲಿಸಬೇಕಿದೆ’ ಎಂದು ಭಾರತೀಯ ಶಿಕ್ಷಣ ಮಂಡಲದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಂಕರಾನಂದ ಜಿ. ಅವರು ಅಭಿಪ್ರಾಯಪಟ್ಟರು.

ಕೆಎಲ್‌ಇ ಶಿಕ್ಷಣ ಸಂಸ್ಥೆ ಹಾಗೂ ಭಾರತೀಯ ಶಿಕ್ಷಣ ಮಂಡಲದ ಸಹಯೋಗದಲ್ಲಿ ಬುಧವಾರ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ‘ಶಿಕ್ಷಣದಲ್ಲಿ ಭಾರತೀಯತೆ ಮತ್ತು ರಾಷ್ಟ್ರೀಯ ಪುನರುತ್ಥಾನ’ ಸಂಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಅನುಮತಿ ಇಲ್ಲದೆ ಕಲಿಯುವಂತಿಲ್ಲ, ಕಲಿಸುವಂತಿಲ್ಲ ಎಂಬ ಲಾರ್ಡ್ ಮೆಕಾಲೆಯ ಒಂದು ವಾಕ್ಯದ ಆದೇಶ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ನಾಶಗೊಳಿಸಿತು. ನಂತರದ ಸರ್ಕಾರಗಳು ಅದನ್ನು ಅನುಸರಿಸಿದವು. ಇದುವರೆಗೆ ತಪ್ಪು ದಾರಿಯಲ್ಲೇ ನಡೆಯುತ್ತಿದ್ದ ದೇಶ, ಇದೀಗ ತನ್ನ ಮಗ್ಗಲು ಬದಲಿಸಿದೆ’ ಎಂದರು.

‘ರಾಷ್ಟ್ರೀಯ ಶಿಕ್ಷಣ ಹಾಗೂ ತ್ರಿಭಾಷಾ ನೀತಿಯಲ್ಲಿ ಇಂಗ್ಲಿಷ್ ಇರಬಾರದು. ಜಾರ್ಜ್ ಬರ್ನಾಡ್ ಶಾ ಅವೈಜ್ಞಾನಿಕ ಭಾಷೆ ಎಂದ ಇಂಗ್ಲಿಷ್ ಅನ್ನು ಇಂದು ನಾವೆಲ್ಲರೂ ಅಪ್ಪಿಕೊಂಡಿದ್ದೇವೆ. ಸದ್ಯದ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಕಲಿಯುವುದರಲ್ಲಿ ಹಾಗೂ ಕಲಿಸುವುದರಲ್ಲಿ ಯಾರಿಗೂ ಆಸಕ್ತಿ ಇಲ್ಲವಾಗಿದೆ. ಇದರಿಂದಾಗಿಯೇ, ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಾಗಿದೆ’ ಎಂದು ಹೇಳಿದರು.

‘ಶಿಕ್ಷಣ ವ್ಯವಸ್ಥೆ ಭಾರತೀಕರಣಗೊಳ್ಳಬೇಕಾದರೆ ನೀತಿ, ಬದ್ಧತೆ, ಪಠ್ಯಕ್ರಮ ಹಾಗೂ ಮೌಲ್ಯಾಂಕನದಲ್ಲಿ ಬದಲಾವಣೆಗೊಂಡು ಆಧ್ಯಾತ್ಮಿಕರಣವಾಗಬೇಕಿದೆ. ಶಿಕ್ಷಣ ಇರುವುದು ನೌಕರಿಗಲ್ಲ, ಮುಕ್ತಿಗಾಗಿ ಎಂಬ ಅರಿವು ಮೂಡಬೇಕಿದೆ. ವೇದಗಳು, ಉಪನಿಷತ್, ದರ್ಶನಗಳು, ಪುರಾಣ, ರಾಮಾಯಣ ಹಾಗೂ ಮಹಾಭಾರತ ಪಠ್ಯಕ್ರಮದಲ್ಲಿ ಅಳವಡಿಕೆಯಾಗಬೇಕಿದೆ’ ಎಂದರು.

‘ಕಾಲ ನಿರಪೇಕ್ಷ ಹಾಗೂ ಪರೀಕ್ಷಾ ನಿರಪೇಕ್ಷ ಶಿಕ್ಷಣ ಇಂದಿನ ಅಗತ್ಯವಾಗಿದೆ. ಪರೀಕ್ಷೆ ಬದಲು ಮೌಲ್ಯಾಂಕನ ವ್ಯವಸ್ಥೆ ಜಾರಿಗೆ ಬರಬೇಕಿದೆ. ಇದರಿಂದ ಶಿಕ್ಷಕರು ಸಂತೋಷದಿಂದ ಭೋದಿಸಿದರೆ, ಮಕ್ಕಳು ಖುಷಿಯಿಂದ ಕಲಿಯುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ಗುರುಗಳಾದ ಸುರೇಶ ಕುಲಕರ್ಣಿ, ಅಶೋಕ ಚಚಡಿ, ಡಾ. ವಿನೋದ ಅಣ್ಣಿಗೇರಿ, ಹನುಮಂತಪ್ಪ ಉಪ್ಪಾರ, ವಿನಾಯಕ ತಲಗೇರಿ, ಕಮಲ ಮಾತಾಜಿ ಹಾಗೂ ಹೇಮಕ್ಕ ವಾಗ್ಮೋಡಿ ಅವರಿಗೆ ವಿದ್ಯಾರ್ಥಿಗಳು ಪಾದಪೂಜೆ ಮಾಡುವ ಮೂಲಕ, ಗುರುವಂದನೆ ಸಲ್ಲಿಸಿದರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಶಿಕ್ಷಣ ಮಂಡಲದ ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷ ಡಾ. ಸತೀಶ ಜಿಗಜಿನ್ನಿ ಹಾಗೂ ಕಾರ್ಯದರ್ಶಿ ಡಾ. ಶ್ರೀನಿವಾಸ ಬಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT